ಪ್ರಗತಿವಾಹಿನಿ ಸುದ್ದಿ: ದರ್ಶನ್, ಮುಡಾ ವಿಚಾರ ಎಲ್ಲವನ್ನು ಬಿಟ್ಟುಬಿಡಿ. ಮಹದಾಯಿಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಹಣ ಕೊಡಿಸಿ ಎಂದು ಗಣೇಶ ಹಬ್ಬದ ದಿನ ಕೈ ಮುಗಿದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಎರಡು ಯೋಜನೆಗಳಿಗೆ ಇರುವ ವಿಘ್ನ ನಿವಾರಣೆ ಮಾಡಿಸಿ ಎಂದು ಇಲ್ಲಿಂದಲೇ ಪ್ರಹ್ಲಾದ ಜೋಶಿಯವರಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಡಾ, ವಾಲ್ಮೀಕಿ ಪ್ರಕರಣದ ಹಾದಿ ತಪ್ಪಿಸಲು ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲಿನ ಒಳಗಡೆ ಇರುವ ಫೋಟೋವನ್ನು ಸರ್ಕಾರವೇ ಬಿಡುಗಡೆ ಮಾಡಿದೆ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಸಿಎಂ ಈ ರೀತಿ ಪ್ರತಿಕ್ರಿಯಿಸಿದರು.
ಸದಾಶಿವ ನಗರದ ನಿವಾಸದ ಬಳಿ ಮಾತನಾಡಿದ ಅವರು “ಮಹದಾಯಿ ವಿಚಾರವಾಗಿ ಸರ್ವ ಪಕ್ಷ ಸಭೆ ಅಥವಾ ನಿಯೋಗದ ಸಭೆ ನಡೆಸುವುದೋ ಎನ್ನುವ ಬಗ್ಗೆ 15 ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗುವುದು. ಹಾಗೂ ನಮ್ಮ ಹೋರಾಟದ ಸ್ವರೂಪದ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದರು.
ಜೋಶಿ ಅವರು ಸರ್ಕಾರದ ಮೇಲೆ ಮಾಡಿರುವ ಗಂಭೀರ ಆರೋಪದ ಬಗ್ಗೆ ಮರು ಪ್ರಶ್ನಿಸಿದಾಗ “ಅವರು ಮಾಡುತ್ತಿರಲಿ” ಎಂದರು.
ಪ್ರೀತಿಯಿಂದ ಸುಧಾಕರ್ ಸವಾಲನ್ನು ಸ್ವೀಕರಿಸುತ್ತೇನೆ
ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆ ಶಿವಕುಮಾರ್ ಅವರನ್ನು ಭಗೀರಥ ಎಂದು ಕರೆಯುತ್ತೇನೆ ಎನ್ನುವ ಸಂಸದ ಸುಧಾಕರ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ “ಸಂಸದ ಡಾ. ಕೆ.ಸುಧಾಕರ್ ಅವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಾನು ಪ್ರೀತಿ, ಗೌರವಗಳಿಂದ ಸ್ವೀಕರಿಸುತ್ತೇನೆ. ಇದು ನನ್ನ ಜವಾಬ್ದಾರಿ ಹಾಗೂ ಸಲಹೆ ಎಂದೂ ಭಾವಿಸುತ್ತೇನೆ. ಅವರೂ ಎತ್ತಿನಹೊಳೆ ಭೂಮಿ ಪೂಜೆಯಲ್ಲಿ ಅವರೂ ಇದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಕ್ಕೆ ನೀರು ದೊರೆಯಲಿ ಎಂಬುದು ಅವರ ಆಸೆ. ಅವರ ಆಸೆ ಈಡೇರಿಸುವ ಕೆಲಸ ಮಾಡೋಣ” ಎಂದರು.
“ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ತರಬೇಕು ಎಂದು ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಸುಬ್ಬಾರೆಡ್ಡಿ, ಶಿವಶಂಕರ್ ರೆಡ್ಡಿ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಹಾಗೂ ಸುಧಾಕರ್ ಸೇರಿದಂತೆ ಅನೇಕರು ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದ್ದಾರೆ. ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ” ಎಂದರು.
“ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ಊರಿನಲ್ಲಿ ಇರುವುದಿಲ್ಲ. ಆನಂತರ ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು, ದೊಡ್ಡಬಳ್ಳಾಪುರ ಭಾಗದ ಸಮಸ್ಯೆಗಳ ವಿವರಣೆ ಹಾಗೂ ಅರಣ್ಯ ಭೂಮಿ ಸ್ವಾಧೀನ ತೊಂದರೆಗಳನ್ನು ಮುಖ್ಯಮಂತ್ರಿಗಳ ಬಳಿ ಒಂದು ವಾರಗಳ ನಂತರ ಮಾತನಾಡಿ ಬಗೆಹರಿಸಲಾಗುವುದು” ಎಂದು ಹೇಳಿದರು.
ಇನ್ನು ಒಂದು ತಿಂಗಳಲ್ಲಿ ಕೋವಿಡ್ ವರದಿಯನ್ನು ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವ ಕಾರಣಕ್ಕೆ ಸುಧಾಕರ್ ಅವರು ನಿಮ್ಮನ್ನು ಪದೇಪದೇ ಹೊಗಳುತ್ತಿದ್ದಾರೆಯೇ ಎಂದು ಕೇಳಿದಾಗ “ನನಗೆ ಕೋವಿಡ್ ವರದಿಯ ಬಗ್ಗೆ ಏನು ಗೊತ್ತಿಲ್ಲ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ಸಕಲೇಶಪುರದ ಎತ್ತಿನಹೊಳೆಯಲ್ಲಿದ್ದೆ” ಎಂದರು.
ಈಗ ಎಂಪಿ ಸುಧಾಕರ್ ಅಲ್ಲವೇ?
ಮಾತಿನ ಮಧ್ಯೆ ಡಿಸಿಎಂ ಅವರು “ಸುಧಾಕರ್ ಈಗ ಎಂಪಿ ಅಲ್ಲವೇ? ಎಂದು ಮಾಧ್ಯಮದವರ ಬಳಿ ಪ್ರಶ್ನಿಸಿದರು. ನಮ್ಮಲ್ಲಿ ಇಬ್ಬರು ಸುಧಾಕರ್ ಇದ್ದಾರೆ. ಇವರೂ ಸೇರಿ ಮೂರು ಜನ ಆಗುತ್ತಾರೆ. ನಮ್ಮವರು ಇಬ್ಬರೂ ಮಂತ್ರಿಗಳು. ಇವರು ಸಂಸದರು ಎಂದಾಗ, ಮಾಧ್ಯಮದವರು ‘ಮಾಜಿ ಸಚಿವರು ಆಗಿದ್ದರು’ ಎಂದು ಹೇಳಿದಾಗ ಮಾಜಿ ಸಚಿವ ಸುಧಾಕರ್” ಎಂದು ಎಂದರು.
ಬಯಲು ಸೀಮೆಯಲ್ಲಿ ಇನ್ನು ಕೆರೆಗಳು ತುಂಬಿಲ್ಲ
“ಗೌರಿ ಹಬ್ಬದ ದಿನ ಗಂಗೆಯನ್ನು ಪೂಜೆ ಮಾಡಿ ಸಂಭ್ರಮ ಪಟ್ಟಿದ್ದೇವೆ. ಇದನ್ನು ಒಂದು ಒಂದಷ್ಟು ಜನ ನೋಡಿ ಸಂಭ್ರಮಪಟ್ಟಿದ್ದಾರೆ ಟೀಕೆ ಮಾಡಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಬರಗಾಲದ ಛಾಯೆ ದೂರವಾಗಿ, ಉತ್ತಮ ಮಳೆಬಿದ್ದು ಜಲಾಶಯಗಳು ತುಂಬಿವೆ. ಬಯಲು ಸೀಮೆಯಲ್ಲಿ ಒಂದಿಷ್ಟು ಕಡೆ ಮಳೆ ಕಡಿಮೆಯಾಗಿದೆ. ಮಂಡ್ಯ ಬೆಂಗಳೂರು ಗ್ರಾಮಾಂತರ ತುಮಕೂರು ಈ ಭಾಗದಲ್ಲಿ ಇನ್ನೂ ಕೆರೆಗಳು ತುಂಬಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಎತ್ತಿನಹೊಳೆ ಯೋಜನೆ ಪ್ರಗತಿ ಕಂಡಿರಲಿಲ್ಲ. ಇದಕ್ಕೆ ನಾನಾ ಕಾರಣಗಳು ಇರಬಹುದು” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ