ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮಹಾರಾಷ್ಟ್ರದ ಸರ್ಕಾರದ ಜತೆ ಚರ್ಚೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ರಾಜಾಪುರ ಬ್ಯಾರೇಜ್ ಗೆ ಶನಿವಾರ (ಜೂ.22) ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಎರಡೂ ರಾಜ್ಯಗಳ ಜನರಿಗೆ ಕುಡಿಯುವ ನೀರು ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಿದೆ. ಇದೇ ದಿಸೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಪ್ರತಿವರ್ಷ ಎರಡೂ ರಾಜ್ಯಗಳು ನೀರು ವಿನಿಮಯ ಮಾಡಿಕೊಳ್ಳುವ ಒಡಂಬಡಿಕೆಗೆ ಕರ್ನಾಟಕ ಸರ್ಕಾರದ ಸಹಮತವಿದೆ. ಆದರೆ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕವೇ ಒಡಂಬಡಿಕೆ ಮಾಡಿಕೊಳ್ಳಬಹುದು.
ಹಣದ ಬದಲಾಗಿ ನಾಲ್ಕು ಟಿ.ಎಂ.ಸಿ. ನೀರು ವಿನಿಮಯ ಪ್ರಸ್ತಾವ ಮಹಾರಾಷ್ಟ್ರ ಸರ್ಕಾರ ಇಟ್ಟಿದೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಪರಿಶೀಲನೆ ನಡೆದಿದೆ ಎಂದರು.
ಒಡಂಬಡಿಕೆಗೆ ಕಾಲಾವಕಾಶ ಕೋರಿಕೆ:
ನೀರು ವಿನಿಮಯ ಒಡಂಬಡಿಕೆಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳು ಕಾಲಾವಕಾಶವನ್ನು ಕೇಳಿದ್ದಾರೆ.
ಸರ್ಕಾರಗಳು ನೀರು ವಿನಿಮಯ ಒಡಂಬಡಿಕೆ ಮಾಡಿಕೊಳ್ಳುವ ಮುಂಚೆ ಉಭಯ ರಾಜ್ಯಗಳ ನೀರಾವರಿ ಸಚಿವರು ಈ ಬಗ್ಗೆ ವಿಸ್ತೃತವಾಗಿ ಮಾತುಕತೆ ನಡೆಸಿದ ಬಳಿಕವೇ ಒಡಂಬಡಿಕೆ ಮಾಡಿಕೊಳ್ಳೋಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಾರಾಷ್ಟ್ರಕ್ಕೆ ಪತ್ರವನ್ನೂ ಬರೆದಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ ನೀರು ಬಿಡುಗಡೆ ಬಗ್ಗೆ ಸಚಿವರು ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಲಾಸ್ ಪಾಟೀಲ, ಎರಡೂ ಸರ್ಕಾರ ಪರಸ್ಪರ ಸಭೆ ನಡೆಸುವ ಮೂಲಕ ಉಭಯ ರಾಜ್ಯಗಳ ರೈತರ ಹಿತರಕ್ಷಿಸಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಶ್ರೀಮಂತ ಪಾಟೀಲ, ಮಹೇಶ್ ಕುಮಠಳ್ಳಿ, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಲ್ಲೋಳ ಬ್ಯಾರೇಜ್ ಮತ್ತು ಮಾಂಜರಿ ಸೇತುವೆ ಕಮ್ ಬ್ಯಾರೇಜ್ ವೀಕ್ಷಿಸಿದರು.
ಕಲ್ಲೋಳ ಬ್ಯಾರೇಜ ಪರಿಶೀಲನೆ ನಂತರ ಪಂಪಸೆಟ್ ಗಳ ಅಳವಡಿಕೆ ಬಗ್ಗೆ ಶಾಸಕರಿಂದಲೇ ಮಾಹಿತಿ ಪಡೆದುಕೊಂಡರು.
ನದಿ ದಂಡೆಯಲ್ಲಿ ಅಳವಡಿಸಲಾಗಿರುವ ಮೋಟಾರ್ ಗಳ ಮಾಹಿತಿಯನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು,
ಚಿಕ್ಕೋಡಿ ಪಟ್ಟಣಕ್ಕೆ ನೀರು ಪೂರೈಕೆ ಬಗ್ಗೆ ತಿಳಿದುಕೊಂಡರು.
ಕುಡಿಯಲು ಬಿಡುವ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡರೆ ಏನು ಪ್ರಯೋಜನ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಪ್ರಶ್ನಿಸಿದರು.
ನಂತರ ಮಾಂಜರಿ ಗ್ರಾಮದಲ್ಲಿ ಬಾವನ ಸವದತ್ತಿ ಹಾಗೂ ಮಾಂಜರಿ ಗ್ರಾಮದ ನಡುವೆ ನಿರ್ಮಿಸಲಾಗುತ್ತಿರುವ ಸೇತುವೆ ಕಮ್ ಬಾಂದಾರ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಳೆಗಾಲದಲ್ಲಿ ಹಳೆ ಸೇತುವೆ ಮುಳುಗಡೆಯಾಗುವುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ವಿಧಾನಸಭೆ ಮುಖ್ಯ ಸಚೇತಕರೂ ಆಗಿರುವ ಶಾಸಕ ಗಣೇಶ ಹುಕ್ಕೇರಿ ವಿವರಿಸಿದರು.
ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ದುರ್ಯೋಧನ ಐಹೊಳೆ, ಶ್ರೀಮಂತ ಪಾಟೀಲ, ಮಹೇಶ್ ಕುಮಠಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಇದಾದ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಅವರು ಉಗಾರ್ ಬ್ಯಾರೇಜ್ ಗೆ ಭೇಟಿ ನೀಡಿದರು. ಪ್ರತಿವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳೀಯ ಜನರು ಮನವಿಪತ್ರ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ