LatestPolitics

*ಕುಮಾರಣ್ಣನ ಆಡಳಿತ ಸ್ವಂತಕ್ಕಾಗಿ, ನನ್ನ ಆಡಳಿತ ಜನರಿಗಾಗಿ: ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್*

ಅರ್ಜಿ ಕೊಟ್ಟಿರುವ ಎಲ್ಲರಿಗೂ ನೀವೇಶನ

ಪ್ರಗತಿವಾಹಿನಿ ಸುದ್ದಿ: “ಕುಮಾರಣ್ಣನ ಆಡಳಿತ ಸ್ವಂತಕ್ಕೆ, ನನ್ನ ಆಡಳಿತ ತಾಲ್ಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;

“ಕಳೆದ ಮೂರು ತಿಂಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ₹500 ಕೋಟಿ ಮೊತ್ತದ ಯೋಜನೆಗಳ ಗುದ್ದಲಿ ಪೂಜೆ ಮಾಡಲಾಗಿದೆ. ಈ ತಾಲ್ಲೂಕಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ನೀವು ಕಿವಿಯಲ್ಲಿ ಕೇಳುವುದು ಮಾತ್ರವಲ್ಲ, ಕಣ್ಣಾರೆ ನೋಡುತ್ತಿದ್ದೀರಿ. ಕಳೆದ ಮೂರು ತಿಂಗಳಲ್ಲಿ ಸಚಿವರು, ಅಧಿಕಾರಿಗಳು ನಿಮ್ಮ ಬಳಿ ಬಂದು ನಿಮಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಚನ್ನಪಟ್ಟಣ ನಡುವಣ ಸಂಬಂಧ ಭಕ್ತ ಹಾಗೂ ಭಗವಂತ ನಡುವಿನ ಸಂಬಂಧ. ಈ ಭಾಗದವರು ನಾಲ್ಕು ಬಾರಿ ನನ್ನನ್ನು ವಿಧಾನಸಭೆಗೆ ಆರಿಸಿದ್ದಾರೆ.

ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ:

ಈ ಕಾರ್ಯಕ್ರಮದಲ್ಲಿ ನಾವು ಹಚ್ಚಿರುವ ದೀಪ ನಿಮ್ಮ ದಾರಿ, ಮನೆ, ಬದುಕು ಬೆಳಗಲಿದೆ. ಚನ್ನಪಟ್ಟಣದ ಅಭಿವೃದ್ಧಿ ದೀಪ ಹಚ್ಚಿದ್ದೇವೆ. ಕೊಟ್ಟ ಮಾತಿನಂತೆ ಚನ್ನಪಟ್ಟಣವನ್ನು ಅಭಿವೃದ್ಧಿ ಪುಟಕ್ಕೆ ಸೇರಿಸಿ ಮುನ್ನುಡಿ ಬರೆಯುತ್ತಿದ್ದೇವೆ. ಕರ್ನಾಟಕ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ.

ಚನ್ನಪಟ್ಟಣವನ್ನು ಚಿನ್ನದಂತ ನಾಡು ಮಾಡಲು ತೀರ್ಮಾನಿಸಿದ್ದೇವೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳಲು ಬಂದಿದ್ದೇವೆ. ನಾವು ನಿಮ್ಮ ಮನೆ ಬಾಗಿಲಿಗೆ ಬಂದಾಗ ಈ ಜನ 27 ಸಾವಿರ ಅರ್ಜಿ ನೀಡಿದ್ದಾರೆ. ಅದರಲ್ಲಿ 18 ಸಾವಿರ ಅರ್ಜಿಗಳು, ಮನೆ ಹಾಗೂ ನಿವೇಶನ ಬೇಕು ಎಂದು ಹೇಳಿದ್ದಾರೆ.

ಇನ್ನೂ 150 ಎಕರೆ ಖರೀದಿಗೆ ಸಿದ್ಧ:

ಈ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡಲು 170 ಎಕರೆ ಜಾಗ ಗುರುತಿಸಲಾಗಿದೆ. ಇನ್ನು 150 ಎಕರೆ ಖರೀದಿ ಮಾಡಲು ನಾವು ಸಿದ್ಧವಾಗಿದ್ದೇವೆ. ಮಾರುಕಟ್ಟೆ ದರ ನೀಡಿ ಜಿಲ್ಲಾಧಿಕಾರಿಗಳು ಖರೀದಿ ಮಾಡಲಿದ್ದಾರೆ. ಈ ಮಾತನ್ನು ಕುಮಾರಣ್ಣನಿಗೆ ಹೇಳಲು ಬಯಸುತ್ತೇನೆ.

ನಮ್ಮ ಕೇಂದ್ರ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡಲಿಲ್ಲ, ಈಗ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರಂತೆ.
ನನ್ನದು ಕುಟುಂಬಕ್ಕಾಗಿ ರಾಜಕಾರಣವಲ್ಲ, ತಾಲ್ಲೂಕು ಹಾಗೂ ಜನರ ಪರವಾದ ರಾಜಕಾರಣ.

ನಾವು ಇಲ್ಲಿ ಯಾರೂ ಶಾಶ್ವತವಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಈ ಎರಡು ಕೈ ಕೊಟ್ಟಿರುವುದು, ಒಂದು ನಮ್ಮನ್ನು ನಾವು ಕಾಪಾಡಿಕೊಳ್ಳಲು ಹಾಗೂ ಮತ್ತೊಂದು ಬೇರೆಯವರನ್ನು ರಕ್ಷಣೆ ಮಾಡಲು. ಬೇರೆಯವರು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ.

ಸ್ಥಳೀಯ ಕಾರ್ಪೊರೇಟರ್ ಗಳು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅವರಿಗೆ ಈಗ ಬೆದರಿಕೆ ಹಾಕುತ್ತಿದ್ದಾರೆ.

ಅರ್ಜಿ ಕೊಟ್ಟಿರುವ ಎಲ್ಲರಿಗೂ ನೀವೇಶನ ನೀಡುವ ಆಸೆ:

ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ, ಮನೆ ನೀಡಲು ನಮಗೆ ಆಸೆ ಇದೆ. ಸಚಿವ ಜಮೀರ್ ಅಹ್ಮದ್ ಅವರು 5,000 ಮನೆ ಮಂಜೂರು ಮಾಡಿದ್ದಾರೆ. ಈಗ ನಿವೇಶನದ ಬದಲು 500 ಚ.ಅಡಿ ಮನೆ ಕಟ್ಟಿಕೊಡೋಣ ಎಂದು ಹೇಳಿದ್ದಾರೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯಾ?

ನಾಳೆ ತುಂಗಾಭದ್ರಾ ಅಣೆಕಟ್ಟಿನಲ್ಲಿ ಬಾಗಿನ ಅರ್ಪಣೆ ಮಾಡಲು ಹೋಗುತ್ತಿದ್ದೇವೆ. ಟಿಬಿ ಡ್ಯಾಂ ಗೇಟ್ ಮುರಿದಾಗ ಎಲ್ಲರೂ ನನ್ನ ವಿರುದ್ಧ ಟೀಕೆ ಮಾಡಲು ಮುಗಿಬಿದ್ದರು. ನಾನು ಆಗ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದ್ದೆ. ಅದರಂತೆ ಆರು ದಿನಗಳಲ್ಲಿ ಗೇಟ್ ಬದಲಾಯಿಸಿ ಮತ್ತೆ ನೀರು ತುಂಬಿಸಿ ಈಗ ತಾಯಿ ಗಂಗೆಗೆ ಪೂಜೆ ಮಾಡಲಿದ್ದೇವೆ.

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ನಮ್ಮ ಕಾರ್ಯಗಳು ಇತಿಹಾಸ ಪುಟ ಸೇರಲಿವೆ. ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ, ಆತನಿಂದ ಎಷ್ಟು ಜನರಿಗೆ ಸಹಾಯವಾಗಿದೆ ಎಂಬುದು ಮುಖ್ಯ.

ಪ್ರತಿ ವಾರ್ಡಿಗೆ ₹1 ಕೋಟಿ ವೆಚ್ಚದ ಯೋಜನೆಗಳು

ಕಳೆದ ಮೂರು ತಿಂಗಳುಗಳಲ್ಲಿ ಈ ಕ್ಷೇತ್ರದಲ್ಲಿ ₹500 ಕೋಟಿ ವೆಚ್ಚದ ಯೋಜನೆಗಳ ಗುದ್ದಲಿ ಪೂಜೆ ಮಾಡಲಾಗಿದೆ. ವಿಶೇಷ ಅನುದಾನ ತಂದು ಪ್ರತಿ ವಾರ್ಡ್ ನಲ್ಲಿ ₹1 ಕೋಟಿ ಅನುದಾನದ ಯೋಜನೆಗಳು ನಡೆಯುತ್ತಿದೆ. ಇಂದು ₹200 ಕೋಟಿ ಅನುದಾನದ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಿದ್ದೇವೆ.

ಕುಮಾರಣ್ಣ ಈ ವಿಚಾರವಾಗಿ ನೀನು ಉತ್ತರ ನೀಡಬೇಕು. ನೀನು ಈ ಕ್ಷೇತ್ರದ ಶಾಸಕನಾಗಿ ಮುಖ್ಯಮಂತ್ರಿಯಾಗಿದ್ದೆ. ನಾವು ಬೆಂಬಲ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೆವು. ನಿನಗೆ ಸಹಾಯ ಮಾಡಿದ ಜನರ ಋಣ ತೀರಿಸುವ ಕೆಲಸ ನೀನು ಮಾಡಿಲ್ಲ. ಮತ್ತೆ ಈ ತಾಲ್ಲೂಕಿನ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ.

ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ

ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ. ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿರುವ ನಾವು, ಮೂರುವರೆ ವರ್ಷಗಳಲ್ಲಿ ಎಷ್ಟು ಕೆಲಸ ಮಾಡಬಹುದು ಆಲೋಚಿಸಿ. ಚನ್ನಪಟ್ಟಣ ಗೊಂಬೆ ಕಾರ್ಖಾನೆ ಸಮಸ್ಯೆ ಬಗೆಹರಿಸಿದ್ದೇವೆ.

ನಿಮ್ಮ ರಾಜಕಾರಣದ ಇತಿಹಾಸದಲ್ಲಿ ಯಾವುದಾದರೂ ರಾಜಕಾರಣಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಿದ್ದಾರಾ? ಇಲ್ಲವಾದರೆ, ಅವರು ಬಂದು ಮತ ಯಾಕೆ ಕೇಳಬೇಕು?

ನಮಗೆ ನಿಮ್ಮ ಮೇಲೆ ನಂಬಿಕೆ, ವಿಶ್ವಾಸವಿದೆ. ನಾವು ಕೊಟ್ಟ ಮಾತು ತಪ್ಪುವುದಿಲ್ಲ. ಗ್ರಾಮೀಣ ಭಾಗದಲ್ಲಿ ₹300 ಕೋಟಿ, ಪಟ್ಟಣ ಭಾಗದಲ್ಲಿ ₹200 ಕೋಟಿ ರೂಪಾಯಿ ಯೋಜನೆ ಹಮ್ಮಿಕೊಂಡಿದ್ದೇವೆ.

ಆಟದ ಮೈದಾನ, ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಮಾಡಿದ್ದೇವೆ. ಎಲ್ಲಾ ವರ್ಗದ ಬಡವರಿಗೂ ನಿವೇಶನ ನೀಡಲಾಗುತ್ತಿದೆ. ಕಾಂಗ್ರೆಸ್ ಎಂದರೆ ಬಡವರು, ಕಾರ್ಮಿಕರು, ರೈತರು, ಶ್ರಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಸರ್ಕಾರ.

ರಾಮಲಿಂಗಾ ರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಿಮಗೆ ಗ್ಯಾರಂಟಿ ಯೋಜನೆಗಳು ತಲುಪಿವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಸಂಚು ರೂಪಿಸುತ್ತಿದ್ದಾರೆ.

ಬಿಸಾಕಿದ ತಕ್ಷಣ ಒಡೆದು ಹೋಗಲು ನಮ್ಮದು ಮಣ್ಣಿನ ಮಡಕೆ ಅಲ್ಲ. ಇದು ಬಲಿಷ್ಟವಾದ ಪಂಚ ಲೋಹದ ಪಾತ್ರೆ. ಈ ಭಾಗದಲ್ಲಿ ಇನ್ನೂ ಅನೇಕ ಜನ ನಮ್ಮ ಪಕ್ಷ ಸೇರಲಿದ್ದಾರೆ. ಇನ್ನೂ ಯಾರೆಲ್ಲಾ ಸೇರುತ್ತಾರೆ ಕಾದುನೋಡಿ.

ನಾನು ನಿಮ್ಮ ಸೇವಕನಾಗಿ ಬಂದಿದ್ದೇನೆ. ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಬಂದಿಲ್ಲ. ನಿಮ್ಮ ಮನೆಗೆ ಅವಕಾಶ ಬಂದಿದೆ, ಯಾಮಾರಬೇಡಿ. ಚನ್ನಪಟ್ಟಣದ ಜನರಿಗೆ ಒಳ್ಳೆಯದಾಗಬೇಕು. ಈ ಜನರ ಋಣ ತೀರಿಸಬೇಕು. ಈ ಕ್ಷೇತ್ರದ ಜನರ ಜತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button