*ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲೇ ಗತಿ: ತಲೆ ದಿಂಬು, ಬೆಡ್ ಶೀಟ್ ನೀಡಲು ಅನುಮತಿ ನೀಡಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್ ಗೆ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ಸದ್ಯಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜೈಲಿನಲ್ಲಿ ಹಾಸಿಗೆ, ಬೆಡ್ ಶೀಟ್, ತಲೆದಿಂಬು ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ೫೭ನೇ ಸಿಸಿಹೆಚ್ ನ್ಯಾಯಾಲಯ, ದರ್ಶನ್ ಮನವಿಗೆ ಸ್ಪಂದಿಸಿದೆ. ಬೆಳಿಗ್ಗೆ ನಡೆದ ವಿಚಾರಣೆ ವೇಳೆ ನಟ ದರ್ಶನ್ ದಯವಿಟ್ಟು ನನಗೆ ಸ್ವಲ್ಪ ವಿಷ ಕೊಟ್ಟು ಬಿಡಿ. ಜೈಲಿನಲ್ಲಿರಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದರು. ನಾನು ಬಿಸಿಲು ನೋಡದೇ ೩೦ ದಿನಗಳಾಗಿವೆ. ಕೈಯಲ್ಲಿ ಫಂಗಸ್ ಬಂದಿದೆ. ತುಂಬಾ ಕಿರಿಕಿಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಆದೇಶವನ್ನು ಕೋರ್ಟ್ ಮಧ್ಯಾಹ್ನಕ್ಕೆ ಕಾಯ್ದಿರಿಸಿತ್ತು.
ಮಧ್ಯಾಹ್ನ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ ಮನವಿಯಂತೆ ಬೆಡ್ ಶೀಟ್, ಹಾಸಿಗೆ, ತಲೆದಿಂಬು ನೀಡಲು ಒಪ್ಪಿದೆ. ಅಲ್ಲದೇ ದರ್ಶನ್ ಗೆ ಜೈಲಿನಲ್ಲಿ ವಾಕ್ ಮಾಡಲು ಅವಕಾಶ ನೀಡಿದೆ. ವಾರದಲ್ಲಿ ಎರಡು ದಿನ ಕುಟುಂಬಕ್ಕೆ ಕರೆ ಮಾಡಲು ಅವಕಾಶವಿದೆ. ಜೈಲಿನ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಸದ್ಯಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಅಗತ್ಯವಿಲ್ಲ, ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.