ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಆದಿಚುಂಚನಗಿರಿ ಮಠದ ಬಿಜಿಎಸ್ಸಿಇಟಿಯಲ್ಲಿ ನಡೆದ ಯುಪಿಎಸ್ ಸಿ ತೇರ್ಗಡೆ ಕರ್ನಾಟಕದ ಅಭ್ಯರ್ಥಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಭ್ಯರ್ಥಿಗಳಿಗೆ ಮಹತ್ವದ ಪಾಠ ಮಾಡಿದ್ದಾರೆ.
ಯಾವುದೇ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡುವಾಗ ‘ಶತ್ರು ವಿನಾಶಾಯತಾ’ ಎಂಬ ಮಾತು ಬರಬಾರದು.
ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನ-ಸಂಪಾದಾ |
ಜ್ಞಾನ ಶಕ್ತಿ ಸ್ವರೂಪಸ್ಯ ದೀಪ-ಜ್ಯೋತಿರ್-ಪ್ರಕಾಶಿತ ಎಂದು ಶ್ಲೋಕ ಹೇಳಬೇಕು.
ಅಂದರೆ ಎಲ್ಲರೂ ವಿದ್ಯಾವಂತರಾಗಿ, ಆರೋಗ್ಯ, ಆಯುಷ್ಯವಂತರಾಗಲಿ. ಇಂದು ಹಚ್ಚಿರುವ ಜ್ಯೋತಿ ನಿಮ್ಮನ್ನು ಕತ್ತಲಿಂದ ಬೆಳಕಿನತ್ತ ಕರೆದೊಯ್ಯಲಿ ಎಂದು ಎಂದು ಪ್ರಾರ್ಥಿಸುತ್ತೇನೆ.
ನಮಗೆ ಯಾರೂ ಶತ್ರುಗಳು ಬೇಡ. ಅವರವರು ಮಾಡಿದ್ದು ಅವರಿಗೆ. ಶತ್ರುವನ್ನು ನಾವು ಮಿತ್ರರನ್ನಾಗಿ ಮಾಡಿಕೊಂಡು ಬದುಕಬೇಕು. ಯಾರು ಯಾರಿಗೂ ಶಾಶ್ವತ ಮಿತ್ರರಲ್ಲ, ಶತ್ರುಗಳಲ್ಲ. ಪ್ರತಿಭಾವಂತ ಯುವಕರು ಈ ದೇಶದ ಆಸ್ತಿ. ನೀವು ಬಹಳ ಶ್ರಮದಿಂದ ಆಸೆಯಿಂದ ಓದಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ್ದೀರಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾಂಗ ಕೆಲಸ ಮಾಡುತ್ತದೆ. ನಾವು ಶಾಸಕಾಂಗ ಮಾಡುವ ಕಾನೂನು ನೀವು ಕಾರ್ಯಾಂಗದವರು ಜಾರಿ ಮಾಡಬೇಕು. ನಮ್ಮ ತಪ್ಪನ್ನು ತಿದ್ದಲು ನ್ಯಾಯಾಂಗ ಇದೆ. ಮೂರು ಅಂಗಗಳು ಕೆಲಸ ಮಾಡದಿದ್ದರೆ ಟೀಕೆ ಮಾಡಲು ಪಟ್ರಿಕಾಂಗ ಇದೆ.
ಮಠಗಳು, ಸಂಘ ಸಂಸ್ಥೆಗಳು ಜನರಿಗೆ ಸೇವೆ ಮಾಡುತ್ತಾ ಬಂದಿವೆ. ಎಲ್ಲಾ ಧರ್ಮ ಹಾಗೂ ವರ್ಗದ ಜನರು ಸಾಮರಸ್ಯದಿಂದ ಬಾಳಲಿ. ಸಮಾಜದಲ್ಲಿ ಶಾಂತಿ ನೆಲೆಸಲಿ. ಸಮಾಜದ ಋಣ ತೀರಿಸಬೇಕು. ಆಗ ಬದುಕು ಸಾರ್ಥಕ ಎಂದು ಬಾಲಗಂಗಾಧರನಾಥ ಸ್ವಾಮಿಗಳು ಹೇಳಿದ್ದಾರೆ.
ಸಮಾಜದ ಋಣ ತೀರಿಸುವಾಗ ಧರ್ಮದಿಂದ ತೀರಿಸಬೇಕು. ದೇವರು ನಿಮಗೆ ಕೊಟ್ಟಿರುವ ಅವಕಾಶದಲ್ಲಿ ನೀವು ಸಮಾಜದ ಋಣ ತೀರಿಸಿ. ಹಣ ಮತ್ತು ಸಂಪತ್ತು ನೀರಿನಂತೆ. ಬದುಕಿನ ದೋಣಿ ಸಾಗಲು ಎಷ್ಟುಬೇಕೊ ಅಷ್ಟು ಸಂಗ್ರಹ ಮಾಡಿಕೊಳ್ಳಬೇಕು. ಅತಿಯಾಗಿ ಆಸೆ ಮಾಡಿದರೆ, ದೋಣಿ ಮುಳುಗುತ್ತದೆ ಎಂದು ನಮ್ಮ ಸ್ವಾಮಿಗಳು ಹೇಳಿದ್ದಾರೆ.
ಅವರು ಹಾಕಿಕೊಟ್ಟರು ಮಾರ್ಗದರ್ಶನದಲ್ಲಿ ನಾವು ಸಾಗಬೇಕಿದೆ. ಅಪಾಯದಲ್ಲಿ ಧೈರ್ಯ, ಕಷ್ಟದಲ್ಲಿ ತಾಳ್ಮೆ, ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ, ದುಃಖದಲ್ಲಿ ಸಮಾಧಾನದಿಂದ ಇರಬೇಕು. ಆಗ ನಮಗೆ ಭಯ ಇರುವುದಿಲ್ಲ. ನಿಮಗೆ ಬದುಕಿನಲ್ಲಿ ಯಾರು ಸಹಾಯ ಮಾಡಿದ್ದಾರೆ ಅವರನ್ನು ಸ್ಮರಿಸಬೇಕು. ಉಪಕಾರ ಸ್ಮರಣೆ ಇಲ್ಲವಾದರೆ ಆತ್ಮಸಾಕ್ಷಿ ಒಪ್ಪುವುದಿಲ್ಲ.
ಜನ ಕಷ್ಟ ಇದ್ದಾಗ ಮಾತ್ರ ಅಧಿಕಾರಿಗಳ ಬಳಿ ಬರುತ್ತಾರೆ. ಇದೇ ಕಾರಣಕ್ಕೆ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮುಂದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆದಿದ್ದಾರೆ. ನೀವು ನ್ಯಾಯದ ಪೀಠದ ಸ್ಥಾನದಲ್ಲಿ ಇದ್ದಾಗ ನೀವು ನ್ಯಾಯಯತವಾಗಿ ಕೆಲಸ ಮಾಡಬೇಕು. 30ಕ್ಕೂ ಹೆಚ್ಚು ಮಂದಿ ಯುಪಿಎಸ್ ಸಿ ಪಾಸ್ ಮಾಡಿದ್ದು, ಅನೇಕರು ಇದರ ಕನಸು ಕಾಣುತ್ತಿದ್ದಾರೆ.
ನೀವು ಕನಸು ಕಾಣಬೇಕು, ಆ ಕನಸು ನನಸಾಗಿಸಲು ಆಕಾಂಕ್ಷೆ ಇರಬೇಕು. ನಂತರ ಅದಕ್ಕಾಗಿ ಶ್ರಮಿಸಬೇಕು. ಶಿಸ್ತನ್ನು ಹೊಂದಿರಬೇಕು. ಆಗ ಯಶಸ್ವಿ ಜೀವನ ನಡೆಸಬಹುದು. ಮೊಹಮದ್ ಯೂನಿಸ್ ಎಂಬ ಬಾಂಗ್ಲಾದೇಶದ ನೋಬಲ್ ಪ್ರಶಸ್ತಿ ವಿಜೇತ ಒಂದು ಮಾತು ಹೇಳಿದ್ದಾನೆ. ನೀನು ಒಬ್ಬ ವ್ಯಕ್ತಿಗೆ ಊಟಕ್ಕೆ ಮೀನು ಕೊಟ್ಟರೆ ಅದು ಆ ಹೊತ್ತಿಗೆ ಸೀಮಿತವಾಗುತ್ತದೆ. ಆದರೆ ನೀವು ಅದೇ ವ್ಯಕ್ತಿಗೆ ಮೀನುಗಾರಿಕೆ ಕಲಿಸಿದರೆ ಅದು ಜೀವನಕ್ಕೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಹೀಗೆ ನಿಮ್ಮ ಆಲೋಚನೆಗಳು ಬೇರೆಯವರ ಜೀವನ ಬದಲಾವಣೆ ಮಾಡುವಂತೆ ಇರಬೇಕು. ನಿಮಗೆ ಮುಂದೆ ಬಹಳ ಉತ್ತಮ ಸ್ಥಾನ ಸಿಗಲಿದೆ. ಯಾವುದೇ ಸ್ಥಾನಕ್ಕೆ ಏರಿದರೂ ಬದ್ಧತೆ ಹೊಂದಿರಬೇಕು. ನಾನು ನನ್ನ ಅನುಭವದಲ್ಲಿ ಮಾತನಾಡುತ್ತಿದ್ದೇನೆ. ನಮಗೆ ಪ್ರಜ್ಞಾವಂತಿಕೆ ಇರಬೇಕು. ಅದರ ಮೇಲೆ ಕೆಲಸ ಮಾಡಬೇಕು. ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರುವ ಜನರಿಗೆ ಕಾನೂನಾತ್ಮಕವಾಗಿ ಹೃದಯ ಶ್ರೀಮಂತಿಕೆಯಿಂದ ಕೆಲಸ ಮಾಡಿ. ಅವರ ಕಷ್ಟ ಬಗೆಹರಿಸಿದರೆ ಸಾರ್ಥಕವಾಗುತ್ತದೆ.
ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವತಿ ಮಾನವಃ । ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ಎಂಬ ಶ್ಲೋಕ, ‘ಸಹಾಯ ಮಾಡಬೇಕೆಂದು ಅನಿಸಿದಾಗ ಅದನ್ನು ತಕ್ಷಣವೇ ಮಾಡಬೇಕು. ಕಾರಣ ನಮ್ಮ ಮನಸ್ಸು ಚಂಚಲವಾಗುವ ಮುನ್ನ ಸಹಾಯ ಮಾಡಿ ಮುಗಿಸಿ’ ಎಂದು ತಿಳಿಸುತ್ತದೆ.
ನಿಮ್ಮ ಬಳಿ ಅಧಿಕಾರ, ಹಣ ಇದ್ದಾಗ ನೀನು ಸಾಧ್ಯವಾದಷ್ಟು ಸಹಾಯ ಮಾಡಬೇಕು. ನಿಮಗೆ ಸಮಯ ಬಂದಾಗ ನಿಮಗೆ ಸಿಕ್ಕ ಅವಕಾಶದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಹೇಳಿದರು.
https://pragati.taskdun.com/9-months-babydeathmentho-plus-boxbellary/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ