ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಡಹಬ್ಬ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ.
ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ವರ್ಷ ವಿಶ್ವ ವಿಖ್ಯಾತ ಮೈಸೂರು ದಸರಾ ತುಂಬಾ ಸರಳವಾಗಿ ನಡೆಯಲಿದ್ದು, ಈ ಬಾರಿ ಕೊರೊನಾ ವಾರಿಯರ್ಸ್ ಅವರಿಂದಲೇ ದಸರಾ ಉದ್ಘಾಟನೆ ಮಾಡಿಸಬೇಕು ಎಂದು ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಂಪುಟ ಸದಸ್ಯರು ಕೂಡ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಮಂಜುನಾಥ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಒಲವು ಹೊಂದಿದ್ದರು.
ಅದರಂತೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ, ಕೊರೊನಾ ವಾರಿಯರ್ ಕೂಡ ಆಗಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರನ್ನು ಇದೀಗ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ. ಅ.17ರಂದು ಡಾ.ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ಅವರು ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸತ್ರೆಯನ್ನಾಗಿ ಮಾಡಿ ಬಡಜನರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿದವರು. ಸಾಮಾಜಿಕ ಕಳಕಳಿಯುಳ್ಳ ಹೃದಯವಂತ, ಕೊರೊನಾ ಸಂಕೀರ್ಣದ ಕಾಲದಲ್ಲಿ ಟಾಸ್ಕ್ ಫೋರ್ಸ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ