Karnataka NewsLatestPolitics

*ಸಿಡಬ್ಲ್ಯೂಸಿ ಸಭೆಗೆ ಆಹ್ವಾನ ನೀಡಿದರೆ ಹೋಗುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ, ಪಕ್ಷದ ಬಾವುಟ ಕಟ್ಟಿದ್ದೇನೆ, ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ ಎಂದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ: “ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ), ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಹಾಗೂ ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.

ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದಾಗ, “ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇ‌ನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ” ಎಂದರು.

Home add -Advt

ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ತಾವು ತೆರಳುವಿರಾ ಎಂದು ಕೇಳಿದಾಗ, “ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ” ಎಂದರು.

ಮುಖ್ಯಮಂತ್ರಿಯವರನ್ನು ಸಭೆಗೆ ಆಹ್ವಾನಿಸಲಾಗಿದೆಯಲ್ಲ ಎಂದು ಹೇಳಿದಾಗ, “ಇರಬಹುದು, ಮೂವರು ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಆದರೆ ಡೆಪ್ಯುಟಿ ಸಿಎಂಗೆ ಕರೆದಿಲ್ಲ” ಎಂದು ತಿಳಿಸಿದರು.

ಪಿಸಿಸಿ ಅಧ್ಯಕ್ಷರಿಗೆ ಆಹ್ವಾನವಿಲ್ಲವೇ ಎಂದು ಕೇಳಿದಾಗ, “ಸಮಿತಿಯ ವಿಸ್ತರಿತ ಸಭೆಗೆ ಕರೆಯುತ್ತಾರೆ” ಎಂದರು.

ಒಂದೊಮ್ಮೆ ಸಭೆಗೆ ಕರೆದರೆ ಹೋಗುವಿರಾ ಎಂದು ಕೇಳಿದಾಗ, “ಕರೆದರೆ ಹೋಗಬೇಕಾಗುತ್ತದೆ. ಕರೆದಾಗ ಹೋಗದೇ ಇರಲು ಆಗುತ್ತದೆಯೇ” ಎಂದು ಹೇಳಿದರು.

ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿದರಾ ಎಂದು ಕೇಳಿದಾಗ, “ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ.‌ ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ” ಎಂದರು.

ಸ್ಥಳೀಯ ಮಟ್ಟದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಹಿರಿಯರು ಮಾರ್ಗದರ್ಶನ ನೀಡುತ್ತಾರೆ” ಎಂದರು.

ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

“ಮನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಅನುಕೂಲವಾಗುತ್ತಿತ್ತು. ಪಂಚಾಯತಿ ಸದಸ್ಯರುಗಳಿಗೆ ಶಕ್ತಿಯಿತ್ತು‌. ಪ್ರತಿ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಿತ್ತಿತ್ತು. ಪ್ರತಿಯೊಬ್ಬರು ಚರ್ಚೆ ನಡೆಸಿ ತಮ್ಮ ಊರಿಗೆ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಯಾವ ಜಿಲ್ಲೆಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತದಂತೆ” ಎಂದು ಹೇಳಿದರು.

“ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು, ಇಂಗುಗುಂಡಿ ತೋಡಿಕೊಳ್ಳಲು, ಕೊಟ್ಟಿಗೆ ಕಟ್ಟಿಕೊಳ್ಳಲು – ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಇಂತಹ ಅದ್ಬುತವಾದ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ನೀಡಿದ್ದರು. ಮುಂದಿನ 2026 ರ ಫೆಬ್ರವರಿ‌ ವೇಳೆಗೆ ಈ ಯೋಜನೆಗೆ 20 ವರ್ಷ ತುಂಬಲಿದೆ. ಆದ ಕಾರಣ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ” ಎಂದು ಹೇಳಿದರು.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಯೇ ಎಂದು ಕೇಳಿದಾಗ, “ನೀವು (ಮಾಧ್ಯಮಗಳು) ಹೇಳಿದ್ದಕ್ಕೆಲ್ಲಾ ಉತ್ತರ ನೀಡಲು ಆಗುವುದಿಲ್ಲ. ನಾನು ಹೇಳುವುದನ್ನೂ ಕೇಳಿ” ಎಂದರು.

ಚಿತ್ರದುರ್ಗದ ಹಿರಿಯೂರಿನ ಬಳಿ ರಸ್ತೆ ಅಪಘಾತದಲ್ಲಿ ಬಸ್ ಬೆಂಕಿಗಾಹುತಿಯಾದ ಬಗ್ಗೆ ಕೇಳಿದಾಗ, “ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನನಗೆ ತುಂಬಾ ದುಃಖವಾಗಿದ್ದು, ಏನು ಹೇಳಬೇಕು ಎಂದು ತೋಚದಂತಾಗಿದ್ದೇನೆ.‌ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಘಟನೆಗೆ ಕಾರಣ ಏನು ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.‌ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ” ಎಂದರು.

Related Articles

Back to top button