ಪ್ರಗತಿವಾಹಿನಿ ಸುದ್ದಿ; ಶ್ರೀರಂಗಪಟ್ಟಣ: ಮುಂಬರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ನನಗೆ ನಂಬಿಕೆ ಇದೆ. ಈ ಹಿಂದೆ ಕಾಂಗ್ರೆಸ್ ಪಕ್ಷ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಮತದಾರರು 7ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದರು. ಈ 7 ಶಾಸಕರನ್ನು ಗೆಲ್ಲಿಸಿ ಮಂಡ್ಯದಲ್ಲಿ ಯಾವ ಬದಲಾವಣೆ ಆಗಿದೆ? ಎಂದು ನೀವು ಯೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಭಾಗದಲ್ಲಿ ಅನೇಕ ವರ್ತಕರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆದ ನಂತರ ಈ ಭಾಗದ ವರ್ತಕರಿಗೆ ನಷ್ಟವಾಗಿದೆ. ಇದಕ್ಕಾಗಿ ಈ 7 ಶಾಸಕರು ನಮ್ಮ ಜನರಿಗೆ ಅನ್ಯಾಯ ಆಗಿದೆ ಎಂದು ಧ್ವನಿ ಎತ್ತಿದ್ದಾರಾ? ಇಲ್ಲ. ಇಂದು ಅವರ ವ್ಯಾಪಾರ ವಹಿವಾಟು ನಾಶವಾಗಿದೆ.
ಈ ಶಾಸಕರು ರೈತರ ಪರವಾಗಿ ಧ್ವನಿ ಎತ್ತಲಿಲ್ಲ. ಇಂದು ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಖರ್ಚು ಮಾತ್ರ ಗಗನಕ್ಕೇರಿದೆ. ಈ ಪರಿಸ್ಥಿತಿಯಲ್ಲಿ ಜನರನ್ನು ಆರ್ಥಿಕವಾಗಿ ಸಧೃಡ ಮಾಡಲು ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಇದಕ್ಕಾಗಿ 40 ಸಾವಿರ ಕೋಟಿಯಾಗಲಿ ಅಥವಾ 50 ಸಾವಿರ ಕೋಟಿಯಾಗಲಿ. ನಮಗೆ ಭ್ರಷ್ಟಾಚಾರ ತಡೆದು, ಹೇಗೆ ಹಣ ತಂದು ಅದನ್ನು ಪ್ರತಿ ಮನೆಗೆ ಹೇಗೆ ತಲುಪಿಸಬೇಕು ಎಂದು ಗೊತ್ತಿದೆ ಎಂದರು.
ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆ ಮೂಲಕ ಹಳ್ಳಿ ಜನರು ಯಾರೂ ಕೂಡ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಇನ್ನು ಬೆಲೆ ಏರಿಕೆಯಿಂದ ಮಹಿಳೆಯರು ಮನೆ ವೆಚ್ಚ ಸರಿದೂಗಿಸಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗೆ ಧೈರ್ಯ ತುಂಬಲು ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಮಾಡಿರುವವರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಕುರಿತ ಗ್ಯಾರಂಟಿ ಕಾರ್ಡ್ ಗಳನ್ನು ಪ್ರತಿ ಮನೆಗೆ ತಲುಪಿಸಬೇಕು.
ನಾನು ನಿಮ್ಮ ಮಗ. ನಾವು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೆಂಬಲ ನೀಡಿ ಅಧಿಕಾರ ಕೊಟ್ಟೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಾನು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದೆ. ನೀವು ಅವಕಾಶ ಕೊಟ್ಟಿ ಆಗಿದೆ. ನನಗೂ ಒಂದು ಅವಕಾಶ ನೀಡಿ. ಇಲ್ಲಿ ಯಾರೇ ನಿಂತರು ನಾನು, ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಪಕ್ಷಕ್ಕೆ ಮತಹಾಕಿ. ಇಲ್ಲಿರುವ ನೀವುಗಳು ಜೆಡಿಎಸ್ ಮತದಾರರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹೇಳಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ