*24 ಹಳ್ಳಿಗಳ ರೈತರ ಅಸ್ತಿತ್ವದ ಹೋರಾಟಕ್ಕೆ 3ನೇ ದಿನ: ನ್ಯಾಯಕ್ಕಾಗಿ ರಾತ್ರಿಯಿಡಿ ಕಚೇರಿಯಲ್ಲಿ ವಾಸ್ತವ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಡ್ಯಾಮ್ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮಾಸ್ತಹೊಳಿ ಸೇರಿದಂತೆ ಸುತ್ತಮುತ್ತಲಿನ 24 ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು 3ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನುವರೆಗೆ ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತ ಮುಖಂಡ ಬಾಳೇಶ ಮಾವನೂರೆ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿಯಲ್ಲಿಂದು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಬಾಳೇಶ ಮಾವನೂರೆ, ನಾವು ಕಳೆದ ಐದಾರೂ ವರ್ಷಗಳಲ್ಲಿ ಸುಮಾರು ಹತ್ತರಿಂದ ಹನ್ನೊಂದು ಬಾರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿ ಎದುರು ಧರಣಿ ನಡೆಸಿದ್ದೇವೆ. ಮಹಿಳೆಯರ ಸಮೇತ ಧರಣಿ ನಡೆಸುತ್ತಿರುವುದು ಇದು ಎರಡನೇ ಬಾರಿ, ಆದರೆ ನಮ್ಮ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ ದೂರಿದರು.
ಅಧಿಕಾರಿಗಳ ಸುಳ್ಳು ದಾಖಲೆ ಸೃಷ್ಟಿ ಹಾಗೂ ಸಚಿವರ ಆದೇಶ ಉಲ್ಲಂಘನೆ: ನಮ್ಮ ಕ್ಷೇತ್ರದ ಶಾಸಕರೂ ಹಾಗೂ ಸಚಿವರೂ ಆದ ಸತೀಶ್ ಜಾರಕಿಹೊಳಿ ಅವರಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬಂದ ತಕ್ಷಣ, ದಾಖಲೆಗಳನ್ನು ತಿದ್ದುಪಡಿ ಮಾಡಿ ಸರಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಸಚಿವರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಮಾವನೂರೆ ದೂರಿದರು.
ಸಚಿವರ ಸೂಚನೆಯ ನಂತರವೂ ಬರೋಬ್ಬರಿ ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಮತ್ತೆ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನೇ ಸೃಷ್ಟಿಸಿ ಕಳುಹಿಸುವ ಮೂಲಕ ರೈತರಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಬಗೆದಿದ್ದಾರೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ನಡೆದ ಸಭೆಯಲ್ಲಿ, ತಮ್ಮ ಬಳಿ ಸಂತ್ರಸ್ತ ರೈತರ ಯಾವುದೇ ಮೂಲ ದಾಖಲೆಗಳಿಲ್ಲ ಎಂಬುದನ್ನು ನೀರಾವರಿ ನಿಗಮದ ಅಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇಷ್ಟು ದೊಡ್ಡ ಯೋಜನೆಯಲ್ಲಿ ರೈತರ ಮೂಲ ದಾಖಲೆಗಳನ್ನೇ ಕಳೆದುಕೊಂಡಿರುವುದು ಇವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದರು.
ಅಧಿಕಾರಿಗಳ ಕಾಲಾವಕಾಶಕ್ಕೆ ರೈತರ ಧಿಕ್ಕಾರ:
ಮಾಡಿದ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರಿಗಳು ಈಗ ಮತ್ತೆ ಎರಡು ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಆದರೆ ಇವರ ಯಾವುದೇ ನಾಟಕಗಳನ್ನು ನಾವು ಇನ್ನು ಮುಂದೆ ಒಪ್ಪಲು ಸಿದ್ಧರಿಲ್ಲ. ಕಳೆದ 50 ವರ್ಷಗಳಿಂದ ನಮಗೆ ಮೋಸ ಮಾಡುತ್ತಾ ಬಂದಿರುವ ಇವರ ಭರವಸೆಗಳ ಮೇಲೆ ನಂಬಿಕೆ ಹೊರಟುಹೋಗಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಸಂಪೂರ್ಣವಾಗಿ ಈಡೇರುವವರೆಗೂ ನಾನು ಮತ್ತು ನಮ್ಮ ರೈತರು ಇಲ್ಲಿಂದ ಒಂದಿಂಚೂ ಕದಲುವುದಿಲ್ಲ ಎಂದು ರೈತ ಮಹಿಳೆಯರು ಎಚ್ಚರಿಸಿದ್ದಾರೆ.
ಬಿಡದಿ ಮಾದರಿಯಲ್ಲೇ ನಮಗೂ ಪರಿಹಾರ ನೀಡಲಿ: ಹಿಡಕಲ್ ಡ್ಯಾಮ್ ಯೋಜನೆಗಾಗಿ ನಮ್ಮ ಪೂರ್ವಜರು ಜಮೀನು ಕೊಟ್ಟು 50 ವರ್ಷಗಳೇ ಕಳೆದಿವೆ. ಅಂದಿನಿಂದ ಇಂದಿನವರೆಗೆ ಸರ್ಕಾರ ನಮಗೆ ಬಿಡಿಗಾಸು ನೀಡಿ ಸತಾಯಿಸುತ್ತಿದೆ. ಬಿಡದಿಯಲ್ಲಿ ಒಂದು ಎಕರೆ ಜಮೀನಿಗೆ ಎರಡೂವರೆ ಕೋಟಿ ರೂಪಾಯಿ ನೀಡಿದರೂ ಅಲ್ಲಿನ ಜನ ಬಿಡುತ್ತಿಲ್ಲ. ಸರ್ಕಾರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಎಲ್ಲ ರೈತರೂ ಒಂದೇ. ಬೆಂಗಳೂರು ಭಾಗದ ರೈತರಿಗೆ ಒಂದು ನ್ಯಾಯ, ಉತ್ತರ ಕರ್ನಾಟಕದ ರೈತರಿಗೆ ಮತ್ತೊಂದು ನ್ಯಾಯವೇ? ಎಂದು ಪ್ರಶ್ನಿಸಿದ ಅವರು, ಬಿಡದಿಯಲ್ಲಿ ನೀಡುತ್ತಿರುವ ಮಾದರಿಯಲ್ಲೇ ನಮಗೂ ಪ್ರತಿ ಎಕರೆಗೆ ಎರಡೂವರೆ ಕೋಟಿ ರೂಪಾಯಿ ಪರಿಹಾರವನ್ನು ತಕ್ಷಣ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆ ಹತ್ತಿಕ್ಕಿದರೆ ತೀವ್ರ ಹೋರಾಟದ ಎಚ್ಚರಿಕೆ
ಜಿಲ್ಲಾಧಿಕಾರಿಗಳಾಗಲಿ ಅಥವಾ ಪೊಲೀಸ್ ಕಮಿಷನರ್ ಸಾಹೇಬರಾಗಲಿ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಪೋಲಿಸ್ ಬಲ ಬಳಸಿ ಹತ್ತಿಕ್ಕಲು ಪ್ರಯತ್ನಿಸಿದರೆ ನಾವು ಅದಕ್ಕೆ ಹೆದರುವುದಿಲ್ಲ. ಒಂದು ವೇಳೆ ನಮ್ಮನ್ನು ಇಲ್ಲಿಂದ ಜಬರ್ದಸ್ತ್ ಆಗಿ ಎಬ್ಬಿಸಲು ನೋಡಿದರೆ, ಪ್ರತಿದಿನ ನೂರಕ್ಕೂ ಹೆಚ್ಚು ಹೊಸ ರೈತರು ಈ ಹೋರಾಟಕ್ಕೆ ಬಂದು ಸೇರಿಕೊಳ್ಳಲಿದ್ದಾರೆ. ನಾವು ನಮ್ಮ ಹಕ್ಕುಗಳಿಗಾಗಿ, 50 ವರ್ಷಗಳ ಅನ್ಯಾಯದ ವಿರುದ್ಧ ಜಾನುವಾರುಗಳೊಂದಿಗೆ ಶಾಂತಿಯುತವಾಗಿ ಧರಣಿ ಕುಳಿತಿದ್ದೇವೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ನೀಡುವ ಬದಲು, ಅಧಿಕಾರ ಚಲಾಯಿಸಿ ನಮ್ಮ ಧ್ವನಿಯನ್ನು ಅಡಗಿಸಲು ಮುಂದಾದರೆ ಹೋರಾಟ ಮತ್ತಷ್ಟು ಉಗ್ರರೂಪ ತಾಳಲಿದೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ಅಧಿಕಾರಿಗಳ ಅಮಾನತಿಗೆ ರೈತರ ತೀವ್ರ ಆಗ್ರಹ
ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ತಪ್ಪುಗಳನ್ನು ಒಪ್ಪಿಕೊಂಡರೂ, ರೈತರ ಸಮಸ್ಯೆಗೆ ಸ್ಪಂದಿಸದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಹಾಗೂ ಮುಖ್ಯ ಇಂಜಿನಿಯರ್ ಬಿ.ಆರ್. ರಾಠೋಡ ಅವರನ್ನು ಸರ್ಕಾರ ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಒತ್ತಾಯಿಸಿ ರೈತರು ಘೋಷಣೆಗಳನ್ನು ಕೂಗಿದರು.


