Politics

*ನಮ್ಮ ಗೃಹಲಕ್ಷ್ಮಿ ಯೋಜನೆ ನಕಲು ಮಾಡಿದ ಪರಿಣಾಮ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಗೆಲುವು: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬ ಪ್ರಗತಿ ಹೊಂದಿದಂತೆ. ರಾಜ್ಯ, ಹಳ್ಳಿ ಪ್ರಗತಿಯಾದಂತೆ. ಆದ ಕಾರಣಕ್ಕೆ ನಮ್ಮ ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿರುವಂತೆ ರೂಪಿಸಲಾಗಿದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಕನಕಪುರದಲ್ಲಿ ಭಾನುವಾರ ನಡೆದ ಕನಕಾಂಬರಿ ಮಹಿಳಾ ಒಕ್ಕೂಟದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಮೈತ್ರಿ ಸರ್ಕಾರ ನಮ್ಮ ಗೃಹಲಕ್ಷ್ಮೀ ಯೋಜನೆಯನ್ನೇ ನಕಲು ಮಾಡಿ ‘ಮಾಝಿ ಲಡಕಿ ಬಹಿನ್ ಯೋಜನಾ’ ಎಂದು ಹೆಸರಿಟ್ಟು 1,500 ರೂಪಾಯಿಯನ್ನು ಕೊಟ್ಟಿದ್ದರು. ನಾವು ಮಹಾಲಕ್ಷ್ಮಿ ಎನ್ನುವ ಹೆಸರಿಟ್ಟು 3,000 ಸಾವಿರ ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ ಅಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಹಣ ನೀಡಿದ ಪರಿಣಾಮ ನಮಗಿಂತ ಅವರಿಗೆ ಹೆಚ್ಚು ಮತಗಳು ಬಂದವು.

ಸಾಮಾನ್ಯ ಮಹಿಳೆಯರು ಮುಂದೆ ಬರಬೇಕು

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಮುಖಂಡರುಗಳು ತಮ್ಮ ಹೆಂಡತಿ, ತಂಗಿ, ಅಕ್ಕ ಅಥವಾ ಸಂಬಂಧಿಕರನ್ನು ನಿಲ್ಲಿಸುತ್ತಿದ್ದಾರೆ. ಸಾಮಾನ್ಯ ಮಹಿಳೆಯರು ಅಧಿಕಾರದ ಗದ್ದುಗೆ ಇರಲು ಮುಂದಕ್ಕೆ ಬರಬೇಕು.

ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಿ

ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕಾಗಬಹುದು. ಅದಕ್ಕಾಗಿ ಸಾಮಾನ್ಯ ಮಹಿಳೆಯರು ಈಗಿನಿಂದಲೇ ತಮ್ಮಲ್ಲಿರುವ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ.

ಸ್ತ್ರೀಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು

ಎಸ್ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಆಗ ಈ ಸ್ತ್ರೀ ಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು. ಸಹಕಾರ ಇಲಾಖೆಯ ಅಡಿಯಲ್ಲಿ ಬರುವ ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ ಸ್ವಸಹಾಯ ಗುಂಪುಗಳಿದ್ದವು, ಇವುಗಳನ್ನೇ ಸ್ತ್ರೀಶಕ್ತಿ ಸಂಘಗಳೆಂದು ಪರಿವರ್ತಿಸಿ, ಸಚಿವರಾಗಿದ್ದ ಮೋಟಮ್ಮ ಅವರಿಗೆ ನೇತೃತ್ವ ನೀಡಲಾಯಿತು.

ಮಹಿಳೆಯರ ಆರ್ಥಿಕ ಸ್ಥಿತಿ ಆರೋಗ್ಯವಾಗಿರಬೇಕು

ಸ್ತ್ರೀ ಶಕ್ತಿ ಸಂಘಗಳು ಮಾಡಿದ ಪರಿಣಾಮವಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಇರುತ್ತಿಲ್ಲ ಇಂದು ಅನೇಕ ನಾಯಕರು ನನಗೆ ಬೈದರು. ಮನೆಯಲ್ಲಿ ಹೆಣ್ಣಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಎಂದು ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತೆ. ಹೆಣ್ಣು ಕುಟುಂಬದ ಕಣ್ಣು. ಕುಟುಂಬದಲ್ಲಿ ಹೆಣ್ಣಿನ ಮನಸ್ಥಿತಿ, ಪರಿಸ್ಥಿತಿ ಆರೋಗ್ಯವಾಗಿ ಇದ್ದರೆ, ನಾವೆಲ್ಲರೂ ಆರೋಗ್ಯವಾಗಿ ಇದ್ದಂತೆ. ಪುರುಷರೂ ಇದಕ್ಕೆ ಕೊಡುಗೆ ಕೊಡಬೇಕು.

ಮಹಿಳೆಯರು ಜಮೀನು ಮಾರಲು ಬಿಡಬೇಡಿ

ಯಾವುದೇ ಕಾರಣಕ್ಕೂ ತಮ್ಮ ಪಾಲಿನ ಭೂಮಿ ಮಾರಾಟ ಮಾಡದಂತೆ ಮನೆಯ ಪುರುಷರಿಗೆ ಮಹಿಳೆಯರು ಬುದ್ಧಿ ಮಾತು ಹೇಳಬೇಕು. ಏಕೆಂದರೆ ಭೂಮಿಯ ಬೆಲೆ ಹೆಚ್ಚಾಗಿದೆ. ನಾನು ಮೊದಲ ಬಾರಿಗೆ ಇಲ್ಲಿ ಚುನಾವಣೆಗೆ ನಿಂತಾಗ, ಒಂದು ಎಕರೆಗೆ ಎರಡರಿಂದ ಮೂರು ಲಕ್ಷ ಮಾತ್ರ ಇತ್ತು. ಈಗ 50 ಲಕ್ಷ ಬೆಲೆಬಾಳುತ್ತದೆ.

ಇದನ್ನು ರಾಮನಗರ ಜಿಲ್ಲೆ ಎಂದು ಕರೆಯಬಹುದು ಆದರೆ ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಗೆ ಸೇರಿದವರು. ಕನಕಪುರ ಎಷ್ಟರಮಟ್ಟಿಗೆ ಅಭಿವೃದ್ಧಿ ಆಗುತ್ತದೆ ಎಂಬುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಭೂಮಿ ಕಳೆದುಕೊಂಡರೆ ನಿಮ್ಮ ಜೇಬಿಗೆ ದುಡ್ಡನ್ನು ನಾನು ಹಾಕಲು ಆಗುವುದಿಲ್ಲ. ಜಮೀನು ಮಾರಿದರೆ ಒಳ್ಳೆಯ ಬೆಲೆ ಬರುತ್ತದೆ ಎಂದು ಆಮಿಷಕ್ಕೆ ಒಳಗಾಗಬೇಡಿ. ಯಾವುದೇ ಕಾರಣಕ್ಕೂ ಒಂದು ಕುಂಟೆ ಜಮೀನನ್ನು ಕಳೆದುಕೊಳ್ಳಬೇಡಿ.

ಕನಕಪುರಕ್ಕೆ ಹೊಸ ರೂಪ ನೀಡಬೇಕಾಗಿದೆ

ನಾವು ಇನ್ನೂ ಅಭಿವೃದ್ಧಿಯ ಮೈಲಿಗಲ್ಲನ್ನು ಸಾಧಿಸಬೇಕಾಗಿದೆ. ಕನಕಪುರಕ್ಕೆ ಹೊಸ ರೂಪವನ್ನು ನೀಡಬೇಕಾಗಿದೆ. 2025 ಕ್ಕೆ ಕನಕಪುರದ ಅಭಿವೃದ್ಧಿಗೆ ಹೊಸ ಕಾರ್ಯಕ್ರಮಗಳನ್ನು ನೀಡಲಾಗುವುದು. ಸರ್ಕಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರುವ ಕಾರಣ ನಿಮ್ಮನ್ನು ಭೇಟಿಯಾಗಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮೆಲ್ಲರ ಅಹವಾಲುಗಳನ್ನು ಕೇಳಲಾಗುವುದು.

ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ

ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ನಂಬಿಕೆ ಹೆಚ್ಚು. ಪಕ್ಷ ಅಧಿಕಾರಕ್ಕೆ ಬಂದರೆ ಇವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು. ನಾನು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದಾಗ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಲಾಯಿತು. ಅದೇ ರೀತಿ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ.

ಕೇವಲ ಸಾಲ ಪಡೆಯಬಾರದು, ಉದ್ಯೋಗ ನೀಡಬೇಕು

ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಶ್ರೀಕಂಠು ಅವರ ನೇತೃತ್ವದಲ್ಲಿ ನಿಮಗೆ ಕೆನರಾ ಬ್ಯಾಂಕ್ ಮೂಲಕ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಇವುಗಳನ್ನು ನೀವು ಬಳಸಿಕೊಂಡು ಉತ್ತಮ ಮಟ್ಟಕ್ಕೆ ಬೆಳೆದಿದ್ದೀರಿ ಎನ್ನುವುದು ನನ್ನ ಭಾವನೆ. ಸಾಲ ತೆಗೆದುಕೊಂಡವರು ಉತ್ತಮವಾಗಿ ಪಾವತಿ ಮಾಡುತ್ತಿದ್ದೀರಿ ಎಂಬುದನ್ನು ನಾನು ಕೇಳಲ್ಪಟ್ಟೆ.

ಈ ಸಂಸ್ಥೆಯಿಂದ ಸಾಲವನ್ನು ಪಡೆದವರು ತಮ್ಮ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಳ್ಳಬೇಕು. ಕೇವಲ ಸಾಲ ಪಡೆಯುವವರಾಗಬಾರದು. ನೀವು ಸಾಲ ಪಡೆದು ಸ್ವಂತ ಉದ್ಯೋಗವನ್ನು ಕಟ್ಟಿ ನಾಲ್ಕು ಜನಕ್ಕೆ ಉದ್ಯೋಗ ಸೃಷ್ಟಿ ಮಾಡಬೇಕು.

ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಯಾವುದೇ ದೇವರ ಹೆಸರನ್ನು ಕರೆಯುವಾಗ ಲಕ್ಷ್ಮೀ ವೆಂಕಟೇಶ್ವರ, ಶಿವ ಪಾರ್ವತಿ ಎಂದು ಕರೆಯಲಾಗುತ್ತದೆ. ಶ್ರೀಮತಿ ಹಾಗೂ ಡಿ. ಕೆ. ಶಿವಕುಮಾರ್ ಎಂದು ಲಗ್ನ ಪತ್ರಿಕೆಯಲ್ಲಿ ಬರೆಯುತ್ತಾರೆ.

ನಾನು ಈ ರಾಜ್ಯದ ಡಿಸಿಎಂ ಆಗಿರಬಹುದು ಆದರೆ ಮೊಟ್ಟ ಮೊದಲನೆಯದಾಗಿ ಈ ಕನಕಪುರದ ಮಗ. ನನ್ನ ಬೆಳೆಸಿದವರು ನೀವು. ನನ್ನ ಪರವಾಗಿ ಪ್ರತಿ ಚುನಾವಣೆಯಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದವರು ನೀವು. ನನಗೆ ಶಕ್ತಿ ಕೊಟ್ಟವರು ಇಲ್ಲಿನ ಜನತೆ ಈ ಕಾರಣಕ್ಕೆ ಇಡೀ ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ಕೊಡುವಷ್ಟು ಅಧಿಕಾರ ನಮಗೆ ಸಿಕ್ಕಿದೆ.

ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನ ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ. ಎನ್ನುವ ಶ್ಲೋಕದ ಮಾತಿನಂತೆ ಗೆಳೆಯ ಹಾಗೂ ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ, ಹಾಗೂ ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಶ್ರೀಕಂಠು ಅವರು ಹೆಚ್ಚಿನ ಜನ ಸೇವೆ ಮಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಕನಕಪುರ ರೂರಲ್ ಎಜುಕೇಷನ್ ಸೊಸೈಟಿಯ ನಿರ್ದೇಶಕ ಮಂಡಳಿಯಲ್ಲಿ ನಾನೂ ಇದ್ದೇನೆ. ಈ ಹಿಂದೆ ಭೂಮಿಯ ಬೆಲೆ ಕಡಿಮೆ ಇದ್ದಾಗ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದೆ. ಈಗ ನನ್ನ ಮಾತಿನ ಬೆಲೆ ಇವರಿಗೆ ಅರ್ಥವಾಗಿದೆ. ಈ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ಕೊಡಲಾಗಿದೆ. ಕೃಷಿ ಬಿಎಸ್ಸಿ ಸೇರಿದಂತೆ ಅನೇಕ ಕೋರ್ಸ್ ಗಳನ್ನು ಪ್ರಾರಂಭ ಮಾಡಲು ಅನುಮತಿ ಕೊಡಿಸಿದ್ದೇನೆ. ನಾನು ಸಹ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಇದರ ಜೊತೆ ಪೈಪೋಟಿ ನಡೆಸುವುದು ಬೇಡ ಎಂದು ನನ್ನ ದೊಡ್ಡ ಆಲಹಳ್ಳಿಯಲ್ಲಿ ಇದ್ದ ಜಮೀನನ್ನು ಸರ್ಕಾರಿ ಶಾಲೆಗೆ ಬರೆದುಕೊಟ್ಟಿದ್ದೇವೆ.

65 ವಸಂತಗಳನ್ನು ಪೂರೈಸಿರುವ ಕನಕಪುರ ರೂರಲ್ ಎಜುಕೇಷನ್ ಸೊಸೈಟಿಯ ಶ್ರೀಕಂಠು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೂ ಹೆಚ್ಚು ಜನಸೇವೆ ಮಾಡುವ ಶಕ್ತಿ ಅವರಿಗೆ ದೊರಕಲಿ.

ದರ್ಶನ್ ಧ್ರುವ ನಾರಾಯಣ್ ಗೆ ಉತ್ತಮ ಭವಿಷ್ಯವಿದೆ

ದರ್ಶನ್ ಧ್ರುವನಾರಾಯಣ್ ಚಿಕ್ಕ ವಯಸ್ಸಿನಲ್ಲಿ ಶಾಸಕನಾಗಿ ನಮ್ಮ ಜೊತೆ ಕೆಲಸ ಮಾಡುತ್ತಿದ್ದಾನೆ. ಅವರ ತಂದೆ ಅಕಾಲಿಕವಾಗಿ ಮರಣ ಹೊಂದದೆ ಇದ್ದಿದ್ದರೆ, ನಮ್ಮ ಜೊತೆ ಸಂಪುಟದಲ್ಲಿ ಮಂತ್ರಿ ಆಗುವುದನ್ನು ಯಾರು ಕೂಡ ತಪ್ಪಿಸಲು ಆಗುತ್ತಿರಲಿಲ್ಲ. ದರ್ಶನ್ ಧ್ರುವ ನಾರಾಯಣ್ ಗೆ ಉತ್ತಮ ಭವಿಷ್ಯವಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button