*ಶೀಘ್ರವೇ ಹೈಕಮಾಂಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: “ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ. ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಚಿವ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದರು.
ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸವನ್ನು ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿದೆಯೇ ಎಂಬ ಚರ್ಚೆ ಆಗಿದೆಯೇ, ಸಿಎಂ ಪುತ್ರ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ “ಆ ಬಗ್ಗೆ ಚರ್ಚೆ ಆಗಿಲ್ಲ” ಎಂದು ತಿಳಿಸಿದರು.
ಶಿವರಾತ್ರಿ ಹಬ್ಬದ ಶುಭಾಶಯಗಳು:
ರಾಜ್ಯದ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳು. ಶಿವನ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ. ಬರಗಾಲದಿಂದ ರಾಜ್ಯ ಮುಕ್ತವಾಗಲಿ ಎಂದು ರಾಜ್ಯದ ಜನರ ಪರವಾಗಿ ಶಿವನಲ್ಲಿ ಪ್ರಾರ್ಥಿಸುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ