*ಜಮೀನಿನಲ್ಲಿ ಖರ್ಜೂರ ಬೆಳೆ ಬೆಳೆದು ಗಮನ ಸೆಳೆದ ರೈತ: ‘ಖರ್ಜೂರ ಕೊಯ್ಲು’ ಹಬ್ಬ ಏರ್ಪಡಿಸಿ ಗ್ರಾಹಕರನ್ನು ಆಹ್ವಾನಿಸಿದ ಉಪನ್ಯಾಸಕ*
ಪ್ರಗತಿವಾಹಿನಿ ಸುದ್ದಿ: ಗೌರಿಬಿದನೂರಿನ ರೈತರೊಬ್ಬರು ಎರಡು ಎಕರೆ ಭೂಮಿಯಲ್ಲಿ ಸಾವಯುವ ಪದ್ಧತಿಯಲ್ಲಿ ಖರ್ಜೂರ ಬೆಳೆದಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಸುತ್ತಮುತ್ತಲಿನ ನೂರಾರು ಗ್ರಾಹಕರಿಗೆ ಮನೆ ಬಾಗಿಲಲ್ಲೇ ಪೂರೈಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ತುಮಕೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿದ್ದ ದಿವಾಕರ್ ಚಂಗಪ್ಪ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಪ್ರಾಯೋಗಿಕವಾಗಿ ಬಯಲು ಸೀಮೆ ಪ್ರದೇಶಕ್ಕೆ ಅಪರೂಪ ಎನ್ನಬಹುದಾದ ಖರ್ಜೂರ ಬೆಳೆಯನ್ನು ಬೆಳೆಯಲು ನಿರ್ಧರಿಸಿ ಹದಿನಾಲ್ಕು ವರ್ಷಗಳ ಹಿಂದೆ 120 ಖರ್ಜೂರ ಗಿಡಗಳನ್ನು ಎರಡು ಎಕರೆ ಭೂಮಿಯಲ್ಲಿ ನೆಟ್ಟು ಪೋಷಿಸಲು ಪ್ರಾರಂಭಿಸಿದರು. ಏಳು ವರ್ಷಗಳಿಂದ ಪೌಷ್ಟಿಕಾಂಶವುಳ್ಳ ಉತ್ತಮ ಮಟ್ಟದ ರುಚಿ ಭರಿತ ಖರ್ಜೂರ ಪೂರೈಕೆ ಮಾಡುವ ಉದ್ದೇಶದಿಂದ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು ಗಿಡಗಳಿಗೆ ” ಜೀವಾಮೃತ” ಉಣಿಸುವ ಮೂಲಕ ಉತ್ತಮ ಗುಣ ಮಟ್ಟದ ಖರ್ಜೂರವನ್ನು ಸ್ಥಳೀಯವಾಗಿ ಮಾರುಕಟ್ಟೆ ಮಾಡುವ ಉದ್ದೇಶದಿಂದ ಗ್ರಾಹಕರಿಗೆ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿದ್ದಾರೆ.
ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ಮತ್ತು ನಗರವಾಸಿಗಳಿಗೆ ಗ್ರಾಮೀಣ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ
ಕಳೆದ ಮೂರು ವರ್ಷಗಳಿಂದ “ಖರ್ಜೂರ ಕೊಯ್ಲು” ಹಬ್ಬವನ್ನು ಗೌರಿಬಿದನೂರಿನ ಸಮೀಪವಿರುವ ಸಾಗಾನಹಳ್ಳಿಯ ತಮ್ಮ ತೋಟದಲ್ಲಿ ಏರ್ಪಡಿಸಿದ್ದಾರೆ. ಈ ವರ್ಷ ಇದೇ 25ನೇ ಆಗಸ್ಟ್ ಭಾನುವಾರದಂದು ಹಬ್ಬ ಏರ್ಪಡಿಸಿದ್ದು ಗ್ರಾಹಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇಡೀ ದಿನ ತೋಟದಲ್ಲಿ ಸುತ್ತಾಡಿ ಖರ್ಜೂರ ಕೊಯ್ಲು ಮಾಡಬಹುದು. ಅಲ್ಲದೆ ಹಬ್ಬದ ಅಂಗವಾಗಿ ಎತ್ತಿನ ಬಂಡಿ ಓಡಾಟ ಏರ್ಪಡಿಸಿದ್ದು ಗ್ರಾಹಕರು ಎತ್ತಿನ ಬಂಡಿಯಲ್ಲಿ ಕುಳಿತು ತೋಟವನ್ನೂ ವೀಕ್ಷಿಸಬಹುದಾಗಿದೆ, ಮಧ್ಯಾನ್ಹ ಗ್ರಾಮೀಣ ಸೊಗಡು ಮಿಶ್ರಿತ ಭೋಜನವನ್ನು ಕೂಡ ಸವಿಯಬಹುದು ಎಂದು ತಿಳಿಸಿದರು.
ಕಳೆದ ವರ್ಷ ಸುಮಾರು 4500 ಕೆಜಿ ಎಷ್ಟು ಖರ್ಜೂರ ಬೆಳೆದಿದ್ದು ಗ್ರಾಹಕರಿಗೆ ಪೂರೈಕೆ ಮಾಡಿದ್ದಾಗಿ ತಿಳಿಸಿದರು. ತಾವೇ ಬೆಲೆ ನಿಗದಿ ಮಾಡಲಿದ್ದು ಸಾವಯವ ಪದ್ಧತಿಯಲ್ಲಿ ಬೆಳೆಯುವುದರಿಂದ ಬೆಲೆ ತುಸು ಹೆಚ್ಚು ಎಂದು ತಿಳಿಸಿ ಒಂದು ಕೆಜಿ ಖರ್ಜೂರ ರೂ 350.00 ರಂತೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ