ಟ್ರಿಬ್ಯೂನಲ್ ರಚನೆ ಬೇಡ ಎಂದು ಕೇಂದ್ರಕ್ಕೆ ಮನವಿ ಮಾಡಿದ ಡಿಸಿಎಂ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬೆಂಗಳೂರಿನಲ್ಲಿ ನೀರು ಶುದ್ಧೀಕರಿಸಿ ಕೋಲಾರ ಭಾಗಕ್ಕೆ ನೀಡುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಟ್ರಿಬ್ಯೂನಲ್ ರಚನೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಜುಲೈ 5ರ ಒಳಗಾಗಿ ಇದನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಸಚಿವನಾದ ಬಳಿಕ ದೆಹಲಿಗೆ ಅಧಿಕೃತ ಭೇಟಿ ನೀಡಿದ್ದು, ನಿನ್ನೆ ರಾತ್ರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. ನಾನು ಈ ಹಿಂದೆ ನೀರಾವರಿ ಸಚಿವನಾಗಿ ನಂತರ ಕೊಳಚೆ ನೀರು ಶುದ್ಧೀಕರಣ ಮಾಡಿ ಅದನ್ನು ಬೇರೆ ಪ್ರದೇಶಗಳಿಗೆ ನೀಡಲಾಗಿತ್ತು. ಇನ್ನು ವೃಷಭಾವತಿ ಕಲುಷಿತ ನೀರು ಪರಿಷ್ಕರಿಸಿ ಅದನ್ನು ಕೆರೆ ತುಂಬಿಸಲಾಗಿತ್ತು. ನಮ್ಮ ಈ ಕೆಲಸವನ್ನು ಕೇಂದ್ರ ಸರ್ಕಾರ ಕೂಡ ಪ್ರಶಂಸೆ ಮಾಡಿತ್ತು. ಆದರೆ ಈಗ ತಮಿಳುನಾಡು ತಕರಾರು ಎತ್ತಿದ್ದು, ಜುಲೈ 5ರ ಒಳಗಾಗಿ ಪ್ರಾಧಿಕಾರ ರಚನೆಗೆ ಆದೇಶ ನೀಡಿದೆ. ನಾವು ಈಗಾಗಲೇ 500mcft ಶೇಖರಣೆಯ ಮಾರ್ಕಂಡೇಯ ಯೋಜನೆ, ವರ್ತೂರು ಟ್ಯಾಂಕ್, ನರಸಾಪುರ ಯೋಜನೆ ಕೈಗೆತ್ತಿ ಕೊಂಡಿದ್ದೇವೆ. ಈ ವಿಚಾರವಾಗಿ ಪ್ರಾಧಿಕಾರ ರಚನೆ ಬೇಡ. ನಾವು ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ. ದಿನನಿತ್ಯ ಈ ವಿಚಾರವಾಗಿ ಎರಡು ರಾಜ್ಯಗಳು ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ಅಧಿಸೂಚನೆ ಬಗ್ಗೆ ನಾನು ಕೇಂದ್ರ ಸಚಿವರ ಗಮನ ಸೆಳೆದಿದ್ದೇನೆ. ಮಹದಾಯಿ ವಿಚಾರವಾಗಿ ಪರಿಸರ ಇಲಾಖೆ ಅನುಮತಿ ಸಿಕ್ಕಿಲ್ಲ. ಎಲ್ಲೆಲ್ಲಿ ನದಿ ಹರಿಯುತ್ತದೆಯೋ ಅಲ್ಲಿ ಕಾಡು ಇದ್ದೇ ಇರುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಜಲಶಕ್ತಿ ಸಚಿವಾಲಯದಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಇಲಾಖೆಯಲ್ಲಿ ನಿಂತಿದೆ. ಇಲ್ಲಿ ಅನುಮತಿ ಸಿಕ್ಕರೆ ಕಳಸಾ ಬಂಡೂರಿ ಯೋಜನೆ ಜಾರಿ ಆಗಲಿದೆ ಎಂದು ಹೇಳಿದರು.
ಮೇಕೆದಾಟು ವಿಚಾರವಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಯೋಜನೆ ತಡವಾದಷ್ಟು ರಾಜ್ಯಕ್ಕೆ ನಷ್ಟ ಹೆಚ್ಚು. ಈ ಮಧ್ಯೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ. ಕಾವೇರಿ ನೀರನ್ನು ನಾವು ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಕಾರಣ ಇದರ ಬೀಗ ಕೇಂದ್ರದ ಬಳಿ ಇದೆ. ಅದು ಅವರಿಗೂ ಗೊತ್ತಿದೆ. ಆದರೂ ಈ ವಿಚಾರವಾಗಿ ಅವರಿಗೆ ಮನದಟ್ಟು ಮಾಡಬೇಕಿದೆ.
ನಮಗೆ ಯಾವುದೇ ರಾಜ್ಯದ ಜೊತೆ ಜಗಳ ಮಾಡಲು ಇಷ್ಟವಿಲ್ಲ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಇದಕ್ಕೆ ಮೊದಲು ಕಾನೂನು ತಂಡದ ಜೊತೆ ಮಾತನಾಡಬೇಕು ಎಂದರು.
ಪ್ರಶ್ನೋತ್ತರ:
ಟ್ರಿಬ್ಯೂನಲ್ ರಚನೆ ವಿಚಾರದಲ್ಲಿ ಕೂತು ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆಯೇ ಎಂದು ಪ್ರಶ್ನಿಸಿದಾಗ, “ವಾಸ್ತವಾಂಶ ಅರ್ಥ ಮಾಡಿಕೊಂಡರೆ ಎಲ್ಲವೂ ಸಾಧ್ಯ. ನದಿ ನೀರು ವಿಚಾರವಾಗಿ ದೊಡ್ಡ ವಿವಾದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಈ ನೀರಿನ ಪ್ರಮಾಣ 1 tmc ಕೂಡ ಇಲ್ಲ. ಪ್ರಾಧಿಕಾರ ರಚನೆ ಆದರೆ ಈ ಯೋಜನೆಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ” ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರರಿಂದ ಇದು ಸಾಧ್ಯ ಆಗಿರಲಿಲ್ಲ, ಈಗ ಯಾವ ರೀತಿ ಪ್ರಯತ್ನ ಮಾಡುತ್ತೀರಿ ಎಂದು ಕೇಳಿದಾಗ, “ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಹಿತ ಕಾಪಾಡಬೇಕು. ಅವರು ಮಾಡಲಿಲ್ಲ ಎಂದು ನಾವು ನಮ್ಮ ಕರ್ತವ್ಯ ಮಾಡದೇ ಇರಲು ಸಾಧ್ಯವೇ” ಎಂದು ತಿಳಿಸಿದರು.
ಹೆಚ್ಚುವರಿ ನೀರು ಸಮುದ್ರದ ಪಾಲಾಗುತ್ತಿರುವ ಬಗ್ಗೆ ಕೇಳಿದಾಗ, “ಕಳೆದ ವರ್ಷ 700 tmc ನೀರು ಸಮುದ್ರ ಪಾಲಾಗಿದೆ. ಈ ವರ್ಷ ಕುಡಿಯಲು ನೀರಿಲ್ಲ. ಆಣೆಕಟ್ಟು ಭದ್ರತೆ ವಿಚಾರವಾಗಿ ಮುಂದಿನ ತಿಂಗಳು ಒಂದು ಸಭೆ ಇದೆ. ಆ ಸಭೆಯನ್ನು ಕೆಆರ್ ಎಸ್ ನಲ್ಲಿ ಆಯೋಜಿಸುತ್ತಿದ್ದು, ಸಭೆಗೆ ಬಂದವರು ಪರಿಸ್ಥಿತಿ ಕಣ್ಣಾರೆ ನೋಡಲಿ. ನಮ್ಮಲ್ಲಿ ಮಳೆ ಬರುವುದೇ 100 ದಿನ. ಒಂದು ದಿನ ಮಳೆ ಬಂದರೆ ವಿದ್ಯುತ್ ಬಳಕೆಯಲ್ಲಿ ಎಷ್ಟು ಉಳಿತಾಯ ಇದೆ ಎಂದು ನನಗೆ ಅರಿವಿದೆ” ಎಂದು ತಿಳಿಸಿದರು.
ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕೆಲವು ಒತ್ತಡದಲ್ಲಿ ಯಾರಿಗೆ ಯಾವ ಆದೇಶ ಎಂದು ಗೊತ್ತಾಗುವುದಿಲ್ಲ. ಎಲ್ಲವೂ ಒಂದು ಹಂತಕ್ಕೆ ಬರಲು ಸಮಯ ಬೇಕು. ಎಲ್ಲವನ್ನೂ ಸರಿಪಡಿಸಲಾಗುವುದು. ನನ್ನ ಇಲಾಖೆಯಲ್ಲಿ ಇದುವರೆಗೂ ಒಂದೇ ಒಂದು ವರ್ಗಾವಣೆ ಮಾಡಿಲ್ಲ. ಅವರಿಗೆ ಮಾಹಿತಿ ಇದ್ದರೆ ನೀಡಲಿ” ಎಂದು ತಿಳಿಸಿದರು.
ರೇಣುಕಾಚಾರ್ಯ ಅವರ ಪತ್ರಿಕಾಗೋಷ್ಠಿ ವಿಚಾರವಾಗಿ ಪ್ರಧಾನಿ ಕಾರ್ಯಕ್ರಮಕ್ಕೆ ಜನ ಕರೆತರಲು ಒತ್ತಡ ಇತ್ತೆ ಎಂದು ಕೇಳಿದಾಗ, “ನಿಮಗೆ ಸರಿಯಾದ ಮಾಹಿತಿ ಇಲ್ಲ ಎನಿಸುತ್ತದೆ. ಈ ವಿಚಾರವಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಪ್ರಧಾನಿ ಸಭೆಗೆ ಕಾಲೇಜು ಮಕ್ಕಳನ್ನು ಕರೆ ತರುವಂತೆ ಆದೇಶ ನೀಡಿದ್ದರು. ನಾವು ಅದನ್ನು ಪ್ರಶ್ನೆ ಮಾಡಿದ್ದೆವು. ಆ ಬಗ್ಗೆ ನೀವು ಪ್ರಶ್ನೆ ಮಾಡುತ್ತಿಲ್ಲ. ರೇಣುಕಾಚಾರ್ಯ ಅವರ ಹೇಳಿಕೆ ಬಗ್ಗೆ ಅಚ್ಚರಿ ಇಲ್ಲ” ಎಂದು ತಿಳಿಸಿದರು.
ರೇಣುಕಾಚಾರ್ಯ ಕಾಂಗ್ರೆಸ್ ಬರುತ್ತಾರಾ ಎಂದು ಕೇಳಿದಾಗ, “ಪ್ರಧಾನಿಗಳು ಬಂದರೆ ನಾವು ಭೇಟಿ ಮಾಡಬೇಕು. ಸಿದ್ದರಾಮಯ್ಯ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸೌಹಾರ್ದಯುತ ಭೇಟಿ ಸಹಜ. ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು” ಎಂದು ತಿಳಿಸಿದರು.
ತೆಲಂಗಾಣದಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸೇರ್ಪಡೆಯನ್ನು ಡಿ.ಕೆ. ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ ಎಂದು ಕೇಳಿದಾಗ, “ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಅವರ ಕುಟುಂಬ ಬಹಳ ಗೌರವಯುತ ಕುಟುಂಬ. ಅವರ ತಂದೆ ಹಾಗೂ ನಾನು ಉತ್ತಮ ಸ್ನೇಹಿತರು. ಜತೆಯಲ್ಲಿ ರಾಜಕೀಯ ಮಾಡಿದ್ದೆವು. ರಾಜಶೇಖರ ರೆಡ್ಡಿ ಅವರಿಗೆ ನನ್ನ ಮೇಲೆ ಉತ್ತಮ ಅಭಿಮಾನ ಇತ್ತು” ಎಂದು ತಿಳಿಸಿದರು.
ರಾಷ್ಟ್ರ ರಾಜಕಾರಣ ಪ್ರವೇಶಿಸುತ್ತಿರಾ ಎಂದು ಕೇಳಿದಾಗ, “ನನಗೆ ಹಿಂದಿ ಬರುವುದಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿ, ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಂಡರೆ ಸಾಕು” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ