*‘ಮೈಮಾಟ’ ಹಾಡು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಲ್ಲ*: *ಚಂದನ್ ಶೆಟ್ಟಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಗಾಯಕ ಹಾಗೂ ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಹೊಸ ಹಾಡು ‘ಮೈಮಾಟ’ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಡಿನ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರ ವೈಯಕ್ತಿಕ ಜೀವನಕ್ಕೆ ಹೋಲಿಸಿ ಕೆಲವರು ಊಹಾಪೋಹಗಳನ್ನು ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, ಹಾಡಿಗೂ ತಮ್ಮ ವೈಯಕ್ತಿಕ ಬದುಕಿಗೂ ಸಂಬಂಧ ಕಲ್ಪಿಸಬೇಡಿ ಎಂದು ಮನವಿ ಮಾಡಿದ್ದಾರೆ.
‘ಮೈಮಾಟ’ ಹಾಡಿನ ಆರಂಭದಲ್ಲೇ ತಿಳಿಸಿರುವಂತೆ, ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದೆ. ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವಿಲ್ಲ. ಹೊಸ ಸಂಗೀತ ಶೈಲಿಯಲ್ಲಿ ಪ್ರಯೋಗ ಮಾಡಬೇಕೆಂಬ ಆಸೆ ಬಹಳ ಹಿಂದಿನಿಂದಲೂ ಇತ್ತು. ತಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಘಟನೆಗಳು ನಡೆಯುವುದಕ್ಕೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಡನ್ನು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಮತ್ತು ಊಹಾಪೋಹಗಳು ಕೇಳಿಬರುತ್ತಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ದಯವಿಟ್ಟು ಹಾಡನ್ನು ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹ ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ಸಂಗೀತ ಎನ್ನುವುದು ಸೃಜನಶೀಲ ಅಭಿವ್ಯಕ್ತಿ. ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಹಾಡಿಗೆ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದು, ಜನರ ಪ್ರೀತಿಯೇ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
ಇನ್ನೊಂದೆಡೆ, ‘ಮೈಮಾಟ’ ಹಾಡು ಬಿಡುಗಡೆಯಾದ ಸಮಯದಲ್ಲೇ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಕೂಡ ಚರ್ಚೆಗೆ ಕಾರಣವಾಗಿತ್ತು. ತಮ್ಮ ಹಿಂದಿನ ಪ್ರೇಮ ಜೀವನವನ್ನು ಹಾರರ್ ಕಥೆಗೆ ಹೋಲಿಸಿ, ‘ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ’ ಎಂಬರ್ಥದ ಮಾತುಗಳನ್ನು ಬರೆದಿದ್ದರು. ದಯವಿಟ್ಟು ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ’ ಎಂದು ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



