
ಪ್ರಗತಿವಾಹಿನಿ ಸುದ್ದಿ, ರಾಮನಗರ:
‘ಒಂದೇ ಹೆಸರಿನ ಟ್ರಸ್ಟ್ ನಲ್ಲಿ ಹಲವು ಬಾರಿ ಅನುದಾನದ ಹಣ ಡ್ರಾ ಆಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಇನ್ನು ಮುಂದೆ ಇದಕ್ಕೆ ಆಸ್ಪದ ಕೊಡುವುದಿಲ್ಲ. ಅರ್ಹರಿಗಷ್ಟೇ ಹಣ ಸೇರಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರದಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆ ಬಳಿಕ ಮಾತನಾಡಿದ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಕ್ರಮವಾಗಿ ಹಣ ಪಡೆಯುವವರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:
‘ಇಲಾಖೆಯಲ್ಲಿ ಈ ಹಿಂದೆ ಏನೇನು ನಡೆದಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಒಂದೇ ಹೆಸರಿನ ಟ್ರಸ್ಟ್ ನಲ್ಲಿ ಹಲವು ಬಾರಿ ಹಣ ಡ್ರಾ ಮಾಡುವವರು ಇದ್ದಾರೆ. ಇದು ನಿಲ್ಲಬೇಕು.
ವರ್ಷಕ್ಕೆ ಸರ್ಕಾರದಿಂದ 20 ಕೋಟಿ ರುಪಾಯಿ ಅನುದಾನ ಬರುತ್ತಿದೆ. ಈ ಹಣ ಅರ್ಹರಿಗೆ, ನ್ಯಾಯವಾಗಿ ತಲುಪಬೇಕು. ನನ್ನ ಪ್ರಕಾರ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು.
ಈ ವಿಚಾರವಾಗಿ ಯಾರ್ಯಾರು ಪ್ರತಿಭಟನೆ ಮಾಡುತ್ತಾರೋ ಮಾಡಲಿ. ಅಷ್ಟೇ ಅಲ್ಲ ಅವರು ಬಂದು ನಮಗೆ ಸಲಹೆ ಕೊಡಲಿ. ಈ ವಿಚಾರದಲ್ಲಿ ನಾನು ಕೂಡ ಕಠಿಣ ಕ್ರಮಕ್ಕೆ ಸಿದ್ಧನಾಗಿದ್ದೇನೆ.’