ಶಾಸಕರು ಹಳ್ಳಿಯಲ್ಲಿ ದನ ಕುರಿ ವ್ಯಾಪಾರ ಆದ ಹಾಗೆ ಮಾರಿಕೊಂಡರು, ಲಕ್ಷ್ಮಿ ಹೆಬ್ಬಾಳಕರ್ ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ತರಲಿಲ್ಲ
ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 6 ಸಾವಿರ ರೂ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಮ್ಮ ಸರಕಾರ ಇನ್ನೂ ಪ್ರಮಾಣ ವಚನ ಸ್ವೀಕರಿಸುವ ಹೊತ್ತಿಗೆ ನಿಮ್ಮ ಜಿಲ್ಲೆಯ ಮೂವರು ಶಾಸಕರು ಸೇರಿದಂತೆ ಕೆಲವು ಶಾಸಕರು ತಮ್ಮನ್ನು ಹಳ್ಳಿಯಲ್ಲಿ ದನ ಕುರಿ ವ್ಯಾಪಾರ ಆದ ಹಾಗೆ ಮಾರಿಕೊಂಡರು. ಆದರೆ ನಿಮ್ಮ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ತರಲಿಲ್ಲ. ಹಾಗಾಗಿ ನಿಮಗೆಲ್ಲ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಳಗಾವಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಡಸಾದಲ್ಲಿ ಗುರುವಾರ ರಾತ್ರಿ ನಡೆದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ನಾವೆಲ್ಲ ನಿಮ್ಮ ಜೊತೆಗಿದ್ದೇವೆ, ಲಕ್ಷ್ಮಿ ಹೆಬ್ಬಾಳಕರ್ ಜೊತೆಗಿದ್ದೇವೆ ಎಂದು ಹೇಳಲು ಇಲ್ಲಿಗೆ ಬದಿದ್ದೇವೆ. ಲಕ್ಷ್ಮಿ ಹೆಬ್ಬಾಳಕರ್ ಅವರ ಕೈ ಬಲಪಡಿಸಿ, ಕಾಂಗ್ರೆಸ್ ಕೈ ಬಲಪಡಿಸಿ. ಸತೀಶ್ ಜಾರಕಿಹೊಳಿ ಅವರಿಗೆ ಈ ಕ್ಷೇತ್ರದಲ್ಲಿ 75 ಸಾವಿರ ಮತಗಳ ಲೀಡ್ ಕೊಡಿ ಎಂದು ಡಿ.ಕೆ.ಶಿವಕುಮಾರ ವಿನಂತಿಸಿದರು.
ಅನೇಕ ಶಾಸಕರು ತಮ್ಮನ್ನು ತಾವೆ ಮಾರಿಕೊಂಡರು. ಆ ಕೆಲಸವನ್ನು ನಿಮ್ಮ ಶಾಸಕರು ಮಾಡಲಿಲ್ಲ. ಮಾನಸಿಕವಾಗಿ ನಿಮಗೆ ಅವಮಾನ ಮಾಡಲಿಲ್ಲ. ನೀವು ಕೊಟ್ಟ ಮತದಿಂದ ನಿಮ್ಮ ಕೆಲಸ ಮಾಡಿಕೊಡುತ್ತಿದ್ದಾರೆ. ಸಂಜಯ ಪಾಟೀಲ ಶಾಸಕರಾಗಿದ್ದ ಕಾಲದಲ್ಲಿ ಒಂದಾದರೂ ಕೆಲಸ ಆಗಿತ್ತಾ? ಲಕ್ಷ್ಮಿ ಹೆಬ್ಬಾಳಕರ್ ಪ್ರತಿ ಊರಿಗೆ ಒಂದಾದರೂ ಕೆಲಸ ಮಾಡಿದ್ದಾರೋ ಇಲ್ಲವೋ? ಮಾಡಿದ್ದಾರೆ ಎಂದರೆ ಮತ್ತೆ ಟಿಕೆಟ್ ಕೊಡ್ತೀವಿ ಎಂದು ಡಿಕೆಶಿ ಹೇಳುತ್ತಿದ್ದಂತೆ, ಲಕ್ಷ್ಮಿ ಅಕ್ಕಾ ಜೈ ಎನ್ನುವ ಘೋಷಣೆ ಮೊಳಗಿತು.
ರಾಜ್ಯದಲ್ಲಿರುವುದು ಬರೀ ಪರ್ಸಂಟೇಜ್ ಸರಕಾರ. ಕೊರೋನಾದಲ್ಲಿ ದುಡ್ಡು ಹೊಡೆದ ಸರಕಾರ. ಯಾರೊಬ್ಬರಿಗೂ ಒಂದು ಪೈಸೆ ನೆರವು ಸಿಗಲಿಲ್ಲ. ಇಂತಹ ಸರಕಾರ ಬೇಕೇನ್ರಿ? ಮುಂದಿನ ಬಾರಿ ನಮ್ಮ ಸರಕಾರ ಬಂದಾಗ ಬಿಲ್ ಲೆಸ್ ಆಸ್ಪತ್ರೆ ಆರಂಭಿಸುತ್ತೇವೆ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀವಿ. ಪ್ರತಿ ನಿರುದ್ಯೋಗಿಗೆ ಪ್ರತಿ ತಿಂಗಳು 6 ಸಾವಿರ ರೂ ಕೊಡ್ತೀವಿ ಎಂದು ಅವರು ಘೋಷಿಸಿದರು.
ನಾವು ಬಡವರಿಗೆ ಭೂಮಿ ಕೊಡುವ ಯೋಜನೆ ಮಾಡಿದರೆ ಈ ಸರಕಾರ ಬಡವರ ಭೂಮಿ ಕಿತ್ತು ಕೊಂಡು ದೊಡ್ಡವರಿಗೆ ಮಾರುವ ಕಾನೂನು ತರುತ್ತಿದೆ ಎಂದೂ ಆರೋಪಿಸಿದರು.
ನೂರಾರು ಕೋಟಿ ಖರ್ಚು ಮಾಡಿ ಕಟ್ಟಿದ ಸುವರ್ಣ ವಿಧಾನಸೌಧದಲ್ಲಿ ಏನೂ ಚರ್ಚೆ ಮಾಡುವುದಕ್ಕೇ ಅವಕಾಶ ಕೊಡುತ್ತಿಲ್ಲ. ಅಧಿವೇಶನವನ್ನೇ ನಡೆಸುತ್ತಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ