*ಶಾಲೆಗಳ ನಿರ್ವಹಣೆಗೆ ರಾಜ್ಯಮಟ್ಟದ ಸಮಿತಿ ರಚನೆ; ಡಿಸಿಎಂ ಡಿ.ಕೆ.ಶಿವಕುಮಾರ್*
ನಂದವಾಡಿ ಏತನೀರಾವರಿಯಲ್ಲಿ ನೀರಾವರಿ ಒದಗಿಸಲು ಅಂದಾಜು ಪಟ್ಟಿ ಸಿದ್ಧ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರು ಕೇಳಿದ ಹಲವು ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರ ನೀಡಿದರು.
ಎ.ಎಸ್ ಪೊನ್ನಣ್ಣ ಅವರು ಕೇಳಿದ ಪ್ರಶ್ನೆ, ‘ಕೊಡಗು ಜಿಲ್ಲೆ ಬಾಗಮಂಡಲದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ’ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು ‘ಈ ಕಾಮಗಾರಿ ಮಾಡಲು 6-10-2016ರಲ್ಲಿ ಅನುಮೋದನೆ ನೀಡಲಾಗಿದ್ದು, ಸದರಿ ಕಾಮಗಾರಿ ಟೆಂಡರ್ ಆಧಾರದ ಮೇಲೆ 30 ಕೋಟಿಗೆ 2018ರಲ್ಲಿ ವಹಿಸಲಾಗಿದ್ದು, ಪ್ರಸ್ತುತ ಮೇಲ್ಸೆತುವೆ ಬಹುತೇಕ ಪೂರ್ಣಗೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ. 2023ರ ಅಕ್ಟೋಬರ್ ಅಂತ್ಯದ ವೇಳೆಗೆ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
ನಂತರ ಮಾತನಾಡಿದ ಪೊನ್ನಣ್ಣ ಅವರು ಮೇಲ್ಸೇತುವೆಗೆ ರ್ಯಾಂಪ್ ಗಳನ್ನು ನೀಡಿಲ್ಲ. ಮಳೆಯಲ್ಲಿ ಕೆಸರು ತುಂಬಿಕೊಂಡಿದ್ದು, ಈ ಯೋಜನೆ ಆರಂಭವಾಗಿ 5 ವರ್ಷವಾಗಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ನೊಟೀಸ್ ಕೂಡ ಕೊಟ್ಟಿಲ್ಲ. ಇದರಲ್ಲಿ ತನಿಖೆ ಅಗತ್ಯವಿದೆ. ಇದಕ್ಕೆ ಉತ್ತರ ನೀಡಿದ ಡಿಸಿಎಂ, ‘ಶಾಸಕರ ಮಾತನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ವರದಿ ತರಿಸಿಕೊಳ್ಳುತ್ತೇನೆ. ಆ ಭಾಗಕ್ಕೆ ಭೇಟಿ ಮಾಡಿದಾಗ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ’ ಎಂದು ತಿಳಿಸಿದರು.
ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ನಮ್ಮ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಯಾವುದೇ ಹುದ್ದೆ ಭರ್ತಿಯಾಗಿಲ್ಲ. ಈ ಬಗ್ಗೆ ನಮ್ಮ ಮೇಲೆ ಒತ್ತಡವಿದೆ. ಈ ವಿಚಾರವಾಗಿ ಡಿಸಿಎಂ ಅವರು ಸಿಎಂ ಹಾಗೂ ಶಿಕ್ಷಣ ಸಚಿವರ ಜತೆ ಮಾತನಾಡಿ ತೀರ್ಮಾನ ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ, ‘ನಾವು ನಮ್ಮ ಪ್ರಣಾಳಿಕೆಯಲ್ಲಿ ನವೋದಯ ಮಾದರಿ, ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪ್ರತಿ ಪಂಚಾಯ್ತಿಯಲ್ಲಿ ಉತ್ತಮ ಗುಣಮಟ್ಟದ ಶಾಲೆ ಆರಂಭಿಸುವ ಉದ್ದೇಶವಿದೆ. ನೀವು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ವಿಚಾರ ಪ್ರಸ್ತಾಪಿಸಿದ್ದು, ನಮ್ಮ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ತಯಾರು ಮಾಡಬೇಕು. ಇದಕ್ಕಾಗಿ ಹೊಸರೂಪ ನೀಡಲು ಚಿಂತನೆ ಇದೆ. ಪ್ರತಿಯೊಬ್ಬ ಸಂಸ್ಥೆಗಳು ಶಾಲೆಗಳ ನಿರ್ವಹಣೆ ಮಾಡಲು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಶಿಕ್ಷಕರ ನೇಮಕಾತಿ ಜೊತೆಗೆ ಬೆಂಗಳೂರಿನ ದೊಡ್ಡ ಸಂಸ್ಥೆಗಳು ಗ್ರಾಮೀಣ ಭಾಗದ ಶಾಲೆಗಳ ಜವಾಬ್ದಾರಿ ಪಡೆದು ಶಿಕ್ಷಕರು ಹಾಗೂ ಮಾನವ ಸಂಪನ್ಮೂಲ ನೀಡಬೇಕು ಈ ಬಗ್ಗೆ ಸಿಎಸ್ ಆರ್ ರೂಪದಲ್ಲಿ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.
ವಿಜಯಾನಂದ ಕಾಶಪ್ಪನವರ್ ಅವರು ಕೇಳಿದ ಪ್ರಶ್ನೆಗೆ, ‘ಹುನಗುಂದ ಕ್ಷೇತ್ರದ ಕೃಷ್ಣ ಹಾಗೂ ಮಲಪ್ರಭಾ ನದಿ ದಂಡೆ ಮೇಲಿರುವ 26 ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಬೇಕು. ನಂದವಾಡಗಿ ಏತ ನೀರಾವರಿಯಲ್ಲಿ 26 ಗ್ರಾಮಗಳಿಗೆ ನೀರವಾರಿ ಕಲ್ಪಿಸಿಕೊಡಬೇಕು’ ಎಂದು ಕೇಳಿದಾಗ, ‘ಬಾಕಿ ಉಳಿದಿರುವ 13 ಗ್ರಾಮಗಳ ಪುನರ್ವಸತಿ ಕೇಂದ್ರ ಸ್ಥಾಪನೆಗೆ 10 ಕೋಟಿ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಾಮಪಂಚಾಯ್ತಿಗೆ ಹಸ್ತಾಂತರ ಮಾಡಲಾಗಿದೆ. ಇನ್ನು ನಿರಾವರಿಗೆ 1 ಟಿಎಂಸಿ ನೀಡುವ ಬೇಡಿಕೆ ಸರ್ಕಾರದ ಸಮ್ಮತಿ ಇದೆ. ನಂದವಾಡಿ ಏತನೀರಾವರಿಯಲ್ಲಿ ನೀರಾವರಿ ಒದಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿದ್ದೇವೆ. ಮುಂದಿನ ಕೆಬಿಜೆಎಲ್ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.
ರಾಮನಗರ ಶಾಸಕರಾದ ಇಕ್ಬಾಲ್ ಅವರು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಮೇಲ್ಸೆತುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಕೂಡ ಈ ಕ್ಷೇತ್ರದಲ್ಲಿ ಭೇಟಿ ನೀಡಿ ಅಲ್ಲಿ ಅರ್ಕಾವತಿ ನದಿ ಭಾಗ ಸೇರಿದಂತೆ ಕೆಲವು ಭಾಗಗಳಲ್ಲಿ ಸಮಸ್ಯೆ ಇದೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡಿ ಅವರ ಬೇಡಿಕೆ ಈಡೇರಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡುತ್ತೇನೆ. ಆಮೂಲಕ ಪರಿಹಾರ ಒದಗಿಸುವ ಕೆಲಸ ಮಾಡಿಸಿಕೊಡುತ್ತೇವೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ