Kannada NewsKarnataka NewsLatestPolitics

*ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಪ್ರತಿಭಟನೆಗೆ ಡಿ.ಕೆ.ಸುರೇಶ್ ವ್ಯಂಗ್ಯ*

ಕರ್ನಾಟಕದ 5ಲಕ್ಷ ಕೋಟಿ ತೆರಿಗೆ ಹಣ ಲೂಟಿಗೆ ಖಾಲಿ ಟ್ರಂಕ್ ತಂದಿದ್ದಾರೆ

ಪ್ರಗತಿವಾಹಿನಿ ಸುದ್ದಿ: “ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಮೆಟ್ರೋ ದರ ಏರಿಕೆ ವಿಚಾರವಾಗಿ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಲ್ದಾಣ ಬಳಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಮೆಟ್ರೋ ದರ ಏರಿಕೆ ಬಗ್ಗೆ ಅವರು ಮಾತನಾಡುವುದೇನೆ ಇದ್ದರೂ ಅದು ಪ್ರಧಾನಮಂತ್ರಿಗಳ ಮುಂದೆ ಮಾತನಾಡಲಿ. ಮೆಟ್ರೋ ನಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿರುವವರು ಯಾರು? ತೇಜಸ್ವಿ ಸೂರ್ಯ ಅವರು ಮೆಟ್ರೋ ನಮ್ಮ ಕೊಡುಗೆ ರಾಜ್ಯ ಸರ್ಕಾರದ್ದಲ್ಲ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಮೆಟ್ರೋ ಕೇಂದ್ರ ಸರ್ಕಾರದ ಸಮಿತಿ ಕೈಯಲ್ಲಿದೆ. ಆ ಸಮಿತಿ ತೀರ್ಮಾನದಂತೆ ಮೆಟ್ರೋ ದರ ಏರಿಕೆ ಮಾಡಲಾಗುತ್ತದೆ. ದರ ಏರಿಕೆ ಆಗಬಾರದು ಎಂಬುದೂ ನಮ್ಮ ಇಚ್ಛೆ. ತೇಜಸ್ವಿ ಸೂರ್ಯ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅವರು ತೀರ್ಮಾನ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ” ಎಂದು ಸುರೇಶ್ ಅವರು ವಾಗ್ದಾಳಿ ನಡೆಸಿದರು.

Home add -Advt

“ಅವರು ಖಾಲಿ ಟ್ರಂಕ್ ಹಿಡಿದಿರುವುದು, ಕರ್ನಾಟಕದ 4.5- 5 ಲಕ್ಷ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿಕೊಂಡು ಹೋಗುತ್ತಿರುವುದನ್ನು ತೋರಿಸಲು. ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಪಟ್ಟಿ ಹೇಳಲಿ. ಬೆಂಗಳೂರಿಗೆ ಅವರ ಕೊಡುಗೆ ಖಾಲಿ ಡಬ್ಬ ಎಂದು ತೇಜಸ್ವಿ ಸೂರ್ಯ ತೋರಿಸುತ್ತಿರುವುದನ್ನು ಮಾಧ್ಯಮಗಳು ಚೆನ್ನಾಗಿ ತೋರಿಸಿ” ಎಂದು ಕಿಡಿಕಾರಿದರು.

ದರ ಏರಿಕೆಗೆ ಕಾರಣ ಯಾರು? ಎಂದು ಕೇಳಿದಾಗ, “ರಾಜ್ಯ ಸರ್ಕಾರದ ಪಾತ್ರ ಇದೆ. ದರ ಇಳಿಕೆ ಬಗ್ಗೆ ಕೇಂದ್ರದ ಸಮಿತಿ ಮುಂದೆ ಪ್ರಸ್ತಾವನೆ ನೀಡಲಾಗಿದೆ. ಕೇಂದ್ರ ಸಮಿತಿಯ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದ ಮೇರೆಗೆ ಈ ತೀರ್ಮಾನ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ಬದ್ಧತೆಯನ್ನು ಕೇಂದ್ರ ಸರ್ಕಾರದ ಮುಂದೆ ಪ್ರದರ್ಶಿಸಲಿ” ಎಂದು ತಿಳಿಸಿದರು.

ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡದಿರುವುದಕ್ಕೆ ದರ ಏರಿಕೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೆಟ್ರೋ ಯೋಜನೆಗಳಿಗೆ 10% ಹಣ ನೀಡುತ್ತದೆ. ರಾಜ್ಯ ಸರ್ಕಾರ 10% ಹಣದ ಜೊತೆಗೆ ಯೋಜನೆ ಜಾರಿಗೆ ಅಗತ್ಯವಿರುವ ಭೂಸ್ವಾಧೀನ ಪರಿಹಾರ ಮೊತ್ತವನ್ನು ಭರಿಸಬೇಕು. ಇದರಿಂದ ರಾಜ್ಯ ಸರ್ಕಾರದ ಪಾಲು ಸುಮಾರು 17%ರಷ್ಟು ಇರುತ್ತದೆ. ಉಳಿದ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುವುದು. ಅದರ ಹೊರೆ ಪ್ರಯಾಣಿಕರ ಮೇಲೆ ಬೀಳುತ್ತದೆ. ಸಮಯ ಸಿಕ್ಕಾಗ ಮೆಟ್ರೋ ನಮ್ಮದು ಎಂದು ಶೋ ಕೊಟ್ಟು, ಈಗ ಖಾಲಿ ಡಬ್ಬ ತೋರುತ್ತಿದ್ದಾರೆ” ಎಂದು ಹರಿಹಾಯ್ದರು.

“ಬೆಂಗಳೂರಿನಲ್ಲಿ ವಾಹನ ದಟ್ಟಣೆಗೆ ಕಾರಣವಾಗಿರುವುದು ಕೇಂದ್ರ ಸರ್ಕಾರ. ನಮ್ಮ ಐಟಿ ಬಿಟಿ ತೆರಿಗೆ ಹಾಗೂ ಬೆಂಗಳೂರಿನ ಜಿಎಸ್ ಟಿ ಸೇರಿ ವಾರ್ಷಿಕವಾಗಿ 5 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ. ಅದರಲ್ಲಿ ನಮಗೆ ವಾಪಸ್ ನೀಡುತ್ತಿರುವುದು ಕೇವಲ 10% ಅಂದರೆ 50 ಸಾವಿರ ಕೋಟಿ ಮಾತ್ರ. ಉಳಿದ ಹಣ ಗುಜರಾತ್, ಅಹಮದಾಬಾದ್, ಉತ್ತರ ಪ್ರದೇಶ, ಬಿಹಾರಕ್ಕೆ ಹೋಗುತ್ತಿದೆ. ತೇಜಸ್ವಿ ಸೂರ್ಯ ಅವರು ಪ್ರಧಾನಿ ಮುಂದೆ ಭಾಷಣ ಮಾಡಿ ತಮ್ಮ ಎದೆಗಾರಿಕೆ ತೋರಿ ರಾಜ್ಯಕ್ಕೆ ಹಣ ತರಲಿ. ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತಿದೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಕರ್ನಾಟಕಕ್ಕೂ 20% ಅನುದಾನ ಕೊಟ್ಟರೆ ಸಾರ್ವಜನಿಕರ ಮೇಲೆ ಹೊರೆ ಕಡಿಮೆ ಆಗುತ್ತದೆ ಅಲ್ಲವೇ? ಈ ಬಗ್ಗೆ ಮಾಧ್ಯಮಗಳು ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕು” ಎಂದು ಸವಾಲೆಸೆದರು.

Related Articles

Back to top button