Latest

ರಾಜ್ಯಸಭೆಗೆ ಬಿಜೆಪಿಯಿಂದ ಡಾರ್ಕ್ ಹಾರ್ಸ್?

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರೀ ಕುತೂಹಲ ಮೂಡಿಸಿರುವ ರಾಜ್ಯಸಭೆ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕೇಂದ್ರ ಸಮಿತಿ ಸಭೆ ಇಂದು ರಾತ್ರಿ ಸಭೆ ಸೇರುವ ನಿರೀಕ್ಷೆ ಇದೆ.

ಜುಲ 19ರಂದು ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕದಿಂದ ನಾಲ್ವರಿಗೆ ರಾಜ್ಯಸಭೆ ಪ್ರವೇಶಕ್ಕೆ ಅವಕಾಶವಿದೆ.

ಬಿಜೆಪಿಯಿಂದ ಇಬ್ಬರ ಆಯ್ಕೆ ಖಚಿತವಾಗಿದ್ದು, ಕ್ರಾಸ್ ಓಟಿಂಗ್ ಆದಲ್ಲಿ ಮೂರನೇ ಅಭ್ಯರ್ಥಿ ಕೂಡ ಜಯಗಳಿಸಬಹುದು. ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಾಂಗ್ರೆಸ್ ಮತಗಳನ್ನು ಹಂಚಿಕೊಂಡು ಸ್ಪರ್ಧಿಸುವ ಸಾಧ್ಯತೆ ಇದೆ.

ಬಿಜೆಪಿ ಇಬ್ಬರನ್ನು ಕಣಕ್ಕಿಳಿಸಲಿದೆಯೋ, ಮೂವರನ್ನೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಕೇಂದ್ರ ಸಮಿತಿ ಇದನ್ನು ನಿರ್ಧರಿಸಬೇಕಿದೆ. ಕರ್ನಾಟಕ ಬಿಜೆಪಿ ಐವರ ಹೆಸರನ್ನು ಕೇಂದ್ರ ಸಮಿತಿಗೆ ಕಳುಹಿಸಿದ್ದು, ಅದರಲ್ಲಿ ಕೇಂದ್ರ ಸಮಿತಿ ಅಂತಿಮ ಆಯ್ಕೆ ಮಾಡಬೇಕಿದೆ. ಆದರೆ ಅದೇ ಹೆಸರಿನಲ್ಲಿ ಆಯ್ಕೆ ಮಾಡಬೇಕೆನ್ನುವ ನಿಬಂಧನೆಯೇನೂ ಇಲ್ಲ. ಕೇಂದ್ರ ಸಮಿತಿ ಬೇರೆ ಹೆಸರನ್ನೂ ಪರಿಗಣಿಸಬಹುದು.

ಹಾಲಿ ರಾಜ್ಯಸಭೆ ಸದಸ್ಯ, ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಂಸದ, ವಿಆರ್ ಎಲ್ ಚೇರಮನ್ ವಿಜಯ ಸಂಕೇಶ್ವರ, ಉದ್ಯಮಿಗಳಾದ ಪ್ರಕಾಶ ಶೆಟ್ಟಿ, ಕೆ.ವಿ.ಕಾಮತ್ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ. ತೇಜಸ್ವಿನಿ ಅನಂತಕುಮಾರ ಮತ್ತು ಸುಧಾ ಮೂರ್ತಿ ಹೆಸರು ಮೊದಲು ಬಂದಿತ್ತಾದರೂ ಅಂತಿಮವಾಗಿ ಅವು ಪರಿಗಣನೆಯಾಗಿಲ್ಲ.

ಪ್ರಕಾಶ ಶೆಟ್ಟಿ ಹೆಸರು ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ. ಇನ್ನು ಒಬ್ಬರು ಅಥವಾ ಇಬ್ಬರ ಹೆಸರನ್ನು ಘೋಷಿಸಬೇಕಿದೆ. ಬೆಳಗಾವಿಯಿಂದ ಕೋರೆ ಮತ್ತು ಕತ್ತಿ ಇಬ್ಬರನ್ನೂ ಪರಿಗಣಿಸಲು ಸಾಧ್ಯವಿಲ್ಲ. ಇಬ್ಬರಲ್ಲಿ ಒಬ್ಬರ ಹೆಸರನ್ನು ಘೋಷಿಸಿದರೆ ಅದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರವೂ ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ ಹೊಸ ವ್ಯಕ್ತಿಯೊಬ್ಬರು ಡಾರ್ಕ್ ಹಾರ್ಸ್ ಆಗಬಹುದು ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ. ಇನ್ನೊಂದು ಮೂಲಗಳ ಪ್ರಕಾರ ಪ್ರಭಾಕರ ಕೋರೆ ಕೆಎಲ್ಇ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿರುವುದರಿಂದ ಅವರನ್ನು ಕೈ ಬಿಡುವುದಿಲ್ಲ ಎನ್ನುವ ಸುದ್ದಿಯೂ ಇದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಬಿಜೆಪಿಯ ಹಿರಿಯ ಕಾರ್ಯಕರ್ತ ರೊಬ್ಬರ ಹೆಸರು ಸೂಚಿತವಾಗಿದೆ ಎಂದು ಗೊತ್ತಾಗಿದೆ.  ಯಡಿಯೂರಪ್ಪ ಜೊತೆ ಹಾಗೂ ಬಿಜೆಪಿ ಹೈಕಮಾಂಡ್, ಸಂಘಪರಿವಾರ ಎಲ್ಲರ ಜೊತೆಯೂ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರನ್ನು ಪರಿಗಣಿಸಲು ಪಕ್ಷ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೆ ಪಕ್ಷದ ವರಿಷ್ಠರು ಅವರನ್ನು ಸಂಪರ್ಕಿಸಿದ್ದಾರೆ, ಬೆಂಗಳೂರಿನಲ್ಲೇ ಇರುವಂತೆ ತಿಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕೋರೆ, ಕತ್ತಿ ಕೈಬಿಟ್ಟರೂ ಬೆಳಗಾವಿಗೆ ಸ್ಥಾನ ತಪ್ಪುವುದಿಲ್ಲ ಎನ್ನುವ ಸುದ್ದಿ ಇದೆ. ಯಾವುದಕ್ಕೂ ಬಿಜೆಪಿ ಕೇಂದ್ರ ಸಮಿತಿ ಸಭೆಯ ನಂತರ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ನಾಳೆ ಬೆಳಕು ಹರಿಯುವ ಮುನ್ನ ಡಾರ್ಕ್ ಹಾರ್ಸೋ, ವೈಟ್ ಹಾರ್ಸೋ ಎನ್ನುವುದು ಸ್ಪಷ್ಟವಾಗಲಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button