Kannada NewsKarnataka NewsLatestPolitics

*ರಾಜ್ಯದ ಜನರ ಹಿತ ಕಾಯಲು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವು ನಮ್ಮ ಜನರನ್ನು ಕಾಪಾಡಲೇ ಬೇಕು. ಹೀಗಾಗಿ ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಈಗಾಗಲೇ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇವೆ. ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಬರೆದ ಪತ್ರವನ್ನು ತಲುಪಿಸಿದ್ದೇವೆ. ನೀವು ಶೀಘ್ರ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ಸಂಸತ್ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಸಂಸದರನ್ನು ಭೇಟಿ ಮಾಡುವ ಆಲೋಚನೆ ಇದೆ. ಸರ್ವಪಕ್ಷ ಸಭೆಗೆ ಪ್ರಧಾನಿಗಳು ಸಮಯ ಕೊಟ್ಟಿಲ್ಲ. ತಮಿಳುನಾಡಿನವರು ಅವರದ್ದೇ ಆದ ವಾದಗಳನ್ನು ಮಂಡಿಸುತ್ತಿದ್ದಾರೆ‌.

ಮುಖ್ಯಮಂತ್ರಿಗಳು ಉತ್ತರಿಸುತ್ತಾರೆ

ಕೆ.ಎನ್.ರಾಜಣ್ಣ ಅವರು ಮೂರು ಡಿಸಿಎಂಗಳು ಅವಶ್ಯಕತೆ ಇದೆ ಎನ್ನುವ ಮಾತಿಗೆ “ನನ್ನನ್ನು ಈ ಹುದ್ದೆಗೆ ನೇಮಕ‌ ಮಾಡಿದ್ದು ಮುಖ್ಯಮಂತ್ರಿಗಳು. ಅವರೇ ಇದಕ್ಕೆ ಉತ್ತರ ನೀಡುತ್ತಾರೆ, ರಾಜಣ್ಣ ಅವರು ಏಕೆ ಈ ರೀತಿ ಹೇಳಿಕೆ ಕೊಟ್ಟರೊ ಗೊತ್ತಿಲ್ಲ. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು ಅವರನ್ನೇ ಕೇಳಬೇಕು.

ಕೆ.ಎನ್.ರಾಜಣ್ಣ ಅವರ ಬಳಿ ಮುಖ್ಯಮಂತ್ರಿಗಳು, ಹೈಕಮಾಂಡ್ ಉತ್ತರ ಕೇಳುತ್ತದೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಪತ್ರ ಬರೆದಿದೆ. ನಾನು ಯಾರಿಗೆ ಉತ್ತರ ಕೊಡಬೇಕೋ ಅವರಿಗೆ ಮಾತ್ರ ಕೊಡುತ್ತೇನೆ. ನಾನು ಯಾರಿಗೆ ಉತ್ತರ ಕೇಳಬೇಕೋ ಅವರ ಬಳಿ ಕೇಳುತ್ತೇನೆ, ಯಾವುದೇ ಮುಲಾಜಿಲ್ಲ ನನಗೆ” ಎಂದು ಉತ್ತರಿಸಿದರು.

ಹೈಕಮಾಂಡ್ ಒಂದೇ ಡಿಸಿಎಂ ಎಂದು ಹೇಳಿದ ನಂತರವೂ ಈ ಬೆಳವಣಿಗೆ ಏಕೆ ಎನ್ನುವ ಪ್ರಶ್ನೆಗೆ “ನಾನು ಎರಡು ದಿನಗಳಿಂದ ಹೈದರಾಬಾದ್‌ನಲ್ಲಿ ಎಐಸಿಸಿ ಸಭೆಯಲ್ಲಿ ಇದ್ದೆ, ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು, ಈಗ ತಿಳಿದುಕೊಂಡು ಹೇಳುವೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣವಿಲ್ಲ

ಬಿ.ಕೆ.ಹರಿಪ್ರಸಾದ್ ಅವರ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಣ ಮೌನ ತಾಳಿದ ಕಾರಣ ಡಿಸಿಎಂ ವಿವಾದ ಎದ್ದಿದೆ ಎನ್ನುವ ಪ್ರಶ್ನೆಗೆ “ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ, ನಿಮ್ಮ ಬಳಿ ಇರಬೇಕು”. ನಿಮಗೆ ತಲೆ ಕೆಟ್ಟಿರಬೇಕು, ನೀವೆ ಬಣ ಸೃಷ್ಟಿ ಮಾಡುತ್ತಿದ್ದೀರಿ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಯಾವುದೇ ಬಣಕ್ಕೆ ನಾನು ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಎಸ್.ಎಂ.ಕೃಷ್ಣ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಬಣ ಮಾಡಬಹುದಿತ್ತು, ನನ್ನದು ಕಾಂಗ್ರೆಸ್ ಬಣ. ಬಣದ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ” ಎಂದು ಸಿಡಿಮಿಡಿಗೊಂಡರು.

ಬೆಂಗಳೂರಿನ ಕಸಕ್ಕೆ ಪರ್ಯಾಯ ವ್ಯವಸ್ಥೆ

“ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿರುವ ಕಸಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರಣಕ್ಕೆ, ಗ್ರೇಟರ್ ಹೈದರಾಬಾದ್ ಮಹಾನಗರ‌ಪಾಲಿಕೆ ನಿರ್ವಹಣೆ ಮಾಡುವ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕ ವೀಕ್ಷಣೆಗೆ ಶನಿವಾರ (ಸೆ.16) ಭೇಟಿ ನೀಡಲಾಗಿತ್ತು.

ಬೆಂಗಳೂರಿನ ಹೊರ ವಲಯದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿತ್ತು, ಈಗ ಸುತ್ತಲಿನ ಜನವಸತಿ ಪ್ರದೇಶಗಳು ಬೆಳೆದು ಜನರು ಕಷ್ಟ ಪಡುತ್ತಿದ್ದಾರೆ. ಅಂತರ್ಜಲ, ಪರಿಸರ ಹಾಳಾಗುತ್ತಿದೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಹೇಗೆ ಮಾಡಬಹುದು ಎಂದು ಅಧ್ಯಯನ ನಡೆಸಲು ಭೇಟಿ ನೀಡಲಾಯಿತು. ಕಸವನ್ನು ರಸ ಮಾಡುವ, ವಿದ್ಯುತ್ ತಯಾರಿಸುವ ತಂತ್ರಜ್ಞಾನ ಇದ್ದು ಅದನ್ನು ರಾಜ್ಯದಲ್ಲಿ ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಯೋಜನೆ ರೂಪಿಸಲಾಗುವುದು.”

ಕರ್ನಾಟಕ ಮಾಡೆಲ್ ದೇಶಕ್ಕೆ ಮಾದರಿ

ಕರ್ನಾಟಕದಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಯಶಸ್ವಿಯಾಗಿದ್ದೇವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ದೇಶಕ್ಕೆ ಮಾದರಿಯಾಗಿದೆ‌, ತೆಲಂಗಾಣ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮಾದರಿಯಾಗಲಿವೆ.

ಇದೇ ವೇಳೆ ರಾಜ್ಯದ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ ಉಪಮುಖ್ಯಮಂತ್ರಿಗಳು “ರಾಜ್ಯಕ್ಕೆ ಒದಗಿ ಬಂದಿರುವ ಎಲ್ಲಾ ವಿಘ್ನ, ಸಂಕಷ್ಟಗಳು ನಿವಾರಣೆಯಾಗಲಿ” ಎಂದು ಪ್ರಾರ್ಥಿಸಿದರು.

*ಕಾವೇರಿ, ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಬದ್ದ: ಡಿಸಿಎಂ ಡಿ.ಕೆ.ಶಿವಕುಮಾರ್*

“ಕಾವೇರಿ ನೀರು ಹರಿಸಬೇಕೊ, ಬೇಡವೋ ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ, ಮಂಗಳವಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹಾಕುತ್ತಿದ್ದೇವೆ ನಂತರ ತೀರ್ಮಾನ ಮಾಡಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸೋಮವಾರ ಆದೇಶ ನೀಡಿದ ನಂತರ ಸದಾಶಿವನಗರದ ನಿವಾಸದಲ್ಲಿ ಸೋಮವಾರ ರಾತ್ರಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು.

ದೆಹಲಿಗೆ ಯಾವ ಸಮಯದಲ್ಲಾದರೂ ಭೇಟಿ ನೀಡಲು ನಾವು ತಯಾರಿದ್ದೇವೆ. ರಾಜ್ಯದ ಎಂಪಿಗಳು ಹಾಗೂ ಮುಖ್ಯಮಂತ್ರಿಗಳು ಶೀಘ್ರವೇ ಒಂದು ದಿನಾಂಕ ನಿಗದಿ ಮಾಡೋಣ ಎಂದು ಹೇಳಿದ್ದಾರೆ. ರಾಜ್ಯದ ಎಂಪಿಗಳು ಎಲ್ಲಾ ರಾಜಕಾರಣ ಬಿಟ್ಟು ನಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ. 

ನಾವು ನೀರನ್ನು ಹೆಚ್ಚು ಬಿಟ್ಟಿಲ್ಲ, ಕಳೆದ ಎರಡು ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ನೀರನ್ನು ಹರಿಸಿದ್ದೇವೆ. ಕಾವೇರಿ ನೀರು ನೀರು ನಿರ್ವಹಣಾ ಸಮಿತಿಯವರು 5 ಸಾವಿರ ಕ್ಯೂಸೆಕ್ಸ್ ಬಿಡುಗಡೆ ಮಾಡಿ ಎಂದು ಹೇಳುತ್ತಾರೆ, ಆದರೆ ಅಲ್ಲಿಗೆ ತಲುಪುವುದು ಕೇವಲ 2 ರಿಂದ 3 ಸಾವಿರ ಕ್ಯೂಸೆಕ್ಸ್ ಮಾತ್ರ. “ಪ್ರಧಾನಿ ಕಚೇರಿಗೆ ಎರಡು  ಬಾರಿ ಪತ್ರ ಬರೆದಿದ್ದೇವೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕಾಯುತ್ತೇವೆ”.

ಮಾಜಿ ಪ್ರಧಾನಿ ದೇವೆಗೌಡರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕಾನೂನು ಹೋರಾಟ ಮತ್ತು ಉಭಯ ರಾಜ್ಯಗಳ ಸಭೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ” ಅವರ ಸಲಹೆಯಲ್ಲಿ ಅರ್ಥವಿದೆ, ಗೌರವವಿದೆ. ಅವರ ಸಲಹೆಗಳನ್ನು ಕೇಳುತ್ತೇವೆ. ಮೇಕೆದಾಟು ಯೋಜನೆಯೇ ಇದಕ್ಕೆ ಪರಿಹಾರ. ಸುಪ್ರೀಂ ಕೋರ್ಟ್ ತಾಂತ್ರಿಕ ವಿಚಾರಗಳಲ್ಲಿ ನಾವು ತಲೆಹಾಕುವುದಿಲ್ಲ ಎಂದು ಹೇಳಿದ ಕಾರಣ ಕೇಂದ್ರ ಜಲ ಆಯೋಗದ ಬಳಿ ಹೋಗಬೇಕಾಯಿತು.

ಬೊಮ್ಮಾಯಿ ಅವರು ನೀರು ಬಿಡುಗಡೆ ಮಾಡುವುದು ಬೇಡ ಸುಪ್ರೀಂಕೋರ್ಟ್‌ಗೆ ಹೋಗಿ ಎಂದು ಟ್ಚೀಟ್ ಮಾಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ “ಹೌದು ಅವರು ಹೇಳುವುದು ಸರಿ ಇದೆ. ನೀರು ಬಿಡದೆ ಇದ್ದರೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುತ್ತದೆ, ಸಮಿತಿಯ ಮಾತು ಪಾಲಿಸದವರು ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದಾಗ ನಮ್ಮ ವಾದ ಬಿದ್ದು ಹೋಗುತ್ತದೆ”

ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್ ಇದೆ ಎಂದು ಹೇಳುತ್ತಾರೆ ಅಷ್ಟೇ. ಆದರೆ ನೀರಿನ ಹಂಚಿಕೆಯ ಬಗ್ಗೆಯೇ ಸೂತ್ರ ಹೊಂದಾಣಿಕೆಯಾಗಿಲ್ಲದೆ ಹೇಗೆ ಮುಂದುವರೆಯುವುದು? “ರಾಜ್ಯವೂ ಉಳಿಯ ಬೇಕು ಹಾಗೂ ಆದೇಶ ಉಲ್ಲಂಘನೆ ಆಗದಂತೆಯೂ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಕಾನೂ‌ನು ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ”

“ನೀರನ್ನು ಬಿಡದೆ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದರೆ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಈ ಸಮಸ್ಯೆಯನ್ನು  ಬಗೆಹರಿಸುವ ಕುರಿತು ಯೋಚಿಸುತ್ತೇವೆ” ಎಂದು ಹೇಳಿದರು. 

“ಸುಪ್ರೀಂ ಕೋರ್ಟಿನಲ್ಲಿ ಬಲವಾಗಿ ವಾದ ಮಂಡಿಸುತ್ತೇವೆ, ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಹೇಗಿದೆ ಎಂದು ಅವಲೋಕಿಸಿ, ಆನಂತರ ತೀರ್ಪು ನೀಡಿ ಎಂದು ಮನವಿ ಮಾಡುತ್ತೇವೆ.

ನಾನು ಸಹ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದೇನೆ, ತಮಿಳುನಾಡಿನವರು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಮಳೆ ಬೀಳದ ಪರಿಣಾಮ ನೀರಿನ ಹರಿವು ಕಡಿಮೆಯಾಗಿದೆ, ಕುಡಿಯುವ ನೀರಿಗೆ ತೊಂದರೆಯಾಗುತ್ತದೆ  ಎಂಬುದನ್ನು ಮನವರಿಕೆ ಮಾಡುತ್ತೇವೆ.

*ಕುಡಿಯುವ ನೀರಿಗೆ ಆದ್ಯತೆ*

ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ, ಇದಕ್ಕೆ ಸರ್ಕಾರದ ಮೊದಲ ಆದ್ಯತೆ, ನಂತರ ರೈತರ ಬೆಳೆಗಳಿಗೆ ನೀರು ಹರಿಸಲಾಗುವುದು. ರೈತರು ಸಹ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಎಲ್ಲದಕ್ಕೂ ಕಾದು ನೋಡಬೇಕಿದೆ.

*ಅವಘಡಗಳು ನಡೆಯದಂತೆ ಗಣೇಶೋತ್ಸವ ಆಚರಣೆಗೆ ಸೂಚನೆ*

ಗಣೇಶೋತ್ಸವದ ಸಂದರ್ಭದಲ್ಲಿ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಜರುಗಿದ್ದವು, ಈ ಬಾರಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇವೆ.

ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಾದ ಆದೇಶ ನೀಡಲಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಭಾರಿ ಮೆರವಣಿಗೆಗಳಿಗೆ ಅವಕಾಶ ನೀಡದೆ ಸ್ಥಳವಾಕಾಶ ನೋಡಿಕೊಂಡು ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ.

Related Articles

Back to top button