Belagavi NewsBelgaum NewsKannada NewsKarnataka NewsLatestPolitics

*ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ; ಡಿ.ಕೆ.ಶಿವಕುಮಾರ್ ಸ್ಪಷ್ಟನೆ*

ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದಿನ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಲ್ಲ. ಪ್ರಸ್ತುತ ಈ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಳಗಾವಿಯ ಸರ್ಕಿಟ್ ಹೌಸ್‌ನ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, “ಬಿಜೆಪಿ ಅವರ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. 2013- 18 ರ ನಮ್ಮ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡದ ಕಾರಣ ಸಮಸ್ಯೆ ಉಂಟಾಗಿದೆ.”

“ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೇ ಕಾರ್ಯಪ್ರವೃತ್ತರಾಗಿ ಇಂಧನ ಸಚಿವರಾದ ಜಾರ್ಜ್ ಅವರೊಟ್ಟಿಗೆ ಪಾವಗಡ ಸೋಲಾರ್ ಪಾರ್ಕ್‌ಗೆ ಬೇಟಿ ನೀಡಿ ಪರಿಶೀಲನೆ ಮಾಡಿದೆವು. ಈಗ ನೂತನ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಎಂದರು.

“ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಒಂದು ದಿನ ಮಳೆ ಬೀಳದೆ ಇದ್ದರೆ ಸರ್ಕಾರಕ್ಕೆ 1,000 ಕೋಟಿ ನಷ್ಟ ಉಂಟಾಗುತ್ತದೆ. ನಾವು ಈಗ ವಿದ್ಯುತ್ ಅನ್ನು ಪ್ರತಿ ಯೂನಿಟ್ ಗೆ 6- 7 ರೂಪಾಯಿಗೆ ಖರೀದಿ ಮಾಡಿ, ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. ಮಿಕ್ಕ ಹಣವನ್ನು ಸರ್ಕಾರ ತುಂಬಲಿದೆ.”

ಇನ್ನು ಈ ಭಾಗದಲ್ಲಿ ಕೆಲವರು ಕಾಲುವೆಗೆ ಪಂಪ್‌ ಹಾಕಿ ನೀರು ಎತ್ತುತ್ತಿರುವ ಕಾರಣ ಕಾಲುವೆಯ ನೀರು ಕೊನೆಯ ಭಾಗದ ರೈತರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಅದಕ್ಕೆ ಅನೇಕ ರೈತರು 10- 15 ಕಿಮೀ ದೂರ ನೀರನ್ನು ಪಂಪ್ ಮಾಡುತ್ತಿದ್ದಾರೆ‌. ಆದ ಕಾರಣ ನೀರು ಬಳಕೆದಾರರ ಸಂಘಗಳ ಬಗ್ಗೆ ಸಭೆ ನಡೆಸಿ, ಅವುಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಸೂಚನೆ ನೀಡಿದ್ದೇನೆ.”

“ಎತ್ತಿನಹೊಳೆಯಿಂದ ನೀರು ತರುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಎಲ್ಲಾ ಭಾಗಕ್ಕೂ ನೀರು ತಲುಪಬೇಕು ಎಂದರೆ ಮದ್ಯದಲ್ಲಿ ಪಂಪ್ ಹಾಕಿ ನೀರು ಬಳಸುವುದನ್ನು ತಪ್ಪಿಸಬೇಕು. ಇದಕ್ಕೆ ಸೂಕ್ತ ಕಾನೂನು ತರಬೇಕು.”

“ಇನ್ನು ವಾಲ್ಮಿ ತರಬೇತಿಗೆ ಧಾರವಾಡಕ್ಕೆ ಹೋಗಬೇಕಾಗಿದೆ. ರಾಜ್ಯದ ಆಯಾ ಭಾಗಗಳಲ್ಲಿ ವಾಲ್ಮಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಲ್ಲೇ ತರಬೇತಿ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇನೆ.

ಅತ್ಯಂತ ದಕ್ಷ ಅಧಿಕಾರಿಗಳು ಈ ಭಾಗದಲ್ಲಿ ಇದ್ದಾರೆ. ಅವರುಗಳೇ ರೈತರ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರು. ರೈತರ ಬಗ್ಗೆ ಹೆಚ್ಚು ಕಾಳಜಿಯಿದೆ ಅವರಿಗೆ. ಆದ ಕಾರಣ ಕಾಲುವೆಯಿಂದ ನೀರು ತೆಗೆಯುವವರಿಗೆ ಇಂತಿಷ್ಟು ಶುಲ್ಕ ಎಂದು ವಿಧಿಸುವ ಮಹಾರಾಷ್ಟ್ರ ಮಾದರಿ ಅಧ್ಯಯನ ಮಾಡಲು ಸೂಚನೆ ನೀಡಿದ್ದೇನೆ.

ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆಯಬೇಕು ಎಂದು ಸೂಚನೆ ನೀಡಿದ್ದು, ಈ ಕುರಿತು ಮೀನುಗಾರಿಕೆ ಸಚಿವರ ಬಳಿಯೂ ಚರ್ಚೆ ಮಾಡುತ್ತೇನೆ. ಪಂಪ್ ಮಾಡಿ ನೀರು ತುಂಬಿಸಲು ಸಾಕಷ್ಟು ವಿದ್ಯುತ್ ಖರ್ಚಾಗುತ್ತಿದ್ದು, ಅದರ ವೆಚ್ಚವನ್ನು ಈ ಮೂಲಕ ಭರಿಸಲು ನಿರ್ಧರಿಸಿದ್ದೇವೆ. ಬೆಳಗಾವಿ ಭಾಗದಲ್ಲಿ 1,200 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ.

ಕಾಲುವೆಗೆ ನೀರು ಬಿಡುವಾಗ ಒಂದು ಲೆಕ್ಕ, ಆನಂತರ ಒಂದು ಲೆಕ್ಕ ಸಿಗುತ್ತಿದೆ. ಅದಕ್ಕೆ ಈ ಎಲ್ಲಾ ವಿಚಾರಗಳನ್ನು ಸೇರಿಸಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದಷ್ಟು ಹೊಸ ಯೋಜನೆಗಳನ್ನು ರೂಪಿಸಲು ಚರ್ಚೆ ನಡೆಸುತ್ತಿದ್ದೇವೆ ಎಂದರು.”

ಉತ್ತರ ಕರ್ನಾಟಕ ಭಾಗದ ರೈತರ ಅದೃಷ್ಟ. ಮಲಪ್ರಭಾ ಒಂದು ಬಿಟ್ಟು ಹೆಚ್ಚಿನ ಎಲ್ಲಾ ಕೆರೆ, ಜಲಾಶಯಗಳು ಭರ್ತಿಯಾಗಿವೆ. ಹಳೇ ಮೈಸೂರು ಭಾಗದಲ್ಲೇ ಸಮಸ್ಯೆ ಹೆಚ್ಚಾಗಿದ್ದು, ದೇವರೆ ಕೈ ಹಿಡಿಯಬೇಕು ಎಂದು ಹೇಳಿದ್ದಾರೆ.

ಪ್ರಶ್ನೋತ್ತರ

ಮಹಾರಾಷ್ಟ್ರ ಸರ್ಕಾರ ಚಂದಗಡದಲ್ಲಿ ಕಚೇರಿ ಆರಂಭಿಸಿ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ನೀಡಲು ಹೊರಟಿದೆ ಎಂದು ಕೇಳಿದಾಗ “ಸುವರ್ಣಸೌಧ ಕಟ್ಟಿದ್ದೇ, ಬೆಳಗಾವಿ ನಮ್ಮ ರಾಜ್ಯದ ಎರಡನೇ ರಾಜಧಾನಿ ಎನ್ನುವ ಕಾರಣಕ್ಕೆ. ಈ ಭಾಗದ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ. ಯಾವುದೇ ವಿವಾದಗಳು ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ. ಈ ಬಗ್ಗೆ ಚರ್ಚೆ ನಡೆಸುತ್ತೇನೆ” ಎಂದು ತಿಳಿಸಿದರು‌.

“ನಿಮ್ಮ ಮೇಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತು ಇಂದು ಅಂತಿಮ ತೀರ್ಪು ಹೊರಬರುವ ದಿನ, ನಿಮ್ಮ ನಿರೀಕ್ಷೆ ಏನಿದೆ ಎಂದು ಕೇಳಿದಾಗ “ನನಗೂ ಸರಿಯಾದ ಮಾಹಿತಿ ಇರಲಿಲ್ಲ, ಈಗ ಒಬ್ಬರು ತಿಳಿಸಿದರು. ಎಫ್‌ಐಆರ್ ಹಾಕಿದ್ದು ಸರಿ ಇಲ್ಲ, ಲೋಪವಿದ್ದು, ಲೆಕ್ಕಾಚಾರ ಸರಿಯಿಲ್ಲ‌ವೆಂದು ಅರ್ಜಿ ಸಲ್ಲಿಸಿದ್ದೇ, ಏನಾಗುತ್ತದೆ ಎಂದು ಕಾದು ನೋಡಬೇಕು” ಎಂದು ಹೇಳಿದರು.

ಕನ್ನಡಿಗರ ವಿರುದ್ಧ ಇರುವ ತಮಿಳುನಾಡು ಸರ್ಕಾರ ಬೊಮ್ಮಸಂದ್ರದಿಂದ ಹೊಸೂರು ತನಕ ಮೆಟ್ರೋ ನಿರ್ಮಾಣಕ್ಕೆ ಟೆಂಡರ್ ಕರೆದಿರುವ ವಿಚಾರವಾಗಿ ಕೇಳಿದಾಗ “ಈ ಮೊದಲೇ ಅವರು ಬೇಡಿಕೆ ಇಟ್ಟಿದ್ದರು‌‌. ಎರಡೂ ರಾಜ್ಯಗಳ ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ, ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಾವೇನೂ ಟೆಂಡರ್ ಕರೆಯುತ್ತಿಲ್ಲ, ಸಾಧ್ಯತೆಯ ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಅಷ್ಟೇ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಶೇ 50 ರಷ್ಟು ಸಹಭಾಗಿತ್ವವಿದೆ. ಇದರಲ್ಲಿ ತಪ್ಪೇನಿದೆ?, ಮಹಾರಾಷ್ಟ್ರ ಮತ್ತು ಬೆಳಗಾವಿ ನಡುವೆ ಬಸ್ ಓಡಾಡಬಾರದು ಎಂದು ನಿಯಮ ಮಾಡಲು ಆಗುತ್ತದೆಯೇ? ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ರೈಲು ವ್ಯವಸ್ಥೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಅವರು ನನಗೂ ಮತ್ತು ಡಿ.ಕೆ.ಶಿವಕುಮಾರ್ ಅವರಿಗೂ ಆಂತರಿಕ ಭಿನ್ನಾಭಿಪ್ರಾಯವಿದೆ ಬಹಿರಂಗವಾಗಿ ಏನಿಲ್ಲ ಎಂದು ಹೇಳಿದ್ದಾರೆ ಎಂದಾಗ “ಯಾವ ಆಂತರಿಕವೂ ಇಲ್ಲ, ಬಹಿರಂಗವೂ ಇಲ್ಲ, ನನಗೆ ಯಾರ ಬಗ್ಗೆಯೂ ಭಿನ್ನಾಭಿಪ್ರಾಯಗಳು ಇಲ್ಲ, ಏತಕ್ಕೆ ಇರಬೇಕು ಇದೆಲ್ಲಾ?” ಎಂದು ಹೇಳಿದರು.

ದೂದ್‌ಗಂಗಾ ನದಿ ನೀರನ್ನ ಮಹಾರಾಷ್ಟ್ರದವರು ತಿರುವು ಮಾಡಿ ಬಳಸಿಕೊಳ್ಳುವ ಯೋಜನೆ ಮಾಡುತ್ತಿರುವ ಬಗ್ಗೆ ಕೇಳಿದಾಗ “ನೀವೆ ಈ ವಿಚಾರವನ್ನ ಮೊದಲು ಹೇಳುತ್ತಿರುವುದು. ತಾಂತ್ರಿಕ ಸಮಿತಿಯ ಜೊತೆ ಚರ್ಚೆ ನಡೆಸಿ ಮಾತನಾಡುತ್ತೇನೆ” ಎಂದರು.

ಹಿರೇಮಠದ ಶೀಗಳು ಆದಷ್ಟು ಬೇಗ ಮುಖ್ಯಮಂತ್ರಿಗಳಾಗಳಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ಕೇಳಿದಾಗ “ಐದು ವರ್ಷಗಳ ಆಡಳಿತ ನಡೆಸಿ ಎಂದು ಸುಭದ್ರ ಸರ್ಕಾರ ಸ್ಥಾಪನೆಗೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಜನರಿಗೆ ಆಸೆ ಇರುತ್ತದೆ ಅದಕ್ಕೆ ಗೌರವ ನೀಡುತ್ತಾ, ಮೊದಲು ನಮ್ಮ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡಬೇಕು” ಎಂದು ಹೇಳಿದರು”.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button