ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಕ್ಕೆ ಅಕ್ಕಿ ನೀಡದೇ ಇರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಕೇಂದ್ರ ಸರ್ಕಾರ ಊಹೆಗೂ ಮೀರಿ ರಾಜ್ಯದ ವಿರುದ್ಧ ಧೋರಣೆ ತಾಳುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ನಿಮ್ಮ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಲು, ಬಡವರಿಗೆ ಅಕ್ಕಿ ನೀಡದಿರಲು ಕೇಂದ್ರ ಸರಕಾರವು ತೀರ್ಮಾನಿಸಿದೆ. ಪುಕ್ಕಟೆಯಾಗಿ ಅಕ್ಕಿ ನೀಡಿ ಎಂದು ನಾವು ಅವರಿಗೆ ಕೇಳಿರಲಿಲ್ಲ. ಭಾರತೀಯ ಆಹಾರ ಪ್ರಾಧಿಕಾರ ದೇಶದಲ್ಲಿ ರೈತರಿಂದ ದವಸ ಧಾನ್ಯಗಳನ್ನು ಖರೀದಿ ಮಾಡಿ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಸದ್ಯ ದಾಸ್ತಾನಿನಲ್ಲಿ ಅಕ್ಕಿ ಇದ್ದು, ಆರಂಭದಲ್ಲಿ ನೀಡಲು ಒಪ್ಪಿದವರು, ನಂತರ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದ ನಾಳೆ ಪ್ರತಿಭಟನೆ ಮಾಡಲಾಗುತ್ತಿದೆ. ಪಕ್ಷದ ಎಲ್ಲಾ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ನಾನು ಸಹ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.
ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣ ತೆಗೆಯಲಿ:
ಸಂಸದ ಡಿ.ಕೆ.ಸುರೇಶ್ ರಾಜಕೀಯ ವೈರಾಗ್ಯ ವಿಚಾರವಾಗಿ ವ್ಯಂಗ್ಯವಾಡಿದ್ದ ಮಾಜಿ ಸಚಿವ ಆರ್.ಅಶೋಕ್ ಅವರ ಹೇಳಿಕೆ ಕುರಿತು ಕೇಳಿದಾಗ, ‘ಅಶೋಕ್ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ. ಅವರ ಪಕ್ಷದಲ್ಲಿನ ನಾಯಕರ ಹೇಳಿಕೆ ಕುರಿತು ಗೊಂದಲ ಬಗೆಹರಿಸಿಕೊಳ್ಳಲಿ. ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ. ನಂತರ ನಮ್ಮ ಪಕ್ಷ, ಮುಖ್ಯಮಂತ್ರಿ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
‘ಜನ ನಮಗೆ 5 ವರ್ಷಗಳ ಕಾಲ ಅಧಿಕಾರ ನೀಡಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಗುರಿ’ ಎಂದು ತಿಳಿಸಿದರು.
ಸುರೇಶ್ ಅವರ ಹೇಳಿಕೆ ವೈರಾಗ್ಯದ್ದಲ್ಲ:
ಡಿ.ಕೆ. ಸುರೇಶ್ ಅವರು ರಾಜಕೀಯ ವೈರಾಗ್ಯದ ಕುರಿತು ಮಾತನಾಡಿರುವ ಬಗ್ಗೆ ಕೇಳಿದಾಗ, ‘ಡಿ.ಕೆ. ಸುರೇಶ್ ಬಹಳ ಪ್ರಜ್ಞಾವಂತ ಹಾಗೂ ಅನುಭವವಿರುವ ನಾಯಕರು. ಅವರಿಗೆ ಹೊಸ ನಾಯಕತ್ವ ಬೆಳೆಸಬೇಕು ಎಂಬ ಆಲೋಚನೆಗಳಿರುತ್ತವೆ. ಅವರಿಗೆ ಯಾವುದೇ ರೀತಿಯ ವೈರಾಗ್ಯವಿಲ್ಲ. ನಿಮ್ಮಷ್ಟಕ್ಕೆ ನೀವೇ ಕಲ್ಪನೆಗಳನ್ನು ಮಾಡಿಕೊಂಡರೆ ಅದು ನಿಮಗೆ ಬಿಟ್ಟ ವಿಚಾರ’ ಎಂದು ತಿಳಿಸಿದರು.
ಸಚಿವ ಸಂಪುಟ ಸಚಿವರ ದೆಹಲಿ ಪ್ರವಾಸ ಕುರಿತು ಕೇಳಿದಾಗ, ‘ಪಕ್ಷದ ಪ್ರಣಾಳಿಕೆ ಜಾರಿ, ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕು, ಎಚ್ಚರಿಕೆಯಿಂದ ಜನರ ಸೇವೆ, ಸಂಸತ್ ಚುನಾವಣೆಯಲ್ಲಿ ಕಾರ್ಯಕರ್ತರ ಸಂಘಟನೆ ಮಾಡಲು ಜಿಲ್ಲಾ ಉಸ್ತುವಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಮತ್ತೆ ಕೆಲವರಿಗೆ ಜಾಬ್ದಾರಿ ನೀಡಬೇಕಿದೆ. ಉತ್ತಮ ಆಡಳಿತ ನೀಡುವುದು ಸೇರಿದಂತೆ ಅನೇಕ ವಿಚಾರವಾಗಿ ಚರ್ಚೆ ಮಾಡಲಾಗುವುದು. ನಮ್ಮ ನಾಯಕರುಗಳು ನಮ್ಮ ಅಧ್ಯಕ್ಷರು ಹಾಗೂ ಹೈಕಮಾಂಡ್ ಭೇಟಿಗೆ ಕಾಲವಕಾಶ ಕೇಳುತ್ತಿದ್ದರು. ಹೀಗಾಗಿ ಎಲ್ಲರನ್ನು ಒಟ್ಟಿಗೆ ಕರೆಸಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಅವರು ಒಂದು ದಿನಾಂಕ ನೀಡಿದ್ದು, ಇನ್ನು ಅಂತಿಮವಾಗಿಲ್ಲ. ಇಂದು ಅಂತಿಮ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದಾರೆ’ ಎಂದು ತಿಳಿಸಿದರು.
ಪರಿಷತ್ ಸ್ಥಾನಗಳ ಆಯ್ಕೆ ವಿಚಾರವಾಗಿ ಕೇಳಿದಾಗ, ‘ನಾಮಪತ್ರ ಸಲ್ಲಿಸಲು ನಾಳೆಯವರೆಗೂ ಕಾಲಾವಕಾಶವಿದೆ. ನಮ್ಮ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ಅವಕಾಶ ನೀಡಲಾಗುವುದು. ನಾಮಪತ್ರ ಸಲ್ಲಿಕೆ ಮಾಡುವಾಗ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ತಿಳಿಯಲಿದೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ