Kannada NewsKarnataka NewsLatestPolitics

*ಅಲ್ಪಸಂಖ್ಯಾತ ಸಮುದಾಯದವರಿಗೆ ಲೋಕಸಭಾ ಟಿಕೆಟ್ ವಿಚಾರ; ಡಿಸಿಎಂ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಪಕ್ಷದ ಅಲ್ಪಸಂಖ್ಯಾತರ ನಾಯಕರ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಈ ಸಮುದಾಯದ ನಾಯಕರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಳಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಭೆ ಬಳಿಕ ಮಾತನಾಡಿದ ಡಿಸಿಎಂ, ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಣೆ ಹೆಸರಲ್ಲಿ ಇವರ ಕ್ಷೇತ್ರಗಳನ್ನು ವಿಭಜಿಸಿ, ಈ ಸಮುದಾಯದವರು ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗದ ರೀತಿಯಲ್ಲಿ ಮಾಡಲಾಗಿತ್ತು. ಆಮೂಲಕ ಅವರ ಮತಗಳನ್ನು ಒಡೆಯುವ ಕೆಲಸ ಮಾಡಲಾಗಿತ್ತು. ಹೀಗಾಗಿ ಅಲ್ಪಸಂಖ್ಯಾತರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದಾರೆ. ಈ ವಿಚಾರವನ್ನು ಸಮಿತಿಗೆ ಪಾಲಿಕೆ ಚುನಾವಣೆ ಸಮಿತಿ ಮುಂದೆ ಇಡಲಾಗುವುದು. ಅವರ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದರು.

ಇನ್ನು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು, ಸಂಸತ್ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಎಲ್ಲಾರೂ ಒಂದಾಗಿ ಕೆಲಸ ಮಾಡಿ ದೇಶವನ್ನು ರಕ್ಷಣೆ ಮಾಡಬೇಕು. ಇಂಡಿಯಾ ಗೆಲ್ಲಿಸಬೇಕು ಎಂಬುದು ನಮ್ಮೆಲ್ಲರ ಅಜೆಂಡಾ ಆಗಿದೆ.

ಲೋಕಸಭೆ ಚುನಾವಣೆಯಲ್ಲಿ 2 ಸ್ಥಾನ ನೀಡಬೇಕು ಎಂಬ ಬೇಡಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, “ಅವರ ಬೇಡಿಕೆಯಂತೆ ಸ್ಥಾನ ನೀಡಬೇಕು. ಅದರಲ್ಲಿ ತಪ್ಪೇನಿದೆ? ಅವರ ಜನಸಂಖ್ಯೆ ಅನುಗುಣವಾಗಿ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇರುತ್ತದೆಯೋ ಅಲ್ಲಿ ಟಿಕೆಟ್ ನೀಡಲಾಗುವುದು” ಎಂದು ತಿಳಿಸಿದರು.

ರಾಜ್ಯಪಾಲರು ಪರಿಷತ್ ಸದಸ್ಯರ ಆಯ್ಕೆ ವಿಚಾರವಾಗಿ ವರದಿ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, “ರಾಜ್ಯಪಾಲರು ವರದಿ ಕೇಳಿರುವ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ನಮ್ಮ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದೆ” ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ಜತೆಗಿನ ಸಭೆ ಕುರಿತು ಕೇಳಿದಾಗ, “ಮುಖ್ಯಮಂತ್ರಿಗಳು ಹಾಗೂ ನಾನು ನಮ್ಮ ಪಕ್ಷದ ಶಾಸಕರ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದು, ಅದಕ್ಕಾಗಿ ಕೆಲವು ಜಿಲ್ಲೆಗಳ ಶಾಸಕರ ಸಭೆ ನಾಳೆ ಕರೆದಿದ್ದೇವೆ. ಅಲ್ಲಿ ಶಾಸಕರ ಜತೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ. ನನಗೂ ಅವರ ಬಗ್ಗೆ ಗೊತ್ತಿದೆ. ಅವರ ವಿರುದ್ಧ, ಅವರ ತಂದೆ ವಿರುದ್ಧ ನಾನು ಸ್ಪರ್ಧಿಸಿದ್ದೇನೆ. ಅವರ ಪತ್ನಿ ವಿರುದ್ಧ ನನ್ನ ತಮ್ಮ ಸ್ಪರ್ಧಿಸಿದ್ದಾರೆ. ಕಾದು ನೋಡಿ, ಈಗ ನಾನು ಹೆಚ್ಚಾಗಿ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button