*ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗುವತ್ತ ಗಮನ ಹರಿಸಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ*

ಪ್ರಗತಿವಾಹಿನಿ ಸುದ್ದಿ: “ಉದ್ಯೋಗ ಪಡೆಯುವುದಷ್ಟೇ ನಿಮ್ಮ ಗುರಿಯಾಗಬಾರದು. ಉದ್ಯಮಿಗಳಾಗಿ ಹತ್ತಾರು ಉದ್ಯೋಗ ಸೃಷ್ಟಿ ಮಾಡುವತ್ತ ಆಲೋಚಿಸಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯುವಕರಿಗೆ ಕರೆ ನೀಡಿದರು.
ಕನಕಪುರದ ಆರ್ ಇ ಎಸ್ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಶಿವಕುಮಾರ್ ಅವರು ಬುಧವಾರ ಹೇಳಿದ್ದಿಷ್ಟು;
“ನೀವೆಲ್ಲರೂ ಉದ್ಯೋಗ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೀರಿ. ಸದ್ಯಕ್ಕೆ ನೀವು ಉದ್ಯೋಗ ಪಡೆದುಕೊಳ್ಳಿ. ಉದ್ಯೋಗ ಪಡೆದುಕೊಂಡು ಕೆಲ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯಮಿಗಳಾಗುವತ್ತ ಗಮನಹರಿಸಿ. ನೀವು ಯಶಸ್ಸು ಸಾಧಿಸಲು ಕನಸು ಕಾಣಬೇಕು, ಅದಕ್ಕಾಗಿ ಶಿಸ್ತು, ಬದ್ಧತೆ ಹೊಂದಿರಬೇಕು.
ಬೆಂಗಳೂರು ಜಾಗತಿಕ ಕೇಂದ್ರವಾಗಿದೆ. ಹೊರಗಿನಿಂದ ಬಂದು ಇಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಹೀಗಾಗಿ ನೀವು ಕೇವಲ ಕನಕಪುರಕ್ಕೆ ಸೀಮಿತದ ಆಲೋಚನೆ ಇಟ್ಟುಕೊಳ್ಳಬೇಡಿ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ನೀವು ತಯಾರಾಗಬೇಕು.
ನೀವೆಲ್ಲರೂ ಬೆಂಗಳೂರಿನವರು. ಆಡಳಿತ ದೃಷ್ಟಿಯಿಂದ ಮಾತ್ರ ಈ ಭಾಗವನ್ನು ಬೇರೆ ಜಿಲ್ಲೆಯಾಗಿ ಮಾಡಲಾಗಿದೆ ಅಷ್ಟೇ.
ಆರ್ ಇಎಸ್ ಸಂಸ್ಥೆಗೆ ಹೊಸ ರೂಪ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಕೃಷಿ ವಿವಿ ತರಲು ಪ್ರಯತ್ನಿಸುತ್ತಿದ್ದೇವೆ. ಕನಕಪುರ, ರಾಮನಗರದಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದರು. ಇಲ್ಲಿಗಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಿದ್ದಾರೆ. ಇಲ್ಲಿನ ಕೃಷಿ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಆಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕೃಷಿ ವಿವಿ ತರಲು ಪ್ರಯತ್ನಿಸುತ್ತಿದ್ದೇವೆ.
ನಮ್ಮ ಜಿಲ್ಲೆಯ ಪ್ರತಿ ಎರಡು ಮೂರು ಪಂಚಾಯತಿ ಮಟ್ಟದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಮುಂದಾಗಿದ್ದೇವೆ. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಟೊಯೋಟಾ ಸಂಸ್ಥೆ ನಾಲ್ಕು ಶಾಲೆ ನಿರ್ಮಿಸಲು ಮುಂದೆ ಬಂದಿದ್ದಾರೆ. ಈ ಶಾಲೆಗಳನ್ನು ಖಾಸಗಿ ಶಾಲೆಗಳು ಜವಾಬ್ದಾರಿ ಪಡೆದುಕೊಂಡು ಶಿಕ್ಷಣ ನೀಡಬೇಕು.
ನಾವೆಲ್ಲರೂ ಈ ಸಂಸ್ಥೆಯ ಸಂಸ್ಥಾಪಕರಾದ ಕರಿಯಪ್ಪನವರನ್ನು ಸದಾ ಸ್ಮರಿಸಬೇಕು. ಕರಿಯಪ್ಪ ನವರು ಶಾಸಕರಾಗಿದ್ದಾಗ ಶಾಲೆಯಲ್ಲಿ ಸೀಟು ಪಡೆಯಲು ಅವರ ಬಳಿ ಹೋಗಿದ್ದೆ. ನಂತರ ಮುಖ್ಯಮಂತ್ರಿ ಬಳಿ ಹೋದರೂ ನನಗೆ ಆ ಶಾಲೆಯಲ್ಲಿ ಸೀಟು ಕೊಡಲಿಲ್ಲ. ನಮ್ಮ ಮಕ್ಕಳಿಗೆ ಅಂತಹ ಸ್ಥಿತಿ ಬರಬಾರದು ಎಂದು ಶಾಲೆಗಳನ್ನು ತೆರೆಯಲು ಮುಂದಾಗಿದ್ದೇವೆ.
ನೀವೆಲ್ಲರೂ ವಿದ್ಯೆಗೆ ಹೆಚ್ಚು ಆದ್ಯತೆ ನೀಡಬೇಕು
ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ। ಪಾತ್ರತ್ವಾದ್ಧನ ಮಾಪ್ನೋತಿ ಧನಾದ್ಧರ್ಮಂ ತತಃ ಸುಖಂ।।
ಅಂದರೆ ವಿದ್ಯೆಯಿಂದ ವಿನಯ, ಯೋಗ್ಯತೆ, ಜ್ಞಾನ ಹಾಗೂ ಹಣ ಸಿಗುತ್ತದೆ. ಹೀಗಾಗಿ ವಿದ್ಯೆ ಎಲ್ಲದಕ್ಕೂ ಮೂಲವಾಗಿದೆ.
ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲು ಪ್ರಯತ್ನಿಸಿದೆ. ಆದರೆ ಯಡಿಯೂರಪ್ಪ ನವರು ನಮ್ಮ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು.
ಈಗ ದಯಾನಂದ ಸಾಗರ ಸಂಸ್ಥೆ ಜತೆ ಚರ್ಚೆ ಮಾಡಿ ಖಾಸಗಿ ಕಾಲೇಜು ತಂದೆವು. ಕನಕಪುರದಲ್ಲಿ ಹಾಗೂ ರಾಮನಗರದಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು.
ಇತ್ತೀಚೆಗೆ ರಾಮನಗರದಲ್ಲಿ 100 ಹೊಸ ಸರ್ಕಾರಿ ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆವು. ಇನ್ನು ಕನಕಪುರ ರಸ್ತೆ ಕಾಮಗಾರಿ ಸಾಗುತ್ತಿದೆ. ಆದಷ್ಟು ಕನಕಪುರ ಸಮೀಪಕ್ಕೆ ಮೆಟ್ರೋ ತರುವ ಪ್ರಯತ್ನ ಮಾಡುತ್ತಿದ್ದೇವೆ.
ನೀವು ನನ್ನನ್ನು ಶಾಸಕನಾಗಿ, ಸುರೇಶ್ ಅವರನ್ನು ಸಂಸದರಾಗಿ ಆಯ್ಕೆ ಮಾಡಿದ್ದೀರಿ. ನಾವು ಈ ಕ್ಷೇತ್ರಕ್ಕೆ ಹೊಸ ರೂಪ ಕೊಟ್ಟಿದ್ದೇವೆ.”
ಕನಕಪುರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್,”ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕನಕಪುರದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಇದೇ ತಿಂಗಳು 26, 27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.”
ಕಾಡಾನೆ ದಾಳಿ ತಡೆಯಲು ಕ್ರಮ:
ಕನಕಪುರದಲ್ಲಿ ಕಾಡಾನೆ ದಾಳಿಗೆ ಜನ ಸಾಯುತ್ತಿರುವ ಬಗ್ಗೆ ಕೇಳಿದಾಗ, “ಕಾಡಾನೆ ದಾಳಿಗೆ 9 ಜನ ಸತ್ತಿದ್ದಾರೆ. ಈ ಬಗ್ಗೆ ಅರಿವಿದೆ. ಅರಣ್ಯ ಸಚಿವರ ಜತೆ ಚರ್ಚಿಸಿ, ರೈಲ್ವೆ ಕಂಬಿಗಳ ಮೂಲಕ ತಡೆಗೋಡೆ ನಿರ್ಮಾಣ ಮಾಡಲು ಸೂಚಿಸಿದ್ದೇನೆ. ಇತ್ತೀಚೆಗೆ ಈ ಭಾಗದಲ್ಲಿ 50 ಆನೆಗಳ ಹಿಂಡು ಹೋಗುತ್ತಿರುವ ವಿಡಿಯೋ ನೋಡಿದೆ. ಆದಷ್ಟು ಕಾಡಾನೆ ದಾಳಿ ನಿಯಂತ್ರಿಸಲು ಪ್ರಯತ್ನಿಸುತ್ತೇವೆ” ಎಂದು ತಿಳಿಸಿದರು.
ರಾಮನಗರದಲ್ಲಿ ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಎಸ್ಐ ಅಮಾನತು ಮಾಡುವ ಆದೇಶದ ಬಗ್ಗೆ ಕೇಳಿದಾಗ, “ನಾನು ಶಾಸಕರ ಜೊತೆ ಚರ್ಚೆ ಮಾಡಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಹೇಳಿದರು. ಹೀಗಾಗಿ ಪ್ರಕರಣದ ತನಿಖೆ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಪರಮೇಶ್ವರ್ ಅವರಿಗೆ ತಿಳಿಸಿದ್ದೇನೆ” ಎಂದರು.
ಬಿಜೆಪಿ, ಕುಮಾರಸ್ವಾಮಿ ಕುಮ್ಮಕ್ಕು:
ಈ ವಿಚಾರ ರಾಜಕೀಯ ತಿರುವು ಪಡೆಯುತ್ತಿರುವ ಬಗ್ಗೆ ಕೇಳಿದಾಗ, ” ಬಿಜೆಪಿ ಹಾಗೂ ದಳದವರಿಗೆ ಕೆಲಸ ಇಲ್ಲ. ಹೀಗಾಗಿ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವುದು ಬಿಜೆಪಿಯ ಕೆಲಸ. ರಾಮನಗರದ ಶಾಸಕರು ಹಾಗೂ ಪೊಲೀಸ್ ಅಧಿಕಾರಿ ಅಲ್ಪಸಂಖ್ಯಾತರು. ಬಿಜೆಪಿ ಅವರಿಗೆ ಅಲ್ಪಸಂಖ್ಯಾತರೆಂದರೆ ಆಗುವುದಿಲ್ಲ. ಅವರು ಸಂವಿಧಾನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಕೋಮು ಸಂಘರ್ಷಗಳಿಗೆ ಬಿಜೆಪಿ, ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರೇ ಕಾರಣ” ಎಂದು ತಿರುಗೇಟು ನೀಡಿದರು.
ಲೋಕಸಭೆ ಚುನಾವಣೆಗೆ ತಯಾರಿ:
ಲೋಕಸಭೆ ಚುನಾವಣೆ ತಯಾರಿ ವಿಚಾರವಾಗಿ ಕೇಳಿದಾಗ, “ವಿಧಾನಸಭೆ ಚುನಾವಣೆ ಮುಗಿದ ಮರುದಿನದಿಂದಲೇ ನಾವು ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಿದ್ದೇವೆ” ಎಂದು ತಿಳಿಸಿದರು.
ನಿಮ್ಮನ್ನು ಕಟ್ಟಿ ಹಾಕಲು ಮೈತ್ರಿ ನಾಯಕರು ಪ್ರಯತ್ನಿಸುತ್ತಿರುವ ಬಗ್ಗೆ ಕೇಳಿದಾಗ, “ವಿಧಾನ ಪರಿಷತ್ ಚುನಾವಣೆಯಲ್ಲಿ ಪುಟ್ಟಣ್ಣ ಅವರನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದರು. ಇಲ್ಲೂ ಅದೇ ರೀತಿ ಕಟ್ಟಿ ಹಾಕುತ್ತಾರೆ”ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ