*ದರ್ಶನ್ ಅವರ ಜೀವನವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ: ನಟಿ ರಮ್ಯಾ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ಮತ್ತೆ ಜೈಲುಪಾಲಾಗಿರುವ ನಟ ದರ್ಶನ್ ವಿಚಾರವಾಗಿ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಮ್ಯಾ, ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ಸಮಾಧಾನವಾಗಿದೆ. ಎಲ್ಲೋ ಒಂದು ಕಡೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯಸಿಕ್ಕಿದಂತೆ ಅನಿಸುತ್ತಿದೆ. ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು. ಸುಪ್ರೀಂ ಕೋರ್ಟ್ ತೀರ್ಪಿಗೆ ಧನ್ಯವಾದ. ಈ ಮೂಲಕ ದೊಡ್ಡ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.
ನಟ ದರ್ಶನ್ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ ಎನಿಸುತ್ತದೆ. ತುಂಬಾ ಕಷ್ಟಪಟ್ಟು ದೊಡ್ಡ ಸ್ಟಾರ್ ಆದವರು. ಅವರು ಲೈಟ್ ಬಾಯ್ ಆಗಿದ್ದವರು ಎಷ್ಟು ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತರು. ಅದೇ ರೀತಿ ಉತ್ತಮ ಮಾರ್ಗದಲ್ಲಿ ನಡೆದಿದ್ದರೆ ಸಮಾಜಕ್ಕೆ ಮಾದರಿಯಾಗಬಹುದಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದರ್ಶನ್ ಫ್ಯಾನ್ಸ್ ಹೆಸರಲ್ಲಿ ಅಶ್ಲೀಲ ಕಮೆಂಟ್ ವಿಚಾರವಾಗಿ ಪ್ರತಿಕ್ರಿಯಿಸಿದ ರಮ್ಯಾ, ಕಮೆಂಟ್ ಬಾಕ್ಸ್ ಸ್ವಚ್ಛ ಭಾರತ್ ಆದಂತಾಗಿದೆ. ಕೆಟ್ಟ ಕಮೆಂಟ್ ಮಾಡಿದ್ದ ಏಳು ಜನರನ್ನು ಬಂಧಿಸಲಾಗಿದೆ. ಇನ್ನೂ ಹಲವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದರು.