ದೆಹಲಿಯಿಂದ ಕರ್ನಾಟಕಕ್ಕೆ ವಿಶೇಷ ರೈಲು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್ಡೌನಿಂದಾಗಿ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲೊಂದನ್ನು ಓಡಿಸಲು ರೇಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ, ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದಿದ್ದಾರೆ.

ದೆಹಲಿಯ ಹೊರತಾಗಿ ಹರಿಯಾಣ, ಪಂಜಾಬ್‌ ಮತ್ತಿತರ ಸಮೀಪದ ಸ್ಥಳಗಳಿಂದಲೂ ರಾಜ್ಯಕ್ಕೆ ವಾಪಸ್‌ ಆಗಲು ಅಲ್ಲಿರುವ ಕನ್ನಡಿಗರು ಕಾತರರಾಗಿದ್ದಾರೆ. ಆ ರಾಜ್ಯಗಳ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ಅವರನ್ನೂ ಇದೇ ರೈಲಿನಲ್ಲಿ ಕರ್ನಾಟಕಕ್ಕೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡುವಂತೆ ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ಹಾಗೆಯೇ ಅರಬ್ ದೇಶಗಳಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ಎರಡು ವಿಮಾನಗಳ ವ್ಯವಸ್ಥೆಯಾಗಿದೆ. ಇದೇ 12ನೇ ತಾರೀಖು ಯುಏಇನಿಂದ ಮಂಗಳೂರಿಗೆ ವಿಮಾನ ಸಂಚರಿಸುವುದನ್ನು ವಿದೇಶಾಂಗ ಸಚಿವರು ತಮಗೆ ಖಚಿತಪಡಿಸಿದ್ದಾರೆ. ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದ್ದು ಅದರ ವೇಳಾಪಟ್ಟಿಯಿನ್ನೂ ಪ್ರಕಟವಾಗಬೇಕಿದೆ ಎಂದು ಸಚಿವ ಸದಾನಂದ ಗೌಡ ಅವರು ತಿಳಿಸಿದ್ದಾರೆ.

Home add -Advt

ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಕರ್ನಾಟಕಕ್ಕೆ ಮರಳಲು ಇಚ್ಛಿಸಿದ ಅನೇಕ ದೆಹಲಿವಾಸಿ ಕನ್ನಡಿಗರು ಹಾಗೂ ಯಾತ್ರಾರ್ಥಿಳಿಗೂ ಅಗತ್ಯ ಪರವಾನಿಗೆಯನ್ನು ಕೊಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

Back to top button