ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಟಿ ದಾಳಿ ವಿಚಾರವಾಗಿ ನನ್ನ ಹೆಸರು ತಳುಕು ಹಾಕಿ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ. ಆದರೂ ಮಾತನಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಐಟಿ ದಾಳಿ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಯಾರು ಏನು ಆರೋಪ ಮಾಡುತ್ತಾರೋ ಮಾಡಲಿ. ಆದಾಯ ಇಲಾಖೆ ಅಧಿಕಾರಿಗಳ ದಾಳಿ, ತನಿಖೆ ಮುಗಿದ ನಂತರ ತಮ್ಮ ಹೇಳಿಕೆಯನ್ನು ಪ್ರಕಟಿಸಲಿ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಆಗಲಿ, ಬಿಜೆಪಿ ನಾಯಕರಾಗಲಿ ಆದಾಯ ಇಲಾಖೆ ಪ್ರತಿನಿಧಿಗಳೇನೂ ಅಲ್ಲ. ನಾನು ತಿಹಾರ್ ಜೈಲಿಗೆ ಹೋಗುತ್ತೇನೆ ಎಂದು ಕುಮಾರಸ್ವಾಮಿ ಅವರು ಈಗಾಗಲೇ ಹೇಳಿದ್ದಾರೆ. ಆ ಮೂಲಕ ತಾವು ಏನು ಮಾಡಲು ಹೊರಟಿದ್ದೇನೆ ಎಂಬುದನ್ನು ಹೇಳಿದ್ದಾರೆ ಎಂದರು.
ಇನ್ನು ಮುಂದೆ ರಾಜ್ಯದಲ್ಲಿ ನಡೆಯಲಿರುವ ಐಟಿ ದಾಳಿಗಳು ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರೇರಿತ ದಾಳಿಯಾಗಲಿವೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಕಾಲದಲ್ಲಿ ಏನಾಯ್ತು? ಆಗ ಅವರಿಗೆ ಏನು ಸಿಕ್ಕಿದೆ? ಎಲ್ಲವೂ ದಾಖಲೆಗಳಲ್ಲಿ ಇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದ ನಂತರ ಮಾತನಾಡೋಣ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ