ಬಿಜೆಪಿಯವರು ಏನುಬೇಕಾದರೂ ಮಾಡಲಿ ನಾನು ಮಾತನಾಡಲ್ಲ ಎಂದ ಡಿಕೆಶಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ, ಹಿಂದೂ ಜಾಗರಣ ವೇದಿಕೆಯಿಂದ ನಡೆಯುತ್ತಿರುವ ಕನಕಪುರ ಚಲೋ ಕುರಿತು ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಬಿಜೆಪಿ ಅವರಿಗೆ ಕನಕಪುರದಲ್ಲಿ ಅಸ್ತಿತ್ವ ಇಲ್ಲ. ಹೀಗಾಗಿ ಅಸ್ತಿತ್ವಕ್ಕಾಗಿ ಇಂದು ಕನಕಪುರಕ್ಕೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರು ಏನು ಬೇಕಾದರೂ ಮಾಡಲಿ. ನಾನೇನು ಮಾತನಾಡುವುದಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಮಾನವ ಧರ್ಮದಲ್ಲಿ ನಂಬಿಕೆ ಇಟ್ಟವನು ನಾನು. ಯಾರು ಬೇಕಾದ್ರು ಅಶಾಂತಿ ವಾತಾವರಣ ಸೃಷ್ಟಿ ಮಾಡಲಿ. ನಾನೇನೂ ಮಾತನಾಡಲ್ಲ. ಬಿಜೆಪಿಯವರು ಅಧಿಕಾರವನ್ನು ಹೇಗೆ ಬೇಕೋ ಹಾಗೆ ದುರುಪಯೋಗ ಮಾಡಿಕೊಳ್ಳಲಿ. ಪ್ರತಿಭಟನೆಗೆ ಎಲ್ಲಿಂದ ಯಾರು ಎಷ್ಟು ಜನರನ್ನು ಕರೆ ತಂದಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರಿಗೆ ಮಂತ್ರಿಯಾಗಬೇಕು ಎನ್ನುವ ಆಸೆಯಿಂದ ಹೀಗೆ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್​​ ವಿರುದ್ಧ ಕಿಡಿಕಾರಿದರು.

ಡಿಸಿಎಂ ಡಾ. ಅಶ್ವಥ್ ನಾರಾಯಣ ಕನಕಪುರ ಕ್ಲೀನ್​​ ಮಾಡುತ್ತೇನೆ ಎಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಇನ್ನು ರಾಮನಗರ, ಕನಕಪುರ, ಚನ್ನಪಟ್ಟಣದಿಂದ ಎಷ್ಟು ಗಾಡಿಗಳಲ್ಲಿ ಜನ ಬಂದಿದ್ದಾರೆ ಎಂಬ ಬಗ್ಗೆ ರಾಮನಗರದ ಮಾಜಿ ಸಚಿವರೇ ನನಗೆ ಮಾಹಿತಿ ನೀಡಿದ್ದಾರೆ. ಏನೋ ಮಾಡಿಕೊಂಡು ಹೋಗುತ್ತೇವೆ ತಪ್ಪಾಗಿ ತಿಳಿಯಬೇಡಿ ಎಂದಿದ್ಧಾರೆ. ಬಿಜೆಪಿ ನಾಯಕರು ರಾಜಕಾರಣ ಮಾಡಲು ಹೊರಟಿದ್ದಾರೆ ಮಾಡಲಿ ಎಂದರು.

ಇನ್ನು ಬಿಜೆಪಿ ನಾಯಕರು ಏನೇ ಮಾತಾಡಿದರು ಸುಮ್ಮನಿರಬೇಕು. ಯಾರು ಗಲಾಟೆ ಮಾಡಬೇಡಿ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಕನಕಾಪುರದ ಜನತೆಗೆ ಮೊದಲೇ ಹೇಳಿದ್ದೇನೆ. ಹಾಗಾಗಿ ನಾನು, ನನ್ನ ತಮ್ಮ ಹಾಗೂ ಕಾರ್ಯಕರ್ತರು ಶಾಂತಿಯುತವಾಗಿರುತ್ತೇವೆ ಎಂದು ತಿಳಿಸಿದರು.

Home add -Advt

ಇದೇ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಆಗಮನದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಕ್ರೈಸ್ತರು ಕೆಂಪೇಗೌಡ ಪ್ರಾಧಿಕಾರಕ್ಕೆ 5 ಎಕರೆ ಜಾಗ ಕೊಟ್ಟಿದ್ದಾರೆ. ಎಲ್ಲರು ಸಹ ಜೀವನ ನಡೆಸಬೇಕು ಅನ್ನೋದು ನನ್ನ ಆಸೆ. ಅದು ಬಿಟ್ಟು ಬಿಜೆಪಿ ಅವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಹೇಳಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button