*ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಕೇರಳ ಮೂಲದ ಜೈ ಹಿಂದ್ ಚಾನೆಲ್ ಎಂಡಿ ಹಾಗೂ ತಮಗೆ ಸಿಬಿಐ ನೋಟಿಸ್ ಜಾರಿ ಮಾಡಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ಸಿಬಿಐನವರೂ ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ, ಸೇರಿದಂತೆ ಅನೇಕರಿಗೆ ನೊಟೀಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದ ಮೇಲೆ ಈ ನೊಟೀಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಉದ್ದೇಶ ಏನು ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದರು.
ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ ಸಿಬಿಐ ಯಾಕೆ ನೊಟೀಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐ, ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ನನಗಿರುವ ಕಾನೂನಿನ ಅರಿವು.
ನನ್ನ ಸಂಸ್ಥೆ, ನನ್ನ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು, ನನ್ನ ಸ್ನೇಹಿತರು ಸೇರಿದಂತೆ ಹಲವರಿಂದ ಮಾಹಿತಿ ಕೇಳುತ್ತಿದ್ದಾರೆ. ಮೊದಲು ಈ ರೀತಿ ಮಾಡಿ ನಂತರ ಅವರು ನನಗೆ ನೇರವಾಗಿ ನೊಟೀಸ್ ನೀಡುತ್ತಾರೆ.
ಅವರು ಏನು ಬೇಕಾದರೂ ಮಾಡಲಿ. ನನ್ನನ್ನು ಜೈಲಿಗೆ ಕಳಿಸುವ ಬಗ್ಗೆ ಅನೇಕ ಬಿಜೆಪಿ ನಾಯಕರು ಹಿಂದೆ ಹೇಳಿದ್ದರು. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಆಹ್ವಾನ ನೀಡಿದ್ದೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ” ಎಂದು ತಿಳಿಸಿದರು.
10% ತನಿಖೆಯೂ ಮಾಡಿರಲಿಲ್ಲ:
ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ದಾಖಲೆ ನೀಡಿದ್ದೆ. ಅವರು 10 % ಕೂಡ ತನಿಖೆ ಮಾಡಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ 90% ತನಿಖೆ ಮುಗಿದಿದೆ ಎಂದು ಹೇಳಿದ್ದರು. ಯಾವ ಲೆಕ್ಕಾಚಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಏನಾದರೂ ಮಾಡಲಿ. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅಹ್ಮದ್ ಪಟೇಲ್ ಅವರೇ ಇಂದು ನಮ್ಮ ಜತೆ ಇಲ್ಲ. ಆದರೂ ನನಗೆ ಕಿರುಕುಳ ಮುಂದುವರೆಸಿದ್ದಾರೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತು. ಕಾನೂನು ಇದೆ, ನನ್ನ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುತ್ತೇನೆ” ಎಂದು ತಿಳಿಸಿದರು.
ಮಾಧ್ಯಮದ ವರದಿ ಸುಳ್ಳು:
ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆಗೆ ನಾನು ಮಾಡಿದ್ದ ಶಿಫಾರಸ್ಸಿಗೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ ಎಂಬ ವರದಿ ಬಗ್ಗೆ ಕೇಳಿದಾಗ, “ಅದೆಲ್ಲವೂ ಸುಳ್ಳು. ನಾನು ಯಾವುದೇ ಸಚಿವರನ್ನು ಅಭ್ಯರ್ಥಿ ಮಾಡಿ ಎಂದು ವರದಿ ಕೊಟ್ಟಿಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ನನಗೆ ವರದಿ ಕೇಳಿದ್ದು, ನಾನು ಇನ್ನೂ ವಾರದಿಯನ್ನೇ ನೀಡಿಲ್ಲ. ಇದೇ 4 ರಂದು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಯಾವುದೇ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ನೀಡಿಲ್ಲ. ಲೋಕಸಭೆ ಅಭ್ಯರ್ಥಿ ಹೆಸರು ಶಿಫಾರಸ್ಸು ಮಾಡಲು ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೆ. ನಮ್ಮ ನಾಯಕರು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ಅವರು ಯಾವ ಮಾನದಂಡ ನಿಗದಿ ಮಾಡುತ್ತಾರೋ ಅದರ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಸಚಿವರ ಸ್ಪರ್ಧೆ ಬಗ್ಗೆ ಶಿಫಾರಸ್ಸು ವರದಿಯನ್ನೇ ಕೊಡದಿರುವಾಗ, ಅದನ್ನು ಹೈಕಮಾಂಡ್ ನಾಯಕರು ತಿರಸ್ಕರಿಸಿದ್ದಾರೆ ಎಂಬ ಮಾಧ್ಯಮದ ವರದಿ ಸುಳ್ಳು. ಪಕ್ಷ ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಜ.10 ರಂದು ಸಭೆ ಕರೆದಿದ್ದು, ಬೆಳಗ್ಗೆ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ಮಧ್ಯಾಹ್ನ ಬ್ಲಾಕ್ ಅಧ್ಯಕ್ಷರ ಜೊತೆ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಸಹ ಭಾಗವಹಿಸಬೇಕು ಎಂದು ಆಹ್ವಾನ ನೀಡಲಾಗಿದೆ.
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ನಿಲ್ಲುವ ಪರಿಸ್ಥಿತಿ ಬರಬಹುದು, ಬಾರದೆಯೂ ಇರಬಹುದು. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಕೊರತೆ ಇದೆಯೇ ಎಂದು ಕೇಳಿದಾಗ, “ನಮ್ಮ ಪಕ್ಷದಲ್ಲಿ ಅನೇಕ ಅಭ್ಯರ್ಥಿಗಳು ಇದ್ದಾರೆ. ಕೆಲವು ಕಡೆ 3-4 ಆಕಾಂಕ್ಷಿಗಳು ಇದ್ದರೆ, ಮತ್ತೆ ಕೆಲವೆಡೆ 8-10 ಆಕಾಂಕ್ಷಿಗಳು ಇದ್ದಾರೆ. ಅವರು ಕೇಳುವುದಕ್ಕಿಂತ ನಾವು ಯಾರನ್ನೂ ಕಣಕ್ಕೆ ಇಳಿಸುತ್ತೇವೆ ಎಂಬುದು ಮುಖ್ಯ.
ಹೊಸವರ್ಷದ ಶುಭಾಶಯಗಳು:
ನಾಡಿನ ಜನತೆಗೆ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಹೊಸವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ವರ್ಷ ಬರಗಾಲ ಎದುರಿಸಿದ್ದು, ಈ ವರ್ಷ ಬರದ ಛಾಯೆ ದೂರವಾಗಲಿ, ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಕೊಟ್ಟ ಮಾತು ಉಳಿಸಿಕೊಂಡಿದೆ. ಈ ಯೋಜನೆ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ನಾವು ವಿರೋಧ ಪಕ್ಷದವರನ್ನು ಮೆಚ್ಚಿಸಲು ಆಗುವುದಿಲ್ಲ. ನಮಗೆ ಮತ ಹಾಕಿದ ಜನರ ಪರವಾಗಿ ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ