
ಪ್ರಗತಿವಾಹಿನಿ ಸುದ್ದಿ: ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದು ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಇಡಿ ವಿಚಾರಣೆಗೆ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವೂ ಇಲ್ಲ ಎಂದು ಹೇಳಿದರು.
ಇಡಿ ವಿಚಾರಣೆಗೆ ಹಾಜರಾಗುತ್ತೇನೆ. ಇಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವೂ ಇಲ್ಲ. ಆ ಮಹಿಳೆ ನನ್ನ ಸಹೋದರಿ ಎಂದು ಹೇಳಿಕೊಂಡಿದ್ದಾಳೆ. ಆಕೆ ಜೊತೆ ಯಾವುದೇ ವ್ಯವಹಾರವೂ ಇಲ್ಲ ಎಂದರು. ಇನ್ನು ಯಾರೋ ಒಬ್ಬ ನಟ ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿ ಅನುಕರಣೆ ಮಾಡಿ ವಂಚಿಸಿದ್ದಾನೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
ಇನ್ನು ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ. ತನ್ನ ವ್ಯಾಪ್ತಿಯಲ್ಲದ ಕೇಸ್ ಗಳನ್ನು ದಾಖಲಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಐಶ್ವರ್ಯ ಗೌಡ ವಂಚನೆ ಪ್ರಕರಣ; ಇಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ: ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್
ಇಬ್ಬರ ನಡುವೆ ಯಾವುದೇ ಹಣಕಾಸಿನ ವಹಿವಾಟು ನಡೆದಿಲ್ಲ
ಇಡಿ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ
ಬೆಂಗಳೂರು, ಜೂ.23:
“ಇಡಿಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ” ಎಂದು ಬಮೂಲ್ ಅಧ್ಯಕ್ಷ, ನಿಕಟಪೂರ್ವ ಸಂಸದರಾದ ಡಿ ಕೆ ಸುರೇಶ್ ಅವರು ಹೇಳಿದರು.
ಸದಾಶಿವನಗರ ನಿವಾಸದ ಬಳಿ ಸುರೇಶ್ ಅವರು ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.
ಇಡಿ ನೋಟಿಸ್ ರಾಜಕೀಯ ಷಡ್ಯಂತ್ರವೆಂದು ನಿಮಗೆ ಅನಿಸುತ್ತದೆಯೇ ಎಂದು ಕೇಳಿದಾಗ, “ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧವಿದೆ, ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ” ಎಂದರು.
“ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಇಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಏನು ಮಾಡುತ್ತಾರೆ ಎಂದು ನೋಡೋಣ” ಎಂದು ಮಾರ್ಮಿಕವಾಗಿ ನುಡಿದರು.
ಐಶ್ವರ್ಯ ಗೌಡ ನಿಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ನಿಮ್ಮ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂದಾಗ, “ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇನೆ” ಎಂದು ಸ್ಪಷ್ಟವಾಗಿ ನುಡಿದರು.
ನಟರೊಬ್ಬರು ನಿಮ್ಮ ದನಿ ಅನುಕರಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆಯ ಬೆಳವಣಿಗೆ ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದು ಹೇಳಿದರು.