Belagavi NewsBelgaum NewsKannada NewsKarnataka NewsLatestPolitics

*ಕೃಷ್ಣಾ ಮೇಲ್ದಂಡೆ ಸೇರಿದಂತೆ ವಿವಿಧ ಯೋಜನೆಗಳ ಭೂ ಸಂತ್ರಸ್ತ ರೈತರ ಪರಿಸ್ಥಿತಿ, ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿರುವ ಭೂ ಸಂತ್ರಸ್ತ ರೈತರ ಪರಿಸ್ಥಿತಿ ಹಾಗೂ ಸಮಸ್ಯೆಗಳ ಅಧ್ಯಯನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ವಿರೋಧ ಪಕ್ಷಗಳ ಸದಸ್ಯರನ್ನು ಒಳಗೊಂಡಂತೆ ಅಧ್ಯಯನ ಸಮಿತಿ ರಚಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ಬಿಜೆಪಿ ಸದಸ್ಯರಾದ ನಿರಾಣಿ ಹನುಮಂತ ರುದ್ರಪ್ಪ ಹಾಗೂ ಪಿ.ಹೆಚ್ ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ವಸತಿ ಹಾಗೂ ಜಮೀನು ಕಳೆದುಕೊಂಡ ರೈತರ ಸಮಸ್ಯೆ, ಪುನರ್ ವಸತಿ ಬಗ್ಗೆ ಗುರುವಾರ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ನಾನು ಬಹಳ ಆಸಕ್ತಿಯಿಂದ ಈ ನೀರಾವರಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಕಳೆದ ಅಧಿವೇಶನದ ವೇಳೆ ನಾನು ಈ ಯೋಜನೆ ವಿಚಾರವಾಗಿ ಎಲ್ಲಾ ಪಕ್ಷದ ಸದಸ್ಯರ ಸಭೆ ಕರೆದಿದ್ದೆ. ನಾವು ಬೊಮ್ಮಾಯಿ ಅವರ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಪರಿಹಾರ ನಿಗದಿ ಮಾಡಿ ರೈತರ ಒಪ್ಪಿಗೆ ಆಧಾರದ ಮೇಲೆ ಭೂಸ್ವಾಧೀನ ಮಾಡಲು ಮುಂದಾಗಿದ್ದೇವೆ. ಇದಕ್ಕಾಗಿ ಮುಳುಗಡೆ ಪ್ರದೇಶದಲ್ಲಿ ಪ್ರತಿ ಎಕರೆಗೆ 35-40 ಲಕ್ಷ ಹಾಗೂ ಕಾಲುವೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ರೈತರಿಗೆ ಪ್ರತಿ ಎಕರೆಗೆ 20-30 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಇಷ್ಟು ದೊಡ್ಡ ಪ್ರಮಾಣದ ತೀರ್ಮಾನ ಹಿಂದೆ ಎಂದಾದರೂ ಆಗಿತ್ತಾ, ಇಲ್ಲ” ಎಂದರು.

“ಈ ಯೋಜನೆಯಲ್ಲಿ ಭೂ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಸುಮಾರು 80 ಸಾವಿರ ಕೋಟಿಯಷ್ಟು ಹಣ ಬೇಕಾಗುತ್ತದೆ. ಪುನರ್ ವಸತಿ ವಿಚಾರವಾಗಿ ಏನಾಗುತ್ತಿದೆ ಎಂದು ನಿಮಗೂ ಗೊತ್ತಿದೆ. ವಾಸ್ತವದಲ್ಲಿ 7-8 ಲಕ್ಷ ಮೌಲ್ಯ ಇರುವ ಜಮೀನಿಗೆ ನ್ಯಾಯಾಲಯದಲ್ಲಿ 10 ಕೋಟಿ ಪರಿಹಾರ ತೀರ್ಮಾನ ಮಾಡಿದರೆ, ಯಾವ ಸರ್ಕಾರ ಇದನ್ನು ನೀಡಲು ಸಾಧ್ಯ? ಇದು ಯಾವ ರೀತಿಯ ಲೆಕ್ಕಾಚಾರ? ಏತ ನೀರಾವರಿ ಯೋಜನೆಗಳು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲು ರವಿ ಅವರ ನೇತೃತ್ವದಲ್ಲಿ ಸಮಿತಿ ಮಾಡಿ ಕಳುಹಿಸುತ್ತಿದ್ದೇನೆ” ಎಂದರು.

Home add -Advt

“ಕೇವಲ ಈ ಯೋಜನೆ ಮಾತ್ರವಲ್ಲ ರಾಜ್ಯದ ಇತರೆ ಭಾಗಗಳಲ್ಲಿ ಈ ರೀತಿ ಭೂ ಸಂತ್ರಸ್ತ ರೈತರಿದ್ದಾರೆ ಅವರ ಪರಿಸ್ಥಿತಿ ಅಧ್ಯಯನಕ್ಕೆ ನೀವು ಸಲಹೆ ನೀಡಿದ್ದು, ನಾನು ನಿಮ್ಮ ಸಲಹೆಗಳನ್ನು ಒಪ್ಪುತ್ತೇನೆ. ನಿಮ್ಮಗಳನ್ನು ಸೇರಿಸಿ ಅದಕ್ಕೆ ಸಮಿತಿ ರಚಿಸುತ್ತೇನೆ. ಈ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸುಮಾರು 20 ಸಾವಿರ ಪ್ರಕರಣಗಳು ಬಾಕಿ ಇವೆ. ನೀವುಗಳು ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪುನರ್ ವಸತಿ ವಿಚಾರದಲ್ಲಿ ನಾವು ಏನೆಲ್ಲಾ ಸಹಾಯ ಮಾಡಬಹುದೋ ಅದನ್ನು ಮಾಡುತ್ತೇವೆ” ಎಂದು ಭರವಸೆ ನೀಡಿದರು.

ಮಹಾರಾಷ್ಟ್ರ ಭೀಮಾ ನದಿ ನೀರಿನ ಬಳಕೆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ:

ಇನ್ನು ಸದಸ್ಯರಾದ ತಳವಾರ್ ಸಾಬಣ್ಣ ಅವರು ಭೀಮಾ ನದಿ ನೀರನ್ನು ಮಹಾರಾಷ್ಟ್ರದವರು ಅಕ್ರಮವಾಗಿ ಬಳಸಿಕೊಂಡು, ಅನಧಿಕೃತವಾಗಿ ಬ್ಯಾರೇಜ್ ನಿರ್ಮಿಸಿ 95 ಟಿಎಂಸಿಗಿಂತ ಹೆಚ್ಚಿನ ನೀರು ಬಳಸುತ್ತಿರುವ ಬಗ್ಗೆ ಗಮನ ಸೆಳೆದರು.

ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ಮಾನ್ಯ ಸದಸ್ಯರು ಹೇಳಿದಂತೆ ನಾವು ಕುಡಿಯುವ ನೀರಿಗೆ ಅವರ ಬಳಿ ಅರ್ಜಿ ಹಾಕಿ ಬೇಡುವುದು ಮಾಡಿದರೆ, ಅವರು ಸುರಂಗ ಕೊರೆದು ನೀರು ತೆಗೆದುಕೊಂಡು ಹೋಗುತ್ತಿದ್ದಾರಂತೆ. ಈ ಜಾಗಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರಾ ಎಂದು ಪರಿಶೀಲನೆ ಮಾಡುತ್ತೇನೆ. ಈ ವಿಚಾರವಾಗಿ ಒಂದು ವರದಿಯನ್ನು ತರಿಸಿಕೊಳ್ಳುತ್ತೇನೆ. ನಂತರ ನಿಮ್ಮ ಜೊತೆ ಚರ್ಚೆ ಮಾಡುತ್ತೇನೆ. ನಿಮ್ಮ ಬಳಿ ಇರುವ ಪತ್ರಿಕೆಗಳ ವರದಿಗಳನ್ನು ನನಗೆ ನೀಡಿ, ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡೋಣ. ಇದು ಅಂತರ ರಾಜ್ಯ ವಿಚಾರವಾಗಿದ್ದು, ಬಿಕ್ಕಟ್ಟಿಗೆ ಕಾರಣವಾಗಬಹುದು. ನಮ್ಮ ರಾಜ್ಯದ ಹಿತ ಕಾಯಲು ಬಿಕ್ಕಟ್ಟು ಆದರೆ ಎದುರಿಸೋಣ. ಸರ್ಕಾರದ ಗಮನಕ್ಕೆ ಉತ್ತಮ ವಿಚಾರವನ್ನು ತಂದಿರುವುದಕ್ಕೆ ಅಭಿನಂದನೆಗಳು” ಎಂದರು.

“ಕೃಷ್ಣಾ ಜಲವಿವಾದ ನ್ಯಾಯಾಧಿಕರಣ 1 1976ರಲ್ಲಿ ನೀಡಿರುವ ಅಂತಿಮ ತೀರ್ಪಿನಲ್ಲಿ ಮಹಾರಾಷ್ಟ್ರವು ಭೀಮಾ ಮುಖ್ಯ ನಂದಿಯಿಂದ 95 ಟಿಎಂಸಿ ನೀರಿಗಿಂತ ಹೆಚ್ಚಿನ ನೀರನ್ನು ಬಳಸಬಾರದೆಂದು ಹಾಗೂ ಕರ್ನಾಟಕ ಭೀಮಾ ಮುಖ್ಯ ನದಿಯಿಂದ 15 ಟಿಎಂಸಿಗಿಂತ ಹೆಚ್ಚಿನ ನೀರನ್ನು ಬಳಸಬಾರದೆಂದು ನಿರ್ಬಂಧ ಹಾಕಿದೆ. ಜೊತೆಗೆ ಅಂತಿಮ ತೀರ್ಪಿನಲ್ಲಿ ಯಾವುದೇ ರಾಜ್ಯ ಮತ್ತೊಂದು ರಾಜ್ಯಕ್ಕೆ ನೀರನ್ನು ಬಿಡುಗಡೆ ಮಾಡುವ ಕುರಿತು ಆದೇಶ ಮಾಡಿರುವುದಿಲ್ಲ. ಕೃಷ್ಮಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳ ಅಡಿಯಲ್ಲಿ ಭೀಮಾ ನದಿಯಿಂದ 15 ಟಿಎಂಸಿ ನೀರನ್ನು ಬಳಸಿಕೊಳ್ಳಲು ಒಟ್ಟು 6 ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ” ಎಂದು ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

“ಕರ್ನಾಟಕ ರಾಜ್ಯವು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ 2ರ ಮುಂದೆ 12 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆ ಮುಂದಿಟ್ಟಿತ್ತು. ಆದರೆ ನ್ಯಾಯಾಲಯ ಇದನ್ನು ಪರಿಗಣಿಸಲಿಲ್ಲ. ಈ ನ್ಯಾಯಾಧಿಕರಣ ತೀರ್ಪಿನಲ್ಲಿ ಮಹಾರಾಷ್ಟ್ರ 3 ಟಿಎಂಸಿ ನೀರನ್ನು ನದಿಯಲ್ಲಿ ಕನಿಷ್ಠ ಹರಿವಿಗಾಗಿ ಬಿಡುಗಡೆ ಮಾಡಬೇಕು, ಇದರಲ್ಲಿ 1 ಟಿಎಂಸಿ ನೀರನ್ನು ಎರಡು ರಾಜ್ಯಗಳ ಗಡಿ ಪ್ರದೇಶದ ತಾಕಳಿ ಮಾಪನ ಕೇಂದ್ರದಲ್ಲಿ ನದಿಯಲ್ಲಿನ ಕನಿಷ್ಠ ಹರಿವಿಗೆ ಹರಿಸಲು ಸೂಚಿಸಿದೆ” ಎಂದು ವಿವರಿಸಿದ್ದಾರೆ.

ಮೇಲ್ಮನೆಯಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಅಂಗೀಕಾರ

ಇದಕ್ಕೂ ಮುನ್ನ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು.

Related Articles

Back to top button