*ಪೆನ್ ಡ್ರೈವ್ ಪ್ರಕರಣದಲ್ಲಿ ಹೆಚ್.ಡಿ.ಕೆ ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ಕೊಡುತ್ತಿರುವುದೇಕೆ? ಡಿಸಿಎಂ ಪ್ರಶ್ನೆ*
ಇದರ ಮೂಲ ಏನು? ಹಿನ್ನೆಲೆ ಯಾರು…?
ಪ್ರಗತಿವಾಹಿನಿ ಸುದ್ದಿ: ಪೆನ್ ಡ್ರೈವ್ ವಿಚಾರದಲ್ಲಿ ಕುಮಾರಸ್ವಾಮಿ ಆಗಾಗ್ಗೆ ನಿಲುವು ಬದಲಿಸುತ್ತಿರುವುದು ಏಕೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಪೆನ್ ಡ್ರೈವ್ ಅವರ ಕುಟುಂಬದ ವಿಚಾರ. ಆದರೆ ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಬೇಕಿದ್ದರೆ ಕಳೆದ ವಿಧಾನಸಭೆ ಚುನಾವಣೆಯಿಂದ ಈಚೆಗೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ನೋಡಿಕೊಂಡು ಬನ್ನಿ. ಈಗ ಪೆನ್ ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ನಿಲುವು ಬದಲಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.
ಮೇ 7ರ ನಂತರ ಈ ಪ್ರಕರಣ ಎಲ್ಲಿಗೆ ಹೋಗುತ್ತೆ ಎಂದು ಎಲ್ಲರಿಗೂ ಗೊತ್ತು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;
“ಮೇ 7 ರವರೆಗೆ ಯಾಕೆ ಕಾಯಬೇಕು? ಇದರ ಮೂಲ ಏನು? ಇದರ ಹಿನ್ನೆಲೆ ಯಾರು ಎಂದು ನಾವು ಬಿಚ್ಚಿ ಇಡಬೇಕಾ? ಇದು ಅವರ ಕುಟುಂಬದ ಆಂತರಿಕ ವಿಚಾರ. ಈ ಬಗ್ಗೆ ಮಾಧ್ಯಮದವರು ವಿಶ್ಲೇಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರೇ, “ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ” ಎಂದು ಹೇಳಿದ್ದಾರೆ. ಹಿಂದೆ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೂ ಅವರೇ. ಪ್ರಜ್ವಲ್ ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅವರು ಕ್ಷಮೆ ಕೇಳಿದ್ದು ಅವರೇ. ಆದರೆ ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಿಸುತ್ತಿರುವುದೇಕೆ?” ಎಂದರು.
ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲ:
ಪ್ರಜ್ವಲ್ ರೇವಣ್ಣ ಅವರ ವಿಚಾರದಿಂದ ಜೆಡಿಎಸ್ ಪಕ್ಷದ 12 ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಅದೆಲ್ಲವೂ ಸುಳ್ಳು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಮಾಡುವ ಸಮಯದಿಂದಲೂ ಅವರ ಕುಟುಂಬದವರ ಹೇಳಿಕೆಗಳನ್ನು ಗಮನಿಸಿಕೊಂಡು ಬನ್ನಿ. ಅವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ” ಎಂದರು.
ಚುನಾವಣಾ ಪ್ರಚಾರದ ಬಗ್ಗೆ ಕೇಳಿದಾಗ, “ಪ್ರಿಯಾಂಕಾ ಗಾಂಧಿ ಅವರು ಇಂದು ದಾವಣಗೆರೆ ಹಾಗೂ ಗದಗದಲ್ಲಿ ಪ್ರಚಾರ ಮಾಡಲಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟದ ಭಾಗಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದಕ್ಕೆ ಐದೂ ಸೀಟು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಖರಿ ಜನರಿಗೆ ಮೆಚ್ಚುಗೆಯಾಗಿದೆ. ಹಳ್ಳಿ ಮಟ್ಟದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲೆ ನಡೆಯುತ್ತಿದೆ” ಎಂದರು.
ನನಗೆ ನಾಯಕತ್ವ ಪಟ್ಟ ಬೇಡ:
ರಾಜ್ಯದಲ್ಲಿ ಒಕ್ಕಲಿಗರ ನಾಯಕತ್ವಕ್ಕಾಗಿ ಇಂತಹ ಪ್ರಕರಣಗಳು ಆಚೆ ಬರುತ್ತಿವೆ ಎಂಬ ಮಾತಿನ ಬಗ್ಗೆ ಕೇಳಿದಾಗ, “ಇದೆಲ್ಲವೂ ಬಿಜೆಪಿ ಸೃಷ್ಟಿಸಿರುವ ಚರ್ಚೆಗಳು. ನನಗೆ ಯಾವುದೇ ನಾಯಕತ್ವ ಬೇಡ. ಕಾಂಗ್ರೆಸ್ ಪಕ್ಷ ನಾಲ್ಕು ವರ್ಷಗಳ ಹಿಂದೆಯೇ ರಾಜ್ಯದ ಅಧ್ಯಕ್ಷನಾಗಿ ಮಾಡಿದೆ. ನಾನು ಕಾಂಗ್ರೆಸ್ ಅಧ್ಯಕ್ಷ . ಬಿಜೆಪಿಗರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಿದ್ದಾರೆ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ರಕ್ಷಣೆ ಕೊಡುವ ಜವಾಬ್ದಾರಿ ಇದೆ. ಈ ಸಮುದಾಯದ ಜನರ ಸ್ವಾಭಿಮಾನ, ಗೌರವ ಉಳಿಸಲು ನಾನು ಅವರ ಸೇವೆ ಮಾಡುತ್ತೇನೆ. ಅದು ನನ್ನ ಧರ್ಮ. ಉಳಿದಂತೆ ನನಗೆ ನಾಯಕತ್ವದ ಪಟ್ಟ ಬೇಡ” ಎಂದರು.
ಜೆಡಿಎಸ್ ಪಕ್ಷವನ್ನು ಎನ್ ಡಿಎ ಮೈತ್ರಿಕೂಟದಿಂದ ಕಿತ್ತುಹಾಕಲಿ ಎಂಬ ಬಿಜೆಪಿ ನಾಯಕ ಶಿವರಾಮೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಬಿಜೆಪಿಯಲ್ಲಿದ್ದು, ಅವರು ಅವರ ಪಕ್ಷದ ಬಗ್ಗೆ ಏನಾದರೂ ಹೇಳಲಿ. ಅದು ಆ ಪಕ್ಷದ ವಿಚಾರ” ಎಂದರು.
30 ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ ರೇವಣ್ಣ ಅವರದ್ದು ಇಂತಹ ಪ್ರಕರಣ ನಡೆದಿತ್ತು ಎಂಬ ಶಿವರಾಮೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಆ ವಿಚಾರ ನಾನು ಕೇಳಿದ್ದೇನೆ. ಆಗ ಹೊಟೇಲ್ ನಿಂದ ರೇವಣ್ಣ ಅವರನ್ನು ಖಾಲಿ ಮಾಡಿಸಿದ್ದರು ಎಂದು ಕೇಳಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ” ಎಂದರು.
ರೇವಣ್ಣ ವಿಚಾರಣೆಗೆ ಹಾಜರಾಗುತ್ತಿಲ್ಲವಲ್ಲ ಎಂದು ಕೇಳಿದಾಗ, “ಗೃಹಮಂತ್ರಿಗಳು ಹಾಗೂ ಎಸ್ಐಟಿಯವರು ಇದ್ದಾರೆ. ಅವರು ಈ ವಿಚಾರವಾಗಿ ಉತ್ತರ ನೀಡುತ್ತಾರೆ. ಚುನಾವಣೆ ಪ್ರಚಾರದಲ್ಲಿ ನಾನು ನಿರತನಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಗಿಲ್ಲ” ಎಂದರು.
ಹೆಚ್ಚು ಮಳೆ ಬೀಳಲಿ ಎಂದು ಪ್ರಾರ್ಥಿಸುತ್ತೇನೆ:
ಬೆಂಗಳೂರಿನಲ್ಲಿ ಮಳೆ ಬೀಳುತ್ತಿರುವ ಬಗ್ಗೆ ಕೇಳಿದಾಗ, “ಮಳೆ ಬೀಳಲಿ. ಏನಾದರೂ ಆಗಲಿ ಮಳೆ ಬೀಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಂದು ಸುತ್ತು ಮಳೆ ಬಿದ್ದರೆ ಎಷ್ಟು ಇಂಧನ ಉಳಿಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಒಂದು ದಿನ ಮಳೆ ಬಿದ್ದರೆ ಸಾವಿರಾರು ಕೋಟಿ ಉಳಿಯುತ್ತದೆ. ಮಳೆ ಬೀಳದೇ ಇದ್ದರೆ ಕೊಳವೆ ಬಾವಿ ಕೊರೆಯುತ್ತಲೇ ಇರುತ್ತಾರೆ. ಚೆನ್ನಾಗಿ ಮಳೆಯಾಗಲಿ, ಭೂಮಿ ನೆನೆಯಲಿ” ಎಂದರು.
ಎರಡನೇ ಹಂತದ ಚುನಾವಣೆಯಲ್ಲಿ ನೀವು ಎಷ್ಟು ಕ್ಷೇತ್ರ ಗೆಲ್ಲುತ್ತೀರಿ ಎಂದು ಕೇಳಿದಾಗ, “ಎರಡನೇ ಹಂತದಲ್ಲಿ 12 ಸ್ಥಾನ ಗೆಲ್ಲುವ ಸಾಧ್ಯತೆಗಳು ಕಾಣುತ್ತಿವೆ. ಪ್ರಚಾರ ಎಲ್ಲವೂ ಮುಗಿಯಲಿ, ಆಮೇಲೆ ಮಾತನಾಡುತ್ತೇನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ