Kannada NewsKarnataka NewsLatest

*ಸರ್ಕಾರದಿಂದ ದತ್ತಪೀಠ ಹೋರಾಟಗಾರರ ವಿರುದ್ಧದ ಕೇಸ್ ರೀ ಓಪನ್?; ಸುಳ್ಳು ಎಂದ ಸರಕಾರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಪ್ರಕರಣವನ್ನು 31 ವರ್ಷಗಳ ಬಳಿಕ ರೀ ಓಪನ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಬೆನ್ನಲ್ಲೇ ಇದೀಗ ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣವನ್ನು ರೀ ಓಪನ್ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಆದರೆ ರಾಜ್ಯ ಸರಕಾರ ಇದನ್ನು ಅಲ್ಲಗಳೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರ ಇನಾಂ ದತ್ತಾತ್ರೆಯ ಪೀಠದಲ್ಲಿ 2017ರಲ್ಲಿ ದತ್ತಜಯಂತಿಯಂದು ನಡೆದಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತೆ ತನಿಖೆಗೆ ಆದೇಶಿಸಿದೆ ಎಂದು ಬಿಜೆಪಿ ಹೇಳಿದೆ.

7 ವರ್ಷಗಳ ಬಳಿಕ ಕೇಸ್ ರೀ ಓಪನ್ ಮಾಡಿರುವ ಸರ್ಕಾರ 14 ಜನರ ವಿರುದ್ಧ ತನಿಖೆಗೆ ಆದೇಶ ನೀಡಿದೆ. 2017ರಲ್ಲಿ ಬಾಬಾಬುಡನ್ ಗಿರಿ ದರ್ಗಾದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಸ್ ಮುಚ್ಚಿ ಹಾಕಲಾಗಿತ್ತು. ಇದೀಗ ಅದೇ ಕೇಸ್ ಮರುಜೀವ ಪಡೆದಿದೆ.

ತುಡಕೂರು ಮಂಜು, ಶಿವರಾಜ್, ಸುಂದರ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್ ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಜನರ ವಿರುದ್ಧ ಮತ್ತೆ ವಿಚಾರಣೆ ನಡೆಸಲು ಸರ್ಕಾರ ಸೂಚಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸರಕಾರ ಸ್ಪಷ್ಟನೆ ನೀಡಿದೆ.

ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿ ಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು ಇದು ಅಪ್ಪಟ ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಈ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ.

ಇದಿಷ್ಟೂ ಕೂಡ ಯಾವುದೇ ಒಂದು ಪ್ರಕರಣದಲ್ಲಿ ಸಹನವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ.

ಆದ್ದರಿಂದ ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button