
ದುರುಪಯೋಗ ಆಗದಿರಲಿ ಪ್ರವಾಹ ಪರಿಹಾರ; ಇಂದು ಡಿಸಿ ಮಾರ್ಗಸೂಚಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕಳೆದ 2 ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ರಾಜ್ಯ 17 ಜಿಲ್ಲೆಗಳು ತತ್ತರಿಸಿಹೋಗಿವೆ. ಈ ಜಿಲ್ಲೆಗಳ ಜನಜೀವನ ಅಸ್ತವ್ಯಸ್ತವಾಗಿದೆ. ಸರಕಾರ ಈಗಾಗಲೆ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮಾವಳಿ ಪ್ರಕಾರ ಪ್ರವಾಹ ಪರಿಹಾರ ಕಾರ್ಯವೂ ಆರಂಭವಾಗಲಿದೆ.
ಪ್ರವಾಹದಿಂದಾಗಿ ಜನರ ಸಂಕಷ್ಟ ನೋಡಿ ನೂರಾರು ಸಂಘಟನೆಗಳು, ಸಾರ್ವಜನಿಕರು ನೆರವಿಗೆ ಮುಂದಾಗಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಹಗಲಿರುಳೂ ಸಂತ್ರಸ್ತರ ಕಣ್ಣೀರು ಒರೆಸಲು ಪ್ರಯತ್ನಿಸುತ್ತಿದ್ದಾರೆ. ಬಟ್ಟೆ, ಆಹಾರಧಾನ್ಯ, ಔಷಧ, ಕುಡಿಯುವ ನೀರು ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂಬಂಧ ಅನೇಕ ಸಂಘಟನೆಗಳು ತಮ್ಮ ಮೂಲಕ ನೆರವು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿವೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ನೆರವಾಗುವುದು ಅನಿವಾರ್ಯ. ಇದಕ್ಕೆ ಸಾಮೂಹಿಕವಾಗಿ ಕೈ ಜೋಡಿಸಿದರೆ ಮಾತ್ರ ಬಿದ್ದು ಹೋಗಿರುವ ಬದುಕನ್ನು ಕಟ್ಟಿಕೊಡಲು ಸಾಧ್ಯ. ಹಾಗಾಗಿ ಜನರ ನೆರವಿಗೆ ಸಂಘ-ಸಂಸ್ಥೆಗಳು ಮುಂದೆಬರುತ್ತಿರುವುದು ಶ್ಲಾಘನೀಯವಾಗಿದೆ.
ದುರುಪಯೋಗವಾಗದಿರಲಿ
ಆದರೆ ಇಂತಹ ಪರಿಸ್ಥಿತಿಯಲ್ಲಿ ಹಣ, ಸಾಮಗ್ರಿ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಸಂಗ್ರಹಿಸಿದ ಹಣ ಅಷ್ಟೇ ಪ್ರಾಮಾಣಿಕವಾಗಿ ಸಂತ್ರಸ್ತರನ್ನು ತಲುಪಬೇಕು. ಜನರು ಪ್ರಾಮಾಣಿಕವಾಗಿ ತಾವು ಕಷ್ಟಪಟ್ಟು ದುಡಿದ ಹಣವನ್ನು ಇಂತಹ ಸಂತ್ರಸ್ತರಿಗಾಗಿ ಕೊಡಲು ಮುಂದಾಗುತ್ತಾರೆ. ಇರುವುದರಲ್ಲೇ ಸ್ವಲ್ಪವನ್ನು ದೇಣಿಗೆಯಾಗಿ ನೀಡುತ್ತಾರೆ. ಅಂತಹ ಹಣ ನಿಜವಾಗಿ ಸದ್ಭಳಕೆಯಾಗಬೇಕು.
ಅವೇಕ ಸಂಘಟನೆಗಳು ಹಣವನ್ನು ಸಂಗ್ರಹಿಸುತ್ತಿಲ್ಲ. ನಾವು ಹಣ ಪಡೆಯುವುದಿಲ್ಲ. ಸಂತ್ರಸ್ತರಿಗೆ ಬೇಕಾದ ಸಾಮಗ್ರಿಯನ್ನು ಖರೀದಿಸಿ ಕೊಡಿ. ನಾವು ಅವರಿಗೆ ತಲುಪಿಸುತ್ತೇವೆ ಎಂದು ಪ್ರಕಟಣೆ ನೀಡಿವೆ. ಹಣ ಪಡೆದರೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರೂ ಹಣ ಅಥವಾ ಸಾಮಗ್ರಿ ನೀಡುವಾಗ ಸಂಗ್ರಹಿಸುವ ಸಂಘಸಂಸ್ಥೆಗಳು ಇತಿಹಾಸ, ಪ್ರಾಮಾಣಿಕತೆ ನೋಡಿ ನೀಡಬೇಕು.
ಜನರು ನೇರವಾಗಿ ಅಥವಾ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಲು ಅವಕಾಶವಿರುತ್ತದೆ. ಚೆಕ್ ಅಥವಾ ಡಿಡಿ ತೆಗೆದು ಕೊಡಬಹುದು.
ಈ ಕುರಿತು ಪ್ರಗತಿವಾಹಿನಿ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಅವರನ್ನು ಸಂಪರ್ಕಿಸಿದಾಗ, ಜನರು ಸಂಗ್ರಹಿಸುವ ಸಂಘಸಂಸ್ಥೆಗಳನ್ನು ನೋಡಿ ದೇಣಿಗೆ ನೀಡಬೇಕು. ಜಿಲ್ಲಾಡಳಿತಕ್ಕೆ ನೀಡಿದರೆ ನಾವು ಈಗಾಗಲೆ ರಚಿಸಿರುವ ಪ್ರವಾಹ ಪರಿಹಾರ ಸಮಿತಿಯ ಮೂಲಕ ಅದನ್ನು ಜನರಿಗೆ ತಲುಪಿಸುತ್ತೇವೆ ಎಂದರು.
ಪ್ರವಾಹ ಪರಿಹಾರ ನಿಧಿ ಸಂಗ್ರಹ ಸಂಬಂಧ ಇಂದೇ ಒಂದು ಪ್ರಕಟಣೆ ಹೊರಡಿಸುತ್ತೇನೆ. ಪ್ರವಾಹ ಪರಿಹಾರ ನಿಧಿಗಳನ್ನು ಸಂಗ್ರಹಿಸಲು ಇರುವ ನಿಯಮಾವಳಿಗಳೇನು? ಯಾರು ಸಂಗ್ರಹಿಸಬಹುದು? ಅದರ ದುರ್ಬಳಕೆಯಾಗದಂತೆ ತಡೆಯುವುದು ಹೇಗೆ ಎನ್ನುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತೇನೆ.
-ಎಸ್.ಬಿ.ಬೊಮ್ಮನಳ್ಳಿ, ಬೆಳಗಾವಿ ಜಿಲ್ಲಾಧಿಕಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ