*ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: “ಪ್ರಜ್ವಲ್ ರೇವಣ್ಣ ಅವರ ಪ್ರಕರಣ ದೇಶದ ಅತಿದೊಡ್ಡ ಮಾನಹಾನಿ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ. ಇದಕ್ಕೆ ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ” ಎಂದು ಸಂಸದ ಡಿ.ಕೆ.ಸುರೇಶ್ ಅವರು ನೇರ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಡಿ.ಕೆ. ಸುರೇಶ್ ಅವರು ಮಂಗಳವಾರ ಮಾತನಾಡಿದರು.
ಪ್ರಜ್ವಲ್ ಪೆನ್ ಡ್ರೈವ್ ವಿಚಾರ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರಿಗೆ ಮೊದಲೇ ಗೊತ್ತಿತ್ತು ಎನ್ನುವ ಆರೋಪದ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ:
“ನಮಗೆ ವಿಷಯ ಗೊತ್ತಿದ್ದರೇ ಈ ವಿಚಾರ ಇನ್ನು ಮುಂಚೆಯೇ ವಿಷಯ ಹೊರ ಬರುತ್ತಿತ್ತು. ಆರೋಪ ಮಾಡುವುದಕ್ಕಾಗಿ ನಮ್ಮ ಹೆಸರುಗಳನ್ನು ತರಲಾಗುತ್ತಿದೆ. ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು, ಸೂಕ್ತ ದಾಖಲೆಗಳು ಇಲ್ಲದೇ ಮಾತನಾಡುವುದು ಸೂಕ್ತವಲ್ಲ. ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಉನ್ನತ ನಾಯಕರಿಗೆ ಪತ್ರ ಬರೆದಿದ್ದರು. ಪ್ರಕರಣದ ಬಗ್ಗೆ ಪ್ರಧಾನಿಗಳು ಹಾಗೂ ಅವರ ಕಾರ್ಯಾಲಯ ಮತ್ತು ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡಿ. ಇಡೀ ದೇಶದಲ್ಲೇ ಕನ್ನಡಿಗರಿಗೆ, ಹಾಸನ ಜಿಲ್ಲೆಗೆ ಅವಮಾನ ಮಾಡಿದ್ದಾರೆ.
ನಮಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ಅವರ ತಂದೆ ರೇವಣ್ಣ ಅವರೇ ಹಳೆಯ ವಿಡಿಯೋಗಳು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲದಕ್ಕೂ ಮೊದಲು ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಮೊದಲ ಕೆಲಸ. ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ.
ಈತ ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರು, ಆ ಕುಟುಂಬ ನಮ್ಮದಲ್ಲ ಎಂದು ವ್ಯಾಖ್ಯಾನ ಮಾಡಬಹುದು. ಸ್ವತಃ ಪ್ರಧಾನಿಗಳೇ ಇದನ್ನು ಬೇರೆಯ ರೀತಿ ಬಿಂಬಿಸಲು ಹೊರಟಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ವಿಚಾರ ಗೊತ್ತಿದ್ದರೂ ಮುಚ್ಚಿಟ್ಟಿರುವುದು ಮಹಾ ಅಪರಾಧ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರಕ್ಕೆ ಹೊಳೆನರಸಿಪುರಕ್ಕೆ ಹೋದಾಗ ನನ್ನ ಮಗ ಎಂದು ಹೇಳಿದ್ದಾರೆ. ಆದರೆ ಈಗ ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವುದು ಸರಿಯೇ?
ಇದು ಮನುಕುಲದ ದೊಡ್ಡ ಅವಮಾನಕರ ಘಟನೆ. ಸಂಸ್ಕೃತಿ ಬಗ್ಗೆ ಮಾತನಾಡುವ ಇವರು ಈ ಪ್ರಕರಣದ ಬಗ್ಗೆ ಮಾತನಾಡಲಿ. ನೇಹಾ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದಂತೆ, ಈ ಪ್ರಕರಣವನ್ನು ತೆಗೆದುಕೊಂಡು ಹೋಗಲಿ. ಈ ಪ್ರಕರಣದ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಇದರಲ್ಲಿ ಸಿಲುಕಿಕೊಂಡಿರುವ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಟ್ಟು, ಕಾಪಾಡಬೇಕು.
ಪ್ರಶ್ನೋತ್ತರಗಳು
ಫೇಕ್ ವಿಡಿಯೋ ಎಂದು ಪ್ರಧಾನಿಗಳೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಕೇಳಿದಾಗ “ಪ್ರಧಾನಿ ಹಾಗೂ ಪ್ರಧಾನ ಮಂತ್ರಿಗಳ ಕಾರ್ಯಾಲಯ ಪ್ರತಿಯೊಂದನ್ನು ತಿರುಚುವ ಕೆಲಸ ಮಾಡುತ್ತಿದೆ. ಹೆಣ್ಣು ಮಕ್ಕಳ ಮೇಲೆ ಎಷ್ಟು ಗೌರವವಿದೆ ಎನ್ನುವುದು ಪ್ರಧಾನಿ ಅವರ ಈ ಮಾತಿನಿಂದ ತಿಳಿಯುತ್ತದೆ.
ಇದೊಂದೆ ಪ್ರಕರಣವಲ್ಲ ಮಹಿಳಾ ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲೂ ಪ್ರಧಾನಿಗಳು ಬಾಯಿ ಬಿಡಲಿಲ್ಲ. ಯಡಿಯೂರಪ್ಪ ಅವರನ್ನು ಇಳಿಸಿದಾಗಲೂ ಬಾಂಬೆ ಬ್ಲೂ ಬಾಯ್ಸ್ ಪ್ರಕರಣದಲ್ಲೂ ಇದೇ ರೀತಿಯ ಮಾತುಗಳು ಕೇಳಿಬಂದವು. ಇದನ್ನೆಲ್ಲಾ ನೋಡಿದರೆ ಅನೇಕ ಪ್ರಕಣಗಳಲ್ಲಿ ಬಿಜೆಪಿಯವರಿಗೆ ನಂಟಿದೆ. ಅನೇಕ ಪ್ರಕರಣಗಳನ್ನು ಬಿಜೆಪಿಯವರು ಮುಚ್ಚಿಟ್ಟಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಸಜ್ಜಾಗಿದೆ” ಎಂದರು.
ರೇವಣ್ಣ ಅವರ ವಿರುದ್ದವೂ ಪ್ರಕರಣ ದಾಖಲಾಗಿದೆ ಎನ್ನುವ ಪ್ರಶ್ನೆಗೆ “ಮಹಿಳೆಯೊಬ್ಬರು ಅವರ ಮೇಲೆ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಎಸ್ ಐಟಿ ರಚನೆಯಾಗಿದ್ದು ಅದು ತನಿಖೆ ನಡೆಸುತ್ತದೆ” ಎಂದರು.
ನಮ್ಮ ಕುಟುಂಬದ ವಿರುದ್ಧದ ಷಡ್ಯಂತ್ರ ಎಂದು ರೇವಣ್ಣ ಅವರ ಹೇಳಿಕೆಯ ಬಗ್ಗೆ ಕೇಳಿದಾಗ “ಬಯಲಾಗಿರುವ ವಿಡಿಯೋಗಳು 3 ವರ್ಷಗಳ ಹಳೆಯ ವಿಡಿಯೋಗಳು ಎಂದು ಅವರೇ ಒಪ್ಪಿಕೊಂಡಿದ್ದಾರೆ” ಎಂದರು.
ಚುನಾವಣಾ ಸಂಸದರ್ಭದಲ್ಲೇ ಪ್ರಕರಣ ಹೊರಗೆ ಬರಲು ಕಾರಣವೇನು ಎಂದಾಗ “ಚುನಾವಣೆ ಮುಗಿದ ನಂತರ ಪ್ರಕರಣ ಹೊರಗೆ ಬಂದಿದೆ. ಇವುಗಳನ್ನು ಅವರೇ ಹೊರಗೆ ಬಿಟ್ಟಿರುವುದು. ಬಿಜೆಪಿಯವರು ಇದರಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ದೇಶದ ಬೇರೆ ಯಾವುದೇ ದೇಶದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಕೂಡಲೇ ಸರ್ಕಾರ ಸಂತ್ರಸ್ತೆಯರ ರಕ್ಷಣೆ ಮಾಡಬೇಕು” ಎಂದರು.
ಬಿಜೆಪಿ ಜೊತೆ ಮೈತ್ರಿ ಆಗುವುದಕ್ಕಿಂತ ಮೊದಲು ಕಾಂಗ್ರೆಸ್ ಬೆಂಬಲದಿಂದ ಸಂಸತ್ ಸದಸ್ಯರಾಗಿದ್ದರು ಎನ್ನುವ ಅಶೋಕ ಅವರ ಆರೋಪದ ಬಗ್ಗೆ ಕೇಳಿದಾಗ “ಇದು ಅವರು ಎಂಪಿಯಾದ ಮೇಲೆ ಅವರ ಕಚೇರಿಯಲ್ಲಿ ನಡೆದ ಕತೆ. ದೆಹಲಿ, ಫಾರಂ ಹೌಸ್ ಸೇರಿದಂತೆ ಮಿಕ್ಕ ಕಡೆ ನಡೆದಿದೆ ಎಂದು ಮಾಧ್ಯಮಗಳು ಹೇಳಿವೆ. ಕಷ್ಟ ಹೇಳಿಕೊಂಡು ಬಂದ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಘಟನೆಗಳಿವು. ಮಹಿಳೆಯರ ಕಷ್ಟಕ್ಕೆ ಪಲ್ಲಂಗ ಬಳಸಿಕೊಂಡಿದ್ದಾರೆ ಪ್ರಜ್ವಲ್ ರೇವಣ್ಣ. ಈ ಘಟನೆ ಬಗ್ಗೆ ಮಾತನಾಡಲು ನನಗೆ ಪದಗಳೇ ಬರುತ್ತಿಲ್ಲ.
ಈ ವಿಚಾರದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಮಾತನಾಡುವ ಮೊದಲು ಸ್ಥಳೀಯ ಮಾಧ್ಯಮಗಳು ಮಾತನಾಡಬೇಕಾಗಿತ್ತು. ನಾನು ವಾಟ್ಸ್ ಆಪ್ ಅಲ್ಲಿ ಬಂದಂತಹ ಅವರ ನೀಚ ಕೃತ್ಯದ ವಿಡಿಯೋವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲ. ಒಬ್ಬ ಹುಡುಗ ತನ್ನ ತಾಯಿ ವಯಸ್ಸಿನ ಮನೆಗೆಲಸದ ಮಹಿಳೆಯೊಂದಿಗೆ ನಡೆದುಕೊಂಡಿರುವುದು ಅಸಹ್ಯಕರ. ಯಾವ ನಂಬಿಕೆ ಇಟ್ಟುಕೊಂಡು ಮಹಿಳೆಯರು ಕೆಲಸಕ್ಕೆ ಹೋಗುವುದು” ಎಂದರು.
ಆರೋಪಿಗೆ ಯಾವ ರೀತಿಯ ಶಿಕ್ಷೆಯಾಗಬೇಕು ಎಂದು ಕೇಳಿದಾಗ “ಮೊದಲು ತನಿಖೆ ನಡೆಯಬೇಕು. ಇದಕ್ಕೆ ಎಂದೇ ಕಾನೂನು ಪಂಡಿತರಿದ್ದಾರೆ. ಮಾಧ್ಯಮದವರು ಐದೇ ನಿಮಿಷದಲ್ಲಿ ಆರೋಪಿಯನ್ನು ಗಲ್ಲಿಗೂ ಹಾಕಿಸಬಹುದು, ಯಾವ ಶಿಕ್ಷೆ ಬೇಕಾದರೂ ಕೊಡಬಹುದು. ಇದನ್ನು ನಾನು ಮಾಡಲು ಆಗುತ್ತದೆಯೇ?
ಸರ್ಕಾರ ಮೊಟ್ಟಮೊದಲಾಗಿ ಬೆಳಕಿಗೆ ಬಂದಿರುವ ಸಂತ್ರಸ್ತ ಮಹಿಳೆಯರಿಗೆ ಮೊದಲು ರಕ್ಷಣೆ ನೀಡಬೇಕು. ಏಕೆಂದರೆ ತನಿಖೆ ಎಷ್ಟು ದಿನ ನಡೆಯುತ್ತದೆ ಎಂದು ಗೊತ್ತಿಲ್ಲ, ಆದ ಕಾರಣ ಈ ಕೆಲಸ ಮೊದಲು ಆಗಬೇಕು ಏಕೆಂದರೆ ದೊಡ್ಡ ಕುಟುಂಬವಲ್ಲವೇ?” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ