Kannada NewsKarnataka NewsLatestPolitics

*ಶಾಸಕ ಅಶ್ವತ್ಥನಾರಾಯಣ ವಿರುದ್ಧ ಸದನದಲ್ಲಿ ಕೆಂಡಾಮಂಡಲರಾದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕೆ ಜೆ ಜಾರ್ಜ್ ನಮ್ಮ ನಾಯಕರು, ಅವರಿಗೆ ಅಪಮಾನವಾದರೆ ಸಹಿಸುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಮ್ಮ ನಾಯಕನಿಗೆ ಆಗುವ ಅಪಮಾನ ನೋಡಿಕೊಂಡು ಸುಮ್ಮನಿದ್ದರೆ ನನ್ನಂತಹ ನಾಲಾಯಕ್ ನಾಯಕ ಬೇರೊಬ್ಬನಿರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುಡುಗಿದರು.

ವಿಧಾನಸಭೆ ಕಲಾಪ ವಾಗ್ವಾದ ಬಳಿಕ ಮತ್ತೆ ಆರಂಭವಾದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದನವನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.

“ನಾನು 10 ಚುನಾವಣೆಯನ್ನು ಎದುರಿಸಿದ್ದು 8 ಬಾರಿ ಶಾಸಕನಾಗಿ ಇಲ್ಲಿದ್ದೇನೆ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ದೇವೇಗೌಡರು, ಬೊಮ್ಮಾಯಿ, ಜೆ.ಹೆಚ್ ಪಟೇಲರು, ಯಡಿಯೂರಪ್ಪನವರು, ಎಸ್.ಎಂ ಕೃಷ್ಣ, ಬಂಗಾರಪ್ಪ, ಬಸವಲಿಂಗಪ್ಪ, ಕೆ.ಹೆಚ್ ರಂಗನಾಥ್, ಕೆ.ಹೆಚ್ ಪಾಟೀಲ್ ರಂತಹ ಮೇಧಾವಿಗಳ ಜೊತೆ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷಗಳಲ್ಲಿ ಎಂ.ಸಿ. ನಾಣಯ್ಯ, ಚಂದ್ರೇಗೌಡರು ಸೇರಿದಂತೆ ಅನೇಕರು ಇದ್ದರು” ಎಂದು ಸ್ಮರಿಸಿದರು.

ನಮಗೂ ಬಿಸಿ ರಕ್ತ ಇದೆ

Home add -Advt

“ನಮಲ್ಲೂ ಬಿಸಿರಕ್ತ ಇದೆ. ಆದರೆ ಅದನ್ನು ಎಲ್ಲಿ ಉಪಯೋಗಿಸಬೇಕೋ ಅಲ್ಲಿ ಬಳಸಬೇಕು. ಅದನ್ನು ಸದನದ ಹೊರಗೆ ಇಟ್ಟುಕೊಳ್ಳಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾನು ಆರಂಭದಲ್ಲಿ ಪದವೀಧರನಲ್ಲ. ನಾನು ಪದವಿ ಪಡೆದಿದ್ದು ನನ್ನ 47ನೇ ವಯಸ್ಸಿಗೆ. ನನಗೆ ದೊಡ್ಡ ಶಿಕ್ಷಣ ಹಿನ್ನಲೆ ಇಲ್ಲದಿದ್ದರೂ ಬೇರೆಯವರನ್ನು ನೋಡಿ, ಅನುಭವದಿಂದ ಕಲಿತಿದ್ದೇನೆ. ಅನುಭವದ ಮೇಲೆ ನಾವು ಇಲ್ಲಿಯವರೆಗೂ ಬಂದಿದ್ದೇವೆ. ಯಾವುದೇ ಮನುಷ್ಯ ತನ್ನ ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆಯಾದಾಗ ಅದನ್ನು ಸಹಿಸುವುದಿಲ್ಲ” ಎಂದರು.

ಪಕ್ಷದ ಅಧ್ಯಕ್ಷನಾಗಿ ನಮ್ಮ ನಾಯಕರ ಪರ ನಿಲ್ಲುವುದು ನನ್ನ ಕರ್ತವ್ಯ:

“ನಾನು ಜಾರ್ಜ್ ಅವರ ಕೆಳಗೆ ಕೆಲಸ ಮಾಡಿದ್ದೇನೆ. ಅವರು ಅಧ್ಯಕ್ಷರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ರಾಜ್ಯಾಧ್ಯಕ್ಷರಾಗಿದ್ದಾಗ ನಾನು ತಾಲೂಕು ಅಧ್ಯಕ್ಷನಾಗಿದ್ದೆ. ಅವರು ನಮ್ಮ ನಾಯಕ. ನಾನು ಪಕ್ಷದ ಅಧ್ಯಕ್ಷನಾಗಿ ಅವರ ಪರ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ನಾನು ಆವೇಶದಲ್ಲಿ ಮಾತನಾಡಬೇಕಾಯಿತು” ಎಂದು ವಿವರಿಸಿದರು.

“ನಾನು ಆಡಿರುವ ಮಾತುಗಳು ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ನನ್ನ ಆವೇಶ, ಭಾಷೆ ತಪ್ಪಾಗಿರಬಹುದು. ಅದನ್ನು ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ನಾನು ಕೂಡ ಮನುಷ್ಯ. ಸಾರ್ವಜನಿಕ ಜೀವನದಲ್ಲಿ ನನಗೆ ನನ್ನದೇ ಆದ ಸಾಮರ್ಥ್ಯವಿದೆ. ನನ್ನದೇ ಆದ ಸಂಘಟನೆ ಶಕ್ತಿ, ಮಾತಿನ ಕಲೆ, ಅನುಭವ ಇದೆ. ಹಾಗೆಂದ ಮಾತ್ರಕ್ಕೆ ನಾವು ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ ಯಾರನ್ನೂ ನೋಯಿಸಬಾರದು. ವಿರೋಧ ಪಕ್ಷದಲ್ಲಿರುವವರು ಕೂಡ ತಮ್ಮದೇ ಆದ ಅನುಭವದಲ್ಲಿ ಸಾಧನೆ ಮಾಡಿ ಇಲ್ಲಿಗೆ ಬಂದಿರುತ್ತಾರೆ. ಈ ಸದನಕ್ಕೆ ಬಂದಿರುವ ಪ್ರತಿಯೊಬ್ಬ ಸದಸ್ಯರಿಗೂ ನಾವು ಸೂಕ್ತ ಗೌರವ ನೀಡಲೇಬೇಕು” ಎಂದರು.

“ಇಲ್ಲಿಗೆ ಕೇವಲ ಹಣದ ಹಿನ್ನೆಲೆಯಿಂದ ಬರುವುದಕ್ಕೆ ಆಗುವುದಿಲ್ಲ. ನನ್ನ ಸ್ನೇಹಿತ ಶಿವಳ್ಳಿ ಆಶ್ರಯ ನಿವೇಶನದ ಮನೆಯಲ್ಲಿದ್ದ. ಆತ ಕೂಡ ಈ ಸದನದ ಸದಸ್ಯನಾಗಿದ್ದ. ಚಪ್ಪಲಿ ಹಾಕದೇ ಇರುವವರೂ ಇಲ್ಲಿಗೆ ಬಂದಿದ್ದಾರೆ. ಜನ ನಮ್ಮನ್ನು ಆರಿಸಿ ಈ ಸದನಕ್ಕೆ ಕಳುಹಿಸಿರುವುದು ನಮ್ಮ ಭಾಗ್ಯ. ಇಂತಹ ಸಂದರ್ಭದಲ್ಲಿ ಜನ ನಮ್ಮನ್ನು ನೋಡುತ್ತಿರುತ್ತಾರೆ. ಸ್ಪೀಕರ್ ಅವರು ನ್ಯಾಯಾಧೀಶರ ಸ್ಥಾನದಲ್ಲಿ ಕೂತಿದ್ದು ನೀವು ಯಾರಿಗೆ ಆದರೂ ಕಠಿಣವಾಗಿ ಹೇಳಬಹುದು. ನ್ಯಾಯಧೀಶ ಸ್ಥಾನದಿಂದ ಅನ್ಯಾಯ ಆಗಬಾರದು. ನಾವು ತಪ್ಪು ಮಾಡಿದರೆ ನಮ್ಮನ್ನು ಸಸ್ಪೆಂಡ್ ಮಾಡಿ. ತೊಂದರೆ ಇಲ್ಲ. ಆದರೆ ಯಾರ ಆತ್ಮ ಗೌರವಕ್ಕೂ ಧಕ್ಕೆ ಆಗದಂತೆ ಕಾಪಾಡಿ ಎಂದು ಮನವಿ ಮಾಡುತ್ತೇನೆ” ಎಂದು ವಿನಂತಿಸಿದರು.

Related Articles

Back to top button