Wanted Tailor2
Cancer Hospital 2
Bottom Add. 3

*ಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ HDK ಹೂ ಅನ್ನಲಿಲ್ಲ, ಅವರ ಮಾತು ನಂಬಲು ನಾನೇನೂ ದಡ್ಡನೇ?: ಡಿಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ, ಮುಂಬೈಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಫೋನ್ ಮಾಡಿ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಗೌರಿಶಂಕರ್ ಮತ್ತು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 40 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಕುಮಾರಸ್ವಾಮಿ ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಅವರ ಮಾತು ಕೇಳಲು ನಾವೇನು ದಡ್ಡರೇ?

ಸರ್ಕಾರಕ್ಕೆ ನಮ್ಮ ಪಕ್ಷದ 136 ಜನ ಶಾಸಕರು ಮತ್ತು ಪಕ್ಷೇತರರ ಬೆಂಬಲವಿದೆ. ಕುಮಾರಸ್ವಾಮಿ ಅವರೇ ಎನ್ ಡಿಎಯಿಂದ ಮೊದಲು ಹೊರಬನ್ನಿ, ಒಬ್ಬ ವ್ಯಕ್ತಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇರಬೇಕು ಎಂದು ಅವರಿಗೆ ಹೇಳಿದೆ. ನಂತರ ಈ ಕುರಿತು ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗಲೇ ಇಲ್ಲ.

ಕುಮಾರಸ್ವಾಮಿ ಅವರ ದ್ವಂದ್ವ ನಿಲುವು ಅವರಿಗೆ ಅರ್ಥವಾಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿದ್ದಾರೆ, ತೆಲಂಗಾಣದಲ್ಲಿ ಕೆಸಿಆರ್ಗೆ ಪರವಾಗಿ ಮಾತನಾಡುತ್ತಾರೆ. ಕೆಸಿಆರ್ ಅವರ ಮಗ ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾರೆ. 18 ಜನ ಶಾಸಕರನ್ನು ಕರೆದುಕೊಂಡು, ಅವರನ್ನು ಖುರ್ಚಿಯಿಂದ ಇಳಿಸಿದವರ ಜತೆಗೆ ಕೈಜೋಡಿಸಿದ್ದೇವೆ ಎಂದರೆ ಸಿದ್ದಾಂತ ಎನ್ನುವುದು ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದ್ದಾರೆ

ಜೆಡಿಎಸ್ ಜಾತ್ಯಾತೀತ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟ ಪಕ್ಷ ಎನ್ನುವ ಕಾರಣಕ್ಕೆ 80 ಜನ ಕಾಂಗ್ರೆಸ್ ಶಾಸಕರು ಇದ್ದರೂ 30 ಸ್ಥಾನ ಗೆದ್ದಂತಹ ಅವರ ಪಕ್ಷಕ್ಕೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಈಗ ಸರ್ಕಾರ ಬೀಳಿಸಿದವರ ಜತೆಗೇ ಅವರು ನೆಂಟಸ್ಥನ ಮಾಡಿದ್ದಾರೆ.

ಕುಮಾರಸ್ವಾಮಿ ಅವರೇ, ನೀವು ಸಹ 20 ಮತ್ತು 14 ತಿಂಗಳು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದೀರಿ. ನಿಮಗೆ ಆಡಳಿತ ಮಾಡಲು ಬಿಡಲಿಲ್ಲವೇ? ವಿರೋಧ ಪಕ್ಷವಾಗಿ ಟೀಕೆಗಳನ್ನು ಮಾಡಿದರೂ ಬಿಜೆಪಿಯವರಿಗೆ ನಾವು ಆಡಳಿತ ಮಾಡಲು ಬಿಡಲಿಲ್ಲವೇ? ಆದರೆ ನೀವು ಅಧಿಕಾರ ನನಗೆ ಸಿಗಲಿಲ್ಲ ಎಂದು ಅಸೂಯೆಯಿಂದ ಕೈ, ಕೈ ಉಜ್ಜಿಕೊಂಡು ಕುಳಿತರೇ ಏನು ಪ್ರಯೋಜನ?.

ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಮ್ಮ ಆಡಳಿತವನ್ನು ನೋಡಿಕೊಂಡು ಇರಲು ನಿಮಗೆ ಆಗುತ್ತಿಲ್ಲ. ಗ್ಯಾರಂಟಿಗಳ ಬಗ್ಗೆ, ಆಡಳಿತದ ಬಗ್ಗೆ ಎಲ್ಲದರ ಬಗ್ಗೆಯೂ ಕುಹಕವಾಡುತ್ತಿದ್ದೀರಿ. ನಮ್ಮ ತಪ್ಪುಗಳನ್ನು ಹೇಳಿದರೆ ತಿದ್ದಿಕೊಂಡು ಕೆಲಸ ಮಾಡುತ್ತೇವೆ, ಅನವಶ್ಯಕ ಟೀಕೆಗಳು ಸಲ್ಲದು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸಲಿ, ಅದರ ಬದಲು ನಮ್ಮ ಶಾಸಕರಿಗೆ ಕರೆ ಮಾಡುವುದು ಸೇರಿದಂತೆ ಇತರೇ ಕೆಲಸಗಳನ್ನು ಮಾಡಿದರೆ, ಇದನ್ನು ಏನೆಂದು ಕರೆಯಬೇಕು? ನಮಗೆ ಎಲ್ಲಾ ವಿಚಾರ ಗೊತ್ತಿದೆ! ವಿರೋಧ ಪಕ್ಷಕ್ಕೆ ಅಷ್ಟೊಂದು ಶಕ್ತಿ ಇರುವಾಗ ನಮಗೆ ಇನ್ನೆಷ್ಟು ಶಕ್ತಿ ಇರಬೇಕು.

ಬಿಜೆಪಿಯವರು 6 ತಿಂಗಳ ನಂತರ ನೂತನ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಅವರು ನಮ್ಮನ್ನು ರಚನಾತ್ಮಕವಾಗಿ ಟೀಕೆ ಮಾಡಿದರೆ ಒಪ್ಪಿಕೊಳ್ಳುತ್ತೇವೆ, ಇದೇ ಪ್ರಜಾಪ್ರಭುತ್ವ ಎಂದರು

ಕುಮಾರಸ್ವಾಮಿ ಒಂದು ನಿಮಿಷ ಇದ್ದಂತೆ ಇನ್ನೊಂದು ನಿಮಿಷ ಇರುವುದಿಲ್ಲ:

ಮಂಜುನಾಥ್, ಗೌರಿಶಂಕರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕರ ಬಳಿ ಕೇಳಿದ್ದೇನೆ, ʼಕುಮಾರಸ್ವಾಮಿ ಅವರು ಹೇಗೆʼ ಎಂದು. ಒಂದು ನಿಮಿಷ ಇದ್ದ ನಿರ್ಧಾರ ಇನ್ನೊಂದು ನಿಮಿಷ ಇರುವುದಿಲ್ಲ, ಅದಕ್ಕೆ ನಮಗೆ ಅವರ ಬಳಿ ಕೆಲಸ ಮಾಡಲು ಆಗುವುದಿಲ್ಲ. ನಮಗೆ ಕಾಂಗ್ರೆಸ್ ಪಕ್ಷವೇ ಸರಿ ಎಂದು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ತೀನಿ ಅಂದವರಿಗೆ ಕುಮಾರಸ್ವಾಮಿ, “ನೀನು ದಳದಲ್ಲೇ ಇರು, ಆದರೆ ಬಿಜೆಪಿಗೆ ಕೆಲಸ ಮಾಡುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡು” ಎಂದು ಹೇಳಿದ್ದಾರಂತೆ. ಇದು ಹೇಗೆ ಸಾಧ್ಯ? ಮೋಸ ಮಾಡಿದಂತೆ ಅಲ್ಲವೇ? ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಗೌರಿಶಂಕರ್ ಮತ್ತು ಮಂಜುನಾಥ್ ಅವರನ್ನೇ ಕೇಳಬೇಕು. ಈ ಕಾರಣಕ್ಕೆ ಇವರಿಬ್ಬರು ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ನಮ್ಮ ಪಕ್ಷದ ಬಿ.ಎಲ್.ಶಂಕರ್, ನರೇಂದ್ರಸ್ವಾಮಿ, ವಿನಯ್ ಕುಲಕರ್ಣಿ ಸೇರಿದಂತೆ ಇವರಿಗೆ ಪಕ್ಷದಲ್ಲಿ ಇರುವಂತಹ ಹಿರಿತನ ಹೊಸದಾಗಿ ಪಕ್ಷ ಸೇರ್ಪಡೆ ಆದವರಿಗೂ ಇದೆ. ಎಷ್ಟೇ ಮತಗಳನ್ನು ಪಡೆದುಕೊಂಡು ಸೋತಿದ್ದರೂ ನಮ್ಮ ಪಕ್ಷದ ಕಷ್ಟಕಾಲದಲ್ಲಿ ಜೊತೆಗೆ ನಿಂತ ಕಾರ್ಯಕರ್ತರು, ನಾಯಕರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ.

ದಿವಂಗತ ಧೃವನಾರಾಯಣ ಅವರು ಕೇವಲ 1 ಮತಗಳ ಅಂತರದಲ್ಲಿ ಗೆದ್ದಿದ್ದರು, ನಂತರದ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಬೂತಿನಲ್ಲಿ ಒಂದೊಂದೇ ಮತಗಳು ಕಡಿಮೆಯಾಗಿ 1200 ಮತಗಳ ಅಂತರದಲ್ಲಿ ಸೋತರು, ಅವರ ಮಗ 50 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾನೆ. ಸೌಮ್ಯಾ ರೆಡ್ಡಿ, ದಿನೇಶ್ ಗುಂಡೂರಾವ್ ಅವರು ಕಡಿಮೆ ಅಂತರದಲ್ಲಿ ಸೋಲು ಗೆಲುವು ಕಂಡಿದ್ದಾರೆ. ಅಂದರೆ ನಾವು ಯಾರನ್ನೂ ಕೂಡ ಎಂತಹ ಸಂದರ್ಭದಲ್ಲಿಯೂ ದೂರ ಮಾಡುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶಗಳು ಉದಾಹರಣೆ ನೀಡಿವೆ ಎಂದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಬೇಕು, ಹಳಬರು, ಹೊಸಬರು ಎಲ್ಲರಿಗೂ ಅವಕಾಶ ನೀಡುತ್ತಿದ್ದೇವೆ, ಮುಂದೆಯೂ ನೀಡುತ್ತೇವೆ.

ಕುಮಾರಸ್ವಾಮಿ ಅವರೇ, ಗೌರಿಶಂಕರ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನೋಟಿಸ್ ನೀಡಿ, ಮತ್ತೆ ನಿಮ್ಮ ಜತೆಯೇ ಕೆಲಸ ಮಾಡು ಎಂದರೆ ಅದು ಹೇಗೆ ಸಾಧ್ಯ. ಮನುಷ್ಯನಿಗೆ ತನ್ನದೇ ಆದ ಸ್ವಾಭಿಮಾನವಿರುತ್ತದೆ ಅಲ್ಲವೇ?

ನಾನು ಮತ್ತು ಚೆನ್ನಿಗಪ್ಪ ಅವರು ಒಂದೇ ಜಿಲ್ಲೆಯವರು, ಒಟ್ಟಿಗೆ ರಾಜಕಾರಣ ಮಾಡುತ್ತಾ ಬೆಳೆದವರು. ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅವರನ್ನು ನೋಡಲು ಹೋಗಿದ್ದೆ. ಈ ವೇಳೆ ‘ಯಾವ ಕಾರಣಕ್ಕೆ ಚುಂಚನಗಿರಿ ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲಿಸಬೇಕಾಯಿತು’ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದರು.

ಡಿ.ಸಿ.ಗೌರಿಶಂಕರ್ ಅವರನ್ನು ಸೋಲಿಸಲು ನಾವು ಸಾಕಷ್ಟು ಕೆಲಸ ಮಾಡಿದೆವು, ನಮ್ಮ ಅಭ್ಯರ್ಥಿ 6 ಸಾವಿರ ಮತಗಳನ್ನು ಪಡೆದರೆ ಗೌರಿಶಂಕರ್ ಅವರು 2 ಸಾವಿರ ಮತಗಳ ಅಂತರದಿಂದ ಸೋತರು. ಈಗ ನಮ್ಮವರೇ ಆಗಿದ್ದಾರೆ, ಪ್ರಬಲ ಶಕ್ತಿಯೊಂದು ತುಮಕೂರಿನ ಭಾಗದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದೆ.

ಬಿಜೆಪಿಯವರು ನಮ್ಮ ಮುಹೂರ್ತವನ್ನೇ ಹುಡುಕಿದ್ದಾರೆ

ಗೌರಿಶಂಕರ್ ಮತ್ತು ಮಂಜುನಾಥ್ ಅವರು ನ.15 ರಂದೆ ಪಕ್ಷ ಸೇರ್ಪಡೆಯಾಗಬೇಕು ಎಂದು ಇಚ್ಚಿಸಿದ್ದರು, ವಿಜಯೇಂದ್ರ ಅವರು ಈ ದಿನವೇ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ ಎಂದರೆ ನಿಮ್ಮಿಬ್ಬರ ಮುಹೂರ್ತ ಚೆನ್ನಾಗಿದೆ ಅಂತ ಅಲ್ಲವೇ?

ಕಾಂಗ್ರೆಸ್ ಪಕ್ಷದಲ್ಲಿ ಯಾವ ಸ್ಥಾನ ಸಿಗದೇ ಇರಬಹುದು, ಆದರೆ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹಾಕಿಕೊಳ್ಳುವ ಪುಣ್ಯ ಸಿಗುತ್ತದೆ. ಬೇರೆ ಯಾವ ಪಕ್ಷದಲ್ಲಿಯೂ ಈ ಅವಕಾಶ ಸಿಗಲು ಸಾಧ್ಯವಿಲ್ಲ.

ಯಾರೇ ಏನೂ ತಿಪ್ಪರಲಾಗ ಹೊಡೆದರೂ ಯಾರು ಏನೂ ಮಾಡಲು ಆಗುವುದಿಲ್ಲ, ಮುಂದಿನ ಚುನಾವಣೆಯನ್ನು ಎಲ್ಲರೂ ಎದುರಿಸೋಣ. ಮುಂದಿನ ವಾರ ಇನ್ನಷ್ಟು ಪ್ರಮುಖ ನಾಯಕರು ಪಕ್ಷ ಸೇರ್ಪಡೆಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಹೊಸದಾಗಿ ಪಕ್ಷ ಸೇರ್ಪಡೆಯಾದ ಕ್ಷೇತ್ರಗಳಲ್ಲಿ ನಾನೇ ಖುದ್ದಾಗಿ ಬಂದು ಕಾರ್ಯಕರ್ತರ ಸಭೆ ನಡೆಸಲಿದ್ದು, ದಾಸರಹಳ್ಳಿ, ತುಮಕೂರು ಗ್ರಾಮಾಂತರದಲ್ಲಿ ಶೀಘ್ರ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

Bottom Add3
Bottom Ad 2

You cannot copy content of this page