Kannada NewsKarnataka NewsLatest
ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಪೊಲೀಸನಿಂದ ಹಗಲು ದರೋಡೆ; ಹಾಲು ಮಾರಲು ಬಂದವರಿಗೂ ಥಳಿತ
ಪೊಲೀಸ್ ಪೇದೆಯ ದರ್ಪ
ಪ್ರಗತಿವಾಹಿನಿ ಸುದ್ದಿ, ತೆಲಸಂಗ (ಅಥಣಿ): ಖಾಸಗಿ ವ್ಯಕ್ತಿಗಳೊಂದಿಗೆ ಕಾರಲ್ಲಿ ಬಂದು ಬೈಕ್ ಸೀಜ್ ಮಾಡುವ
ಬೆದರಿಕೆಯೊಡ್ಡಿ ರಸೀದಿ ನೀಡದೆ ಹಣ ಸುಲಿಗೆ ಮಾಡುತ್ತಿದ್ದ ಐಗಳಿ ಠಾಣೆಯ ಪೋಲಿಸ್ ಪೇದೆ
ಸಂಗಪ್ಪ ನಾಯಕ ಇವರನ್ನು ಜನ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ
ಬೆಳಗ್ಗೆ ನಡೆದಿದೆ.
ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಎರಡು ದಿನಗಳಿಂದ ಹಣ ವಸೂಲಿಗಿಳಿದಿದ್ದ
ಪೋಲಿಸ್, ಶನಿವಾರ ಬೆಳಗ್ಗೆ ಹಾಲು ಹಾಕಲು ಬಂದಿದ್ದ ರೈತನೋರ್ವನಿಗೆ
ಕೋಲಿನಿಂದ ಥಳಿಸಿದ್ದಾನೆ. ಮೊಣಕೈ ಗಾಯವಾಗಿ ಆಸ್ಪತ್ರೆ ಸೇರುವಂತೆ ಹೊಡೆದಿದ್ದಕ್ಕೆ
ರೊಚ್ಚಿಗೆದ್ದ ಜನ, ಕಾನೂನಿನ ಪಾಠ ಮಾಡುವುದರ ಮೂಲಕ ಪೇದೆ ಸಂಗಪ್ಪನ
ಬೆವರಿಳಿಸಿದ್ದಾರೆ.
ಕೆಎ.32 ಬಿ4987 ಸ್ವಿಫ್ಟ್ ಡಿಜೈರ್ ಕಾರಲ್ಲಿ ಗುಲಬರ್ಗಾ ಮೂಲದ ಸುಧಾಕರ, ಕೋಹಳ್ಳಿಯ ಹಣಮಂತ ಮಾಳಿ ಮತ್ತು ಪೇದೆ ಸಂಗಪ್ಪ ಈ 3 ಜನ ಸೇರಿ ಬೈಕ್‍ಗಳಿಂದ ಹಣ ವಸೂಲಿ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಅನುಮತಿ ಇಲ್ಲದ ಕಾರೊಂದರಲ್ಲಿ ಪೋಲಿಸರೂ ಅಲ್ಲದ ವ್ಯಕ್ತಿಗಳೀರ್ವರು ಪೇದೆ
ಸಂಗಪ್ಪನ ಜತೆಗೆ ಫಿಲ್ಡಿಗಿಳಿದು ಹಣ ಕೇಳುತ್ತಿದ್ದುದು ಗೊತ್ತಾದ ಗ್ರಾಮಸ್ಥರು,
ಈರ್ವರನ್ನು ಹಿಡಿದು ಗೂಸಾ ನೀಡಿದ್ದು, ಹೆಚ್ಚು ಜನ ಸೇರುತ್ತಿದ್ದಂತೆ ಈರ್ವರು
ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದರೆಂದು ಎಂದು ತಿಳಿದು ಬಂದಿದೆ.
ಹೊಲಗಳಿಂದ ಹಾಲಿನ ಡೇರಿಗೆ ಹಾಲು ಕೊಡಲು ಬಂದಿದ್ದ ನಮ್ಮಿಂದ ಶುಕ್ರವಾರ ಬೈಕ್
ಸೀಜ್ ಮಾಡುವುದಾಗಿ ಹೆದರಿಸಿ ರಸೀದಿ ನೀಡದೆ ಹಣ ವಸೂಲಿ ಮಾಡಿದ್ದಾರೆ ಎಂದು ರಮೇಶ
ಸತ್ಯಪ್ಪ ತೇಲಿ, ಸುಭಾಸ್ ಕಬ್ಬೀನ, ಶಿವು ಸಿದರಾಯ ಬಡವಗೋಳ, ಅಪ್ಪಯ್ಯಾ ಮಂಗಿ, ಸಂಗಮೇಶ
ಯಲಡಗಿ ಇವರುಗಳು ಆರೋಪಿಸಿದ್ದಾರೆ.
ತಪ್ಪು ಮಾಡಿದ್ದರೆ ನ್ಯಾಯವಾಗಿ ಕೇಸ್ ಹಾಕಲಿ. ಅದು ಬಿಟ್ಟು ಹತ್ತಾರು
ಬೈಕ್‍ಗಳನ್ನು ಸೀಜ್ ಮಾಡಿ ಜನರನ್ನು ಹೆದರಿಸಿ, ನಮ್ಮ ಬೈಕ್ ಸೀಜ್ ಆಗುತ್ತದೆ ಎಂದು
ಹೆದರಿ ಹಣ ನೀಡುವಂತೆ ವಾತಾವರಣ ಸೃಷ್ಟಿ ಮಾಡಿ ಜನರಿಂದ ಹಣ ಕಿತ್ತುಕೊಂಡ ಪೇದೆಯನ್ನು
ತಕ್ಷಣ ಅಮಾನತ್ತು ಮಾಡಬೇಕು. ಬೆಳಿಗ್ಗೆ ಹಾಲು ಮಾರಾಟಕ್ಕೆ ಸರಕಾರ ಅವಕಾಶ
ನೀಡಿದ್ದರೂ ವಿನಾಕಾರಣ ರೈತನೋರ್ವನಿಗೆ ಕೈ ಮುರಿಯುವಂತೆ ಥಳಿಸಿದ್ದ್ಯಾಕೆ? ಕೊರೊನಾ
ಜಾಗೃತಿಗಾಗಿ ಗ್ರಾಮಸ್ಥರೆಲ್ಲ ಸೇರಿ ಎಲ್ಲ ರಸ್ತೆಗೆ ಮುಳ್ಳಿನ ಬೇಲಿ ಹಾಕಿದ್ದೇವೆ.
ಗ್ರಾಮಸ್ಥರೆ ಸ್ವತಃ ಕಾಳಜಿ ವಹಿಸುತ್ತಿರುವಾಗ ಲಾಕ್‍ಡೌನ್ ಸಮಯದಲ್ಲಿ ಬಡ ರೈತರಿಂದ
ರಸೀದಿಯನ್ನೂ ನೀಡದೆ ಹಣ ಕಿತ್ತುಕೊಳ್ಳುವುದ್ಯಾಕೆ ಎಂದು ಗ್ರಾಮದ ಹಿರಿಯರಾದ ಶಿವು
ತೇಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಐಗಳಿ ಪಿಎಸ್‍ಐ ಎಮ್.ಡಿ.ಗೋರಿ, ಪೇದೆಗೆ ಕ್ಲಾಸ್ ತೆಗೆದುಕೊಂಡು ಗ್ರಾಮಸ್ಥರನ್ನು ಶಾಂತಗೊಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ