*ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಬಿಜೆಪಿ, ಎನ್ ಡಿಎ ಮೈತ್ರಿ ನಿಲುವೇನು? ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ*
ಪ್ರಗತಿವಾಹಿನಿ ಸುದ್ದಿ; ಪೆನ್ ಡ್ರೈವ್ ವಿಚಾರದಲ್ಲಿ ನಾವು ಜೆಡಿಎಸ್ ಪಕ್ಷದವರನ್ನು ಪ್ರಶ್ನೆ ಮಾಡುವುದಿಲ್ಲ. ಬಿಜೆಪಿ ಹಾಗೂ ಈ ವಿಚಾರದಲ್ಲಿ ಎನ್ ಡಿಎ ನಿಲುವೇನು ಎಂದು ತಿಳಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಳಿದರು.
ಬೆಳಗಾವಿಯಲ್ಲಿ ಮತ್ತು ಕೂಡ್ಲಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ “ಪ್ರಜ್ವಲ್ ಅವರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಿರುವುದು ಅವರ ಪಕ್ಷ ಹಾಗೂ ಕುಟುಂಬದ ವಿಚಾರ. ಆದರೆ ಈ ಹಗರಣದ ಹಿನ್ನೆಲೆಯಲ್ಲಿ ಮೈತ್ರಿ ಬಗ್ಗೆ ತಮ್ಮ ನಿಲುವೇನು ಎಂಬುದರ ಬಗ್ಗೆ ಬಿಜೆಪಿ ಹಾಗೂ ಎನ್ ಡಿಎ ನಾಯಕರು ಉತ್ತರ ನೀಡಬೇಕು ಎಂದರು.
ಪೆನ್ ಡ್ರೈವ್ ವಿಚಾರವಾಗಿ ತನಿಖೆಯಾಗಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರ ನಮ್ಮ ನಿಯಂತ್ರಣದಲ್ಲಿ ಇಲ್ಲ. ಏನೇ ಇದ್ದರು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ ನುಣುಚಿಕೊಳ್ಳಬಾರದು. ಕುಮಾರಸ್ವಾಮಿ, ಅವರ ಕುಟುಂಬ ಹಾಗೂ ಅವರ ಪಕ್ಷದವರು ಏನಾದರೂ ಮಾಡಿಕೊಳ್ಳಲಿ” ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶವಾಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿಗಳು ಯಾವ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ಈ ಕಾರಣಕ್ಕೆ ನಮ್ಮ ರಾಜ್ಯಕ್ಕೆ ಜನ ಬಹಳ ಉತ್ಸುಕತೆಯಿಂದ ಬರುತ್ತಿದ್ದಾರೆ. ಈ ಕಾರಣಕ್ಕೆ ವಾಜಪೇಯಿ ಅವರು ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ನಿಮಗೆ ಮತ ಸಿಗಲಿಲ್ಲ ಎಂದು ಕರ್ನಾಟಕ ರಾಜ್ಯದ ಬಗ್ಗೆ ಸುಳ್ಳು ಮಾತನಾಡಿದರೆ ಅದು ಭಾರತಕ್ಕೆ ಮಾಡುವ ಅಪಮಾನ. ವಿದೇಶಿಗರು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ದೇಶದಲ್ಲೇ ಅತ್ಯುತ್ತಮ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಇರುವ ರಾಜ್ಯ ಕರ್ನಾಟಕ” ಎಂದರು.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಯಾವ ರೀತಿ ಪ್ರಕ್ರಿಯೆ ಬರುತ್ತಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ದಕ್ಷಿಣ ಭಾಗದ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲಿದ್ದು, ಉತ್ತರ ಭಾಗದ ಕ್ಷೇತ್ರಗಳಲ್ಲೂ ಭರ್ಜರಿ ಜಯ ಸಾಧಿಸಲಿದೆ. ಉತ್ತರ ಕ್ಷೇತ್ರಗಳಲ್ಲಿ ಜನ ನಮಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಸಂಸತ್ ಸ್ಥಾನಗಳಲ್ಲಿ ನಾವು ಈ ಹಿಂದಿನ ದಾಖಲೆ ಮುರಿಯುತ್ತೇವೆ” ಎಂದರು.
ಪ್ರಜ್ವಲ್ ರೇವಣ್ಣ ಪರಾರಿಯಾಗಿರುವ ಬಗ್ಗೆ ಕೇಳಿದಾಗ, “ಪ್ರಜ್ವಲ್ ರೇವಣ್ಣ ಅವರ ವಿಚಾರವನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನೀವು ನನ್ನನ್ನು ಪ್ರಶ್ನಿಸುವ ಬದಲು ಬಿಜೆಪಿ ನಾಯಕರನ್ನು ಪ್ರಶ್ನಿಸಿ. ಈ ಭಾಗದ ಬಿಜೆಪಿ ನಾಯಕರ ನಿಲುವು ಏನು ಎಂದು ತಿಳಿಸಲಿ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ