CrimeKarnataka NewsLatest

*ಗಸ್ತು ಹೆಸರಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನ ಮೇಲೆ ಹಲ್ಲೆ, ವಸೂಲಿ*: *ಇಬ್ಬರು ಪೊಲೀಸರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ರಾತ್ರಿ ಗಸ್ತು ತಿರುಗುವ ಹೆಸರಲ್ಲಿ ವಾಹನದಲ್ಲಿ ಬಂದ ಪೊಲೀಸರೇ ವಸೂಲಿಗಿಳಿದಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಗಸ್ತು ಹೆಸರಿನಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನೊಬ್ಬನಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶಿವರಾಜ್ ಮತ್ತು ಹಿರಣ್ಣ ಬೆನ್ನಿ ಬಂಧಿತರು. ಇವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುವ ವಿಟ್ಲ ನಿವಾಸಿ ರವಿರಾಜ್ ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಪ್ರಕಾರ, ರವಿರಾಜ್ ಮಂಗಳೂರಿನ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ಆಗ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರವಿರಾಜ್ ಅವರ ಜೇಬಿನಿಂದ ಮೊಬೈಲ್ ತೆಗೆದು, ಮೊಬೈಲ್ ಕವರ್‌ನಲ್ಲಿದ್ದ ₹300 ಹಣವನ್ನು ತೆಗೆದುಕೊಂಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಹಿರಣ್ಣ ಬೆನ್ನಿ ಮತ್ತು ಶಿವರಾಜ್, ರವಿರಾಜ್ ಅವರಿಗೆ ಮತ್ತೆ ದೌರ್ಜನ್ಯ ಎಸಗಿದ್ದಾರೆ. ಮೊಬೈಲ್ ಕವರ್‌ನಲ್ಲಿದ್ದ ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು, ₹1,000 ನಗದು ಹಾಗೂ ಮೋಟಾರು ಸೈಕಲ್‌ನ ಕೀಯನ್ನು ತೆಗೆದುಕೊಂಡಿದ್ದಾರೆ. ಮೊಬೈಲ್‌ನ ಪಾಸ್‌ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ₹2,000 ನೀಡಬೇಕು, ಇಲ್ಲದಿದ್ದರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದಾರೆ.

ಇದಾದ ಬಳಿಕ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಉಮಾನಾಥ್ ಅವರು ಬೈಕ್ ಅನ್ನು ವಶಪಡಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಬಲವಂತವಾಗಿ ನಗದು ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರವಿರಾಜ್ ನೀಡಿದ ದೂರಿನ ಮೇರೆಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ನೀಡಿದ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿ ಹಿರಣ್ಣ ಬೆನ್ನಿ ಮತ್ತು ಶಿವರಾಜ್ ಅವರನ್ನು ಬಂಧಿಸಲಾಗಿದೆ.

Related Articles

Back to top button