Kannada NewsKarnataka NewsLatestPolitics

*ದಸರಾ ಗೊಂದಲ*: *ಪ್ರಮೋದಾದೇವಿ ಪತ್ರಕ್ಕೆ ಪೊಲೀಸ್ ಕಮಿಷನರ್ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ವೇಳೆ ಅರಮನೆ ಆಡಳಿತ ಮತ್ತು ರಾಜಮನೆತನದಿಂದ ವ್ಯಕ್ತವಾದ ಆಕ್ಷೇಪಗಳಿಗೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸುದೀರ್ಘ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಅಡ್ಡಿಪಡಿಸಿಲ್ಲ. ಅಗತ್ಯವಿದ್ದ ಕಡೆ ಮಾತ್ರ ಬ್ಯಾರಿಕೇಡ್ ಅಳವಡಿಸಿ, ಭದ್ರತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಟ್ಟಿ ಕಾಳಗದ ವ್ಯವಸ್ಥೆಯಲ್ಲೂ ಪೊಲೀಸ್ ಇಲಾಖೆಯಿಂದ ತಪ್ಪಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮೋದಾದೇವಿ ಒಡೆಯರ್ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸೀಮಾ ಲಾಟ್ಕರ್, ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು ಮತ್ತು ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಭದ್ರತೆಗೆ ಆದ್ಯತೆ ನೀಡಲಾಗಿತ್ತು ಎಂದಿದ್ದಾರೆ. ಕಾಲ್ತುಳಿತ ಸೇರಿದಂತೆ ಅಹಿತಕರ ಘಟನೆಗಳನ್ನು ತಡೆಯಲು ಕ್ರಮ ಕೈಗೊಂಡಿದ್ದು, ಧಾರ್ಮಿಕ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ. ಅರಮನೆ ಆಡಳಿತ ಮಂಡಳಿಯೊಂದಿಗೆ ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆಗಳನ್ನೂ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವಜ್ರಮುಷ್ಠಿ ಕಾಳಗಕ್ಕೆ ಆಗಮಿಸುವ ಜಟ್ಟಿ ಸಮುದಾಯದವರಿಗೆ ಪ್ರತಿ ವರ್ಷದಂತೆ ಬ್ರಹ್ಮಪುರಿ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು. ಕಾಳಗಕ್ಕೆ ನಿಗದಿತ ಸಮಯವಿದ್ದರೂ ಮೂರು ತಂಡಗಳು ಸರಿಯಾದ ಸಮಯಕ್ಕೆ ಆಗಮಿಸಿದ್ದು, ನಾಲ್ಕನೇ ತಂಡ ತಡವಾಗಿ ಬಂದಿತ್ತು. ಜೊತೆಗೆ, ಪಾಸ್ ಇಲ್ಲದವರನ್ನೂ ಕರೆದುಕೊಂಡು ಬಂದಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅವಕಾಶ ನೀಡಿರಲಿಲ್ಲ. ಅಧಿಕಾರಿಗಳ ಕುಟುಂಬ ಸದಸ್ಯರಿಗೂ ಪ್ರವೇಶ ಕಲ್ಪಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೊಸ ಆನೆಯನ್ನು ನಿಯೋಜಿಸಿದ್ದ ಹಿನ್ನೆಲೆಯಲ್ಲಿ ದಸರಾ ಪಾಸ್ ಹೊಂದಿದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಅಂಬಾರಿ ಸ್ವೀಕರಿಸುವಾಗ ಮತ್ತು ವಾಪಸ್ ನೀಡುವಾಗ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ. ಅಧಿಕೃತ ಪಾಸ್ ಹೊಂದಿದ್ದವರಿಗೆ ಅಂಬಾರಿ ಕಟ್ಟುವ ಮತ್ತು ಹಿಂತಿರುಗಿಸುವ ಸಂದರ್ಭದಲ್ಲಿ ಅರಮನೆ ಪ್ರತಿನಿಧಿಗಳ ಉಪಸ್ಥಿತಿಗೆ ಅವಕಾಶ ನೀಡಲಾಗಿತ್ತು. ರಾಜಮನೆತನದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಭದ್ರತೆ ಒದಗಿಸಲಾಗಿತ್ತು. ಅರಮನೆಯ ಬ್ರಹ್ಮಪುರಿ ಗೇಟ್‌ನಲ್ಲಿಯೂ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button