*ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ; ಡಿಸಿಎಂ ಭರವಸೆ*
ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರಿನಲ್ಲಿ ನಡೆದ ನಾನಾ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧಿಕಾರದಲ್ಲಿ ಇರುವ ತನಕ ಯಾರು ಸಹ ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಮುಂದಿನ 10 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ಇರಲಿವೆ. ಕಾಂಗ್ರೆಸ್ ಬಡತನದ ವಿರುದ್ಧ ಯುದ್ದ ಮಾಡುತ್ತದೆ ಹೊರತು ಬಡವರ ವಿರುದ್ಧ ಯುದ್ದ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಗಳಿಗೆ ವರ್ಷಕ್ಕೆ 50- 60 ಸಾವಿರ ಉಳಿತಾಯವಾಗುತ್ತಿದೆ. ನಮ್ಮ ಸರ್ಕಾರ ರಚನೆ ಆದ ತಕ್ಷಣ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನ ತೆಗೆದುಕೊಂಡೆವು. ಮೋದಿ ಅವರು ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಹೇಳಿದರು. ಹಣ ಬಂದಿದೆಯೇ?
ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣ ನೀಡಿದ್ದೇವೆ. ಅಭಿವೃದ್ದಿ ಯೋಜನೆಗಳಿಗೆ 1 ಲಕ್ಷದ 26 ಸಾವಿರ ಕೋಟಿ ಹಣವನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಭಿವೃದ್ಧಿಗೆ ಹಣ ನೀಡಿಲ್ಲ ಎನ್ನುವ ಬಿಜೆಪಿಯವು ನನ್ನ ಬಳಿ ಬರಲಿ, ಎಲ್ಲೆಲ್ಲಿ,ಯಾವ, ಯಾವ ಕೆಲಸಗಳಿಗೆ ಹಣ ನೀಡಿದ್ದೇವೆ ಎಂದು ತೋರಿಸುತ್ತೇನೆ.
ಭದ್ರಾ ನೀರಾವರಿ ಯೋಜನೆಯಡಿ ಚಿಕ್ಕಮಗಳೂರು ಮತ್ತು ಕಡೂರಿನ ಕೆರೆಗಳಿಗೆ ನೀರು ತುಂಬಿಸಲು 1.5 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ಜಿಲ್ಲೆಯ 244 ಕೆರೆಗಳಿಗೆ 1,281 ಸಾವಿರ ಕೋಟಿ ಮೊತ್ತದಲ್ಲಿ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ತರಿಕೆರೆಯ 49 ಸಾವಿರ ಎಕರೆಗೆ ನೀರು ಒದಗಿಸುವ ಯೋಜನೆ ಮುಕ್ತಾಯ ಹಂತದಲ್ಲಿದೆ. ಜೂನ್ ವೇಳೆಗೆ ಲೋಕಾರ್ಪಣೆಯಾಗಲಿದೆ. ಇದಕ್ಕೆ 812 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಡೂರು ತಾಲ್ಲೂಕಿನ 72 ಸಾವಿರ ಹೆಕ್ಟೇರ್ ಪ್ರದೇಶಕ್ಕೆ 600 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ ಎಂದರು.
ಭದ್ರಾ 3 ಮತ್ತು 4 ನೇ ಹಂತದಲ್ಲಿ 564 ಕೋಟಿ ವೆಚ್ಚದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭವಾಗಲಿದ್ದು ಜುಲೈ ಹೊತ್ತಿಗೆ ಟೆಂಡರ್ ಕರೆಯಲಾಗುತ್ತದೆ. ರೈತರನ್ನು ಬದುಕಿಸಲು ನೂರಾರೂ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿದೆ.
ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಚಿಕ್ಕಮಗಳೂರು ಜಿಲ್ಲೆಯಿಂದ ಐದು ಶಾಸಕರನ್ನು ನೀಡಿದ ನಿಮ್ಮ ಋಣವನ್ನು ತೀರಿಸಲು ಹಾಗೂ ನಿಮಗೆ ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ.
ಕೇಂದ್ರ ಬಿಜೆಪಿ ಸರ್ಕಾರ ಭದ್ರಾ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಇದುವರೆಗೂ ಒಂದೇ ಒಂದು ರೂಪಾಯಿ ನೀಡಿಲ್ಲ. ಕಾಂಗ್ರೆಸ್ ಪಕ್ಷದ 136 ಶಾಸಕರು, ವಿಧಾನಪರಿಷತ್ ಸದಸ್ಯರು ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ನಡೆಸಿದೆವು. ಬಿಜೆಪಿ ಮತ್ತು ಜೆಡಿಎಸ್ ಸಂಸದರು ಬಾಯಿ ತೆಗೆಯಲೇ ಇಲ್ಲ.
ಇಬ್ಬರೂ ಒಂದಾದರೂ ವಿಧಾನಪರಿಷತ್ ಚುನಾವಣೆಯಲ್ಲಿ ಸೋತರು. ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರಿಗೆ ಫೋನ್ ಕರೆ ಮೇಲೆ ಕರೆ ಮಾಡಲಾಗಿತ್ತು. ಆದರೆ ವಿಜಯೇಂದ್ರ ಹೇಳುತ್ತಾರೆ ನಾವು ಯಾರಿಗೂ ಕರೆ ಮಾಡಿಲ್ಲ ಎಂದು.
ಆದರೆ ಶಾಮನೂರು ಶಿವಶಂಕರಪ್ಪ ಅವರಿಗೆ ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಸೇರಿ ಕರೆ ಮಾಡಿದ್ದರಂತೆ. ಶಿವಶಂಕರಪ್ಪ ಅವರು ಇಬ್ಬರಿಗೂ ಹಣ ಏನಾದರೂ ಬೇಕೇ ಎಂದು ಕೇಳಿದ್ದಾರೆ. ಇಲ್ಲ ಮತ ಬೇಕು ಎಂದು ಅವರಿಬ್ಬರು ಕೇಳಿದ್ದಾರೆ. ನನ್ನ ಬಳಿ ದೊಡ್ಡ ಪಟ್ಟಿಯೇ ಇದ್ದು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಈ ಜಿಲ್ಲೆಗೆ ಬಂದಾಗ ನೀವು ತೋರಿದ ಪ್ರೀತಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಶ್ರೀಮತಿ ಇಂದಿರಾ ಗಾಂಧಿ ಅವರ ಆತ್ಮಕ್ಕೆ ಶಾಂತಿ ಸಲ್ಲಿಸಿದ್ದೀರಿ.
ಮರಕ್ಕೆ ಬೇರು ಮುಖ್ಯವಾದಂತೆ, ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷದ ಮೇಲೆ ನೀವು ಇಟ್ಟಿರುವ ನಂಬಿಕೆಗೆ ನಾವು ನ್ಯಾಯ ಸಲ್ಲಿಸುತ್ತೇವೆ.
ನೀವೆಲ್ಲಾ ಭಾವನೆಗೆ ಮತ ಹಾಕದೆ ಬದುಕಿಗೆ ಮತ ಹಾಕಿದ್ದೀರಿ. ಉಳುವವನೆ ಭೂಮಿಯ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ, ತಲೆಯ ಮೇಲೆ ಸೂರು, ಅನ್ನಭಾಗ್ಯ, ರೈತರಿಗೆ ಉಚಿತವಾಗಿ ವಿದ್ಯುತ್ ಕೊಟ್ಟಂತಹ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ನಮಗೆ ಮತ ನೀಡಿದ್ದೀರಿ.
ಇತಿಹಾಸ ಮರೆತವನು, ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ.
ಹೋರಾಟ ಮಾಡುವವನಿಗೆ ಗೆಲುವು ಖಂಡಿತ ಏಕೆಂದರೆ ಹೋರಾಟಗಾರನಿಗೆ ಸೋಲಿನ ಭಯವಿಲ್ಲ. ಕಾಂಗ್ರೆಸ್ ಪಕ್ಷ ರೈತ, ಮಹಿಳೆ, ಯುವ ಜನಾಂಗದ ಮೇಲೆ ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು.
ಚುನಾವಣೆಗೆ ಮುಂಚಿತವಾಗಿ ಇಂದಿರಾಗಾಂಧಿ ಮೊಮ್ಮಗಳಾದ ಪ್ರಿಯಾಂಕ ಗಾಂಧಿ ಅವರಿಂದ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ನೀಡಿದೆವು. ಅದರಂತೆ ಚುನಾವಣೆ ಗೆದ್ದ ನಂತರ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ.
ಅನ್ನ ಕೊಟ್ಟ ರೈತ, ಗುರು ಕಲಿಸಿದ ಅಕ್ಷರ, ಮತದಾರ ಕೊಟ್ಟ ಪ್ರೀತಿ, ತಾಯಂದಿರು ನೀಡಿದ ಮಮತೆಯನ್ನು ಮರೆಯಲು ಸಾಧ್ಯವಿಲ್ಲ.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದಿದ್ದರು. “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ದೇವಸ್ಥಾನದ ಆದಾಯ ಹೆಚ್ಚಳವಾಗಿದೆ. ಹುಂಡಿಯಲ್ಲಿ ಹಣ ಸಂಗ್ರಹ ಹೆಚ್ಚಾಗುತ್ತಿದೆ. ಸಾವಿರಾರು ಮಹಿಳೆಯರು ನಿಮ್ಮ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ.” ಇದಕ್ಕಿಂತ ದೊಡ್ಡ ಆಶೀರ್ವಾದ ಯಾವುದು ಬೇಕು.
ಹಾಸನಾಂಭ ದೇವಸ್ಥಾನಕ್ಕೆ ಪ್ರತಿ ವರ್ಷ ಬರುತ್ತೇನೆ. ಕಳೆದ ವರ್ಷ ರೂ 2.5 ಕೋಟಿ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ವರ್ಷ ರೂ 8.5 ಕೋಟಿ ಹಣ ಸಂಗ್ರಹವಾಗಿದೆ.
ತೀರ್ಥಹಳ್ಳಿಯ ಶಾಸಕ ಅರಗ ಅಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಯೋಜನೆ ಎಂದು ಕರೆದರು. ಅವರಿಗೆ ಜ್ಞಾನ ಕಡಿಮೆ ಇರುವುದರಿಂದ ಹೀಗೆ ಹೇಳಿದ್ದಾರೆ. ಬಿಜೆಪಿ ನಾಯಕರಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ದ್ವಂದ್ವವಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ “ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಡವಾಗಿದೆ” ಎಂದು ಹೇಳಿದ್ದಾರೆ.
ಕರ್ನಾಟಕದ ಜನರು ನಮ್ಮ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರತಿಪಕ್ಷಗಳಿಗೆ ತಾಕತ್ತಿದ್ದರೆ ಅವರ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಎಂದು ಕರೆ ಕೊಡಿ. ಜನ ತಿರಸ್ಕರಿಸಲು ಒಪ್ಪುತ್ತಾರೆಯೇ ನೋಡೋಣ ಎಂದು ಸವಾಲು ಹಾಕಿದರು.
ಗೃಹಲಕ್ಷ್ಮಿ ಪ್ರತಿಯೊಬ್ಬರ ಮನೆಗೆ ತಲುಪುತ್ತಿದೆ. ಮೋಟಮ್ಮ ಅವರು ನನಗೆ ಹೆಣ್ಣು ಕುಟುಂಬದ ಕಣ್ಣು ಎನ್ನುವ ಮಾತು ಹೇಳಿಕೊಟ್ಟರು. ಅವರು ಸಚಿವರಾಗಿದ್ದಾಗ ಸ್ತ್ರೀ ಶಕ್ತಿ ಯೋಜನೆ ತಂದು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಯೋಜನೆ, ಬಿಸಿಯೂಟ ಯೋಜನೆ ತಂದು ಬಡ ಮಕ್ಕಳ ಹೊಟ್ಟೆತುಂಬಿಸುವ ಯೋಜನೆ ಜಾರಿಗೆ ತರಲಾಯಿತು.
ಯಡಿಯೂರಪ್ಪ ಅವರು ಕಾಂಗ್ರೆಸ್ ಸರ್ಕಾರ ತಂದಿರುವಂತೆ ಒಂದೇ ಒಂದು ಜನರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆಯೇ?
ಚಿಕ್ಕಮಗಳೂರಿನ ಮತದಾರರು ದಡ್ಡರಲ್ಲ ಬುದ್ದಿವಂತರು. ಶೃಂಗೇರಿ ಮಠದ ಶ್ರೀಗಳು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದರು, ಅಂದಿನಿಂದ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತವಾಯಿತು.
ಭ್ರಷ್ಟ ಮುಕ್ತ ಅಧಿಕಾರಿಗಳ ತಂಡವನ್ನು ಚಿಕ್ಕಮಗಳೂರಿಗೆ ನೇಮಿಸಲಾಗಿದೆ. ಜನರಪರವಾಗಿ ಇವರೆಲ್ಲಾ ಕೆಲಸ ಮಾಡಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಐದು ಕ್ಷೇತ್ರಗಳನ್ನು ನನ್ನ ಕ್ಷೇತ್ರಗಳು ಎಂದು ಕೆಲಸ ಮಾಡುತ್ತೇನೆ. ನಿಮ್ಮ ಋಣ ತೀರಿಸುತ್ತೇನೆ. ಲೋಕಸಭೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ