Belagavi NewsBelgaum NewsKannada NewsKarnataka NewsLatestPolitics

*ತಪ್ಪಿಸಿಕೊಂಡು ಓಡಾಡದೆ ಅಸೆಂಬ್ಲಿಯಲ್ಲಿ ಮಾತನಾಡಲಿ: ವಿಜಯೇಂದ್ರಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲ್*

ಪ್ರಗತಿವಾಹಿನಿ ಸುದ್ದಿ: “ಕಲೆಕ್ಷನ್ ಕಿಂಗ್ ಎಂದು ಏನಾದರೂ ಇದ್ದರೆ ಅದು ವಿಜಯೇಂದ್ರ. ಅವರ ತಂದೆ ಹೆಸರು ಇಳಿಯಲು ವಿಜಯೇಂದ್ರ ಕಾರಣ. ಇದನ್ನ ಮರೆಯಬಾರದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.

ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಅನ್ನು ತೃಪ್ತಿಪಡಿಸಲಾಗುತ್ತಿದೆ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ವಿಜಯೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ, “ಯಾವ ಖಜಾನೆ ಖಾಲಿಯಾಗಿದೆ? ಕಲೆಕ್ಷನ್, ಅವರ ಅಕೌಂಟ್ ಗಳು, ವಹಿವಾಟುಗಳನ್ನು ಬಿಚ್ಚಿಡಬೇಕೆ?” ಎಂದರು.

ತಪ್ಪಿಸಿಕೊಂಡು ಎಲ್ಲೋ ಹೋಗದೆ ವಿಧಾನಸಭೆಯಲ್ಲಿ ಮಾತನಾಡಲಿ

Home add -Advt

“ಅವರು ವಿಧಾನಸಭೆಯಲ್ಲಿ ಮಾತನಾಡಿದರೆ ಏನೇನು ಮಾತನಾಡಬೇಕು ಎಂದು ನನಗೂ ಗೊತ್ತಿದೆ. ಪಕ್ಷದ ಅಧ್ಯಕ್ಷರಾಗಿ ಇತಿಮಿತಿಯಿಂದ ಮಾತನಾಡಲಿ. ಮೊದಲು ವಿಧಾನಸಭೆಗೆ ಬಂದು ಮಾತನಾಡಲು ಹೇಳಿ. ತಪ್ಪಿಸಿಕೊಂಡು ಹೋಗಿ ಎಲ್ಲೋ ಇರುವುದಲ್ಲ. ಇಲ್ಲಿ ಬಂದು ಮಾತನಾಡಲಿ. ವಿಜಯೇಂದ್ರ ಅವರಿಗೆ ಅನುಭವವಿಲ್ಲ. ಯಾವ ಖಜಾನೆ ಖಾಲಿಯಾಗಿದೆ?” ಎಂದು ಕುಟುಕಿದರು.

ರೈತರ ಪರವಾಗಿ ನಿರ್ಧಾರ

ಅಧಿವೇಶನ ಶುಕ್ರವಾರ ಮುಕ್ತಾಯವಾಗಲಿದೆ ಎಂದು ಕೇಳಿದಾಗ, “ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಹೊರೆಯಾಗುತ್ತಿದ್ದರು ನಮ್ಮ ಸರ್ಕಾರ ರೈತರ ಪರವಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಕಬ್ಬು, ಮೆಕ್ಕೆಜೋಳದ ಬೆಲೆಗಳ ಬಗ್ಗೆ ಇದ್ದ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. ಸರ್ಕಾರ ರೈತಪರವಾಗಿ ತೆಗೆದುಕೊಂಡಿರುವ ನಿರ್ಧಾರವನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು ಎಂದುಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

“ಮುಖ್ಯಮಂತ್ರಿಯವರು ಹಾಗೂ ಕಂದಾಯ ಸಚಿವರು ಉತ್ತರ ಕರ್ನಾಟಕದ ವಿಚಾರವಾಗಿ ನಡೆದಿರುವ ಚರ್ಚೆಗಳಿಗೆ ಉತ್ತರ ನೀಡುತ್ತಾರೆ. ಈ ಭಾಗದ ನೀರಾವರಿ ಯೋಜನೆಗಳಾದ ಯುಕೆಪಿ, ಮಹದಾಯಿ ವಿಚಾರಗಳ ಬಗ್ಗೆ ಅವಕಾಶ ಸಿಕ್ಕರೆ ಉತ್ತರಿಸುತ್ತೇನೆ” ಎಂದರು.

ಸಚಿವರು ತಪ್ಪು ಮಾಹಿತಿ ನೀಡಿಲ್ಲ

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ವಿಚಾರವಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಕಳೆದ 24 ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನು ಈ ರಾಜ್ಯದ ಮಹಿಳೆಯರಿಗೆ ನೀಡಿದ್ದೇವೆ. ಅವರು ಯಾವ ತಪ್ಪು ಮಾಹಿತಿ ನೀಡಿದ್ದಾರೆ? ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ಅದನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ತಪ್ಪು ಮಾಹಿತಿಯಿಲ್ಲ. ನಾವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ವಿಚಾರ ಚರ್ಚೆ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಪಕ್ಷಗಳು ದಾರಿ ತಪ್ಪಿಸಲು ಈ ವಿಚಾರ ಎತ್ತುಕೊಂಡಿದ್ದಾರೆ” ಎಂದರು.

“ಕೇಂದ್ರ ಸರ್ಕಾರ ಏಕೆ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ. ನರೇಗಾ ಅನುದಾನವನ್ನೂ ಇದುವರೆಗೂ ನೀಡಿಲ್ಲ. ಜಲಜೀವನ ಮಿಷನ್ ಹಣವನ್ನೂ ನೀಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನಗಳು, ಜಿಎಸ್‌ ಟಿ ಪರಿಹಾರ ಸಿಕ್ಕಿಲ್ಲ. ಈಗ ಇವರು ಗೃಹಲಕ್ಷ್ಮಿ ಹಣದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದರು.

“ಬಿಜೆಪಿಯವರು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ” ಎಂದು ಹೇಳಿದರು.

“ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ದೆಹಲಿ ಪೊಲೀಸರು ಹಾಕಿರುವ ಎಫ್ ಐಆರ್ ಇನ್ನೂ ಇದೆ. ಅದನ್ನು ವಾಪಸ್ ಪಡೆದರೆ ಉತ್ತಮ. ಈ ಮೂಲಕ ನಮಗೆ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದರು.

Related Articles

Back to top button