*ರೋಹಿಣಿ ವಿರುದ್ಧ ಮುಖ್ಯಕಾರ್ಯದರ್ಶಿಗೆ ದಾಖಲೆ ಸಮೇತ ದೂರು; ಯಾವ ಶಕ್ತಿ ಆಕೆಯನ್ನು ರಕ್ಷಿಸುತ್ತಿದೆ?; ತನಿಖೆಯಾಗಲಿ ಎಂದು ಕಿಡಿಕಾರಿದ ಡಿ.ರೂಪಾ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಘರ್ಷ ಸರ್ಕಾರದ ಮುಖ್ಯಕಾರ್ಯದರ್ಶಿ ಅಂಗಳಕ್ಕೆ ಬಂದು ನಿಂತಿದೆ. ಇಬ್ಬರು ಮಹಿಳಾಧಿಕಾರಿಗಳು ಸಿಎಸ್ ವಂದಿತಾ ಶರ್ಮಾ ಅವರಿಗೆ ಪರಸ್ಪರ ದೂರು ನೀಡಿದ್ದಾರೆ.
ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವಿನ ಜಗಳದಿಂದ ಸರ್ಕಾರಕ್ಕೆ ಮುಜುಗರವುಂಟಾದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಇಬ್ಬರು ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರೋಹಿಣಿ ಸಿಂಧೂರಿ ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಸಿಎಸ್ ವಂದಿತಾ ಶರ್ಮಾ ಅವರನ್ನು ಭೇಟಿಯಾಗಿ, ಡಿ.ರೂಪಾ ತನ್ನ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿ ದೂರಿದ್ದರು.
ಇದರ ಬೆನ್ನಲ್ಲೇ ಸಂಜೆ ಐಪಿಎಸ್ ಅಧಿಕಾರಿ ಡಿ.ರೂಪಾ, ಸಿಎಸ್ ವಂದಿತಾ ಶರ್ಮಾ ಅವರನ್ನು ಭೇಟಿಯಾಗಿ ತಾವು ರೋಹಿಣಿ ಮೇಲೆ ಮಾಡಿದ ಆರೋಪಗಳ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದು, ರೋಹಿಣಿಯಿಮ್ದ ತಾನೊಬ್ಬಳೆ ಅಲ್ಲ, ಹಲವು ಮಹಿಲಾ ಅಧಿಕಾರಿಗಳು ನೊಂದಿದ್ದಾರೆ ಎಂದು ತಿಳಿದುಬಂದಿದೆ.
ಸಿಎಸ್ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ರೂಪಾ, ನಾನು ಮಾಡಿದ ಆರೋಪಗಳ ಬಗ್ಗೆ ರೋಹಿಣಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿದ್ದಾರೆ.
ಕೆಲ ದಾಖಲೆಗಳ ಸಮೇತ ಮುಖ್ಯಕಾರ್ಯದರ್ಶಿಯವರಿಗೆ ದೂರು ನೀಡುತ್ತೇನೆ. ರೋಹಿಣಿ ವಿರುದ್ಧ ಹಲವು ಆರೋಪಗಳು ಸಾಬೀತಾಗಿವೆ. ನನ್ನ ಬಳಿ ದಾಖಲೆಗಳೂ ಇವೆ. ಆದಾಯಮೀರಿದ ಆಸ್ತಿಗಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಆರೋಪಗಳು ಇವೆ. ಬೆಂಗಳೂರಿನ ಮನೆಗೆ ಇಟಾಲಿಯನ್ ಪೀಠೋಪಕರಣ, ಜರ್ಮನ್ ಪೀಠೋಪಕರಣಗಳ ಖರೀದಿಗೆ ಕೋಟ್ಯಂತರೂಪಾಯಿ ಖರ್ಚು ಮಾಡಿದ್ದಾರೆ. ಮೈಸೂರಿನಲ್ಲಿ ಡಿಸಿ ಆಗಿದ್ದಾಗ ಪೀಠೋಪಕರಣಗಳನ್ನೇ ಕೊಂಡೊಯ್ದಿದ್ದರು. ಸರ್ವಿಸ್ ಕಂಡಕ್ಟ್ ರೂಲ್ಸ್ ಉಲ್ಲಂಘನೆ ಮಾಡಿ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾರೆ. ಎಲ್ಲ ಆರೋಪಗಳು ಸಾಬೀತಾಗಿವೆ. ಆದರೂ ಈವರೆಗೆ ರೋಹಿಣಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಯಾವ ಶಕ್ತಿ ಅವರನ್ನು ರಕ್ಷಿಸುತ್ತಿದೆ? ಈ ಬಗ್ಗೆಯೂ ತನಿಖೆಯಾಗಲಿ, ಲೋಕಾಯುಕ್ತ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದ್ದಾರೆ.
*ಡಿ.ರೂಪಾ ವಿರುದ್ಧ ಮುಖ್ಯಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ದೂರು*
https://pragati.taskdun.com/rohini-sindhurireactiond-roopa-2/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ