ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬೆಳಗಾವಿ ನಗರ ಪೊಲೀಸ್ ಇಲಾಖೆಯ ಡಿಸಿಪಿ ನೇತೃತ್ವದಲ್ಲಿ ಶನಿವಾರ ನಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಂಡ ನಡೆಸುತ್ತಿರುವ 13ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನತೆಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ಸಾರ್ವಜನಿಕರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಂಡರು. ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಪೊಲೀಸ್ ಇಲಾಖೆಯಿಂದ ಕೈಗೊಂಡ ಪ್ರಥಮ ಫೋನ್ ಇನ್ ಕಾರ್ಯಕ್ರಮ ಇದಾಗಿತ್ತು.
ನಗರದ ವ್ಯಕ್ತಿಯೊಬ್ಬರು ಕರೆ ಮಾಡಿ ಮಹಾನಗರ ಪಾಲಿಕೆಯ ಸಮುದಾಯ ಭವನ ನಿರ್ಮಾಣದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಈ ಕುರಿತು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಬಳಿ ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಥಣಿಯ ಕೆಲ ಕಡೆಗಳಲ್ಲಿ ನಾಲ್ಕು ಜನರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರ ಬಳಿ ಅಥಣಿ ತಾಲೂಕಿನ ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದ ಪೊಲೀಸ್ ಠಾಣೆಗೆ ತಿಳಿಸಿ ತಕ್ಷಣ ಅಕ್ರಮಕ್ಕೆ ತಡೆ ಹಾಕಲಾಗುವುದು ಎಂದರು.
ಮೂಡಲಗಿ ತಾಲೂಕಿನ ವ್ಯಕ್ತಿಯೊಬ್ಬರು ತಮ್ಮ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಬಳಿ ದೂರಿದರು. ಇದಕ್ಕೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ, ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಳ್ಳುವ ಮೂಲಕ ಸ್ವಯಂ ಸಮಸ್ಯೆ ಪರಿಹರಿಸಿಕೊಳ್ಳಬಹುದೆಂದು ಸಲಹೆ ನೀಡಿದರು.
ಅಥಣಿ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಶಾಲೆಗೆ ಸಂಪರ್ಕಿಸುವ ತೋಟದ ರಸ್ತೆ ಹೊಸ ನಕ್ಷೆಯಲ್ಲಿ ಮಾಯವಾಗಿದೆ. ಜಮೀನು ಮಾಲೀಕ ಈ ರಸ್ತೆಯನ್ನು ಬಂದ್ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ನಕ್ಷೆಯಲ್ಲಿ ರಸ್ತೆ ಇದೆಯೋ ಇಲ್ಲವೋ ಎಂಬುದನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿರೇಬಾಗೇವಾಡಿ ಗ್ರಾಮದ ವ್ಯಕ್ತಿಯೊಬ್ಬರು ಕರೆ ಮಾಡಿ ಮೊಬೈಲ್ ಕಳ್ಳತವಾಗಿದೆ. ಇಲ್ಲಿಯವರೆಗೂ ಯಾರೊಬ್ಬರು ಸ್ಪಂದಿಸಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶೇಖರ ಎಸ್.ಟಿ. ಠಾಣೆಯಿಂದ ರಸೀದಿ ನೀಡಿದ್ದರೆ ಪೊಲೀಸ್ ಠಾಣೆಗೆ ತಿಳಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿಯಾದರೂ ಬೆಳಗಾವಿ ಟಿಳಕವಾಡಿ ಕಲಾಮಂದಿರದಲ್ಲಿ ತಡೆಯಾಜ್ಞೆ ಇದ್ದರೂ ಕಾಮಗಾರಿ ಪ್ರಾರಂಭ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಗಮನ ಸೆಳೆದರು. ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದ ಬಳಿಕ ಅದನ್ನು ಪಾಲಿಸಲು ಸ್ಮಾರ್ಟ್ ಸಿಟಿ ಅವರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಧಾರವಾಡ ಜಿಲ್ಲೆಯ ನ್ಯಾಯವಾದಿಯೊಬ್ಬರು ಕರೆ ಮಾಡಿ ಅಥಣಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ಸೇರಿದಂತೆ ಎರಡೂ ಸೊಸೈಟಿಯಿಂದ ಠೇವಣಿ ಇಟ್ಟ ಹಣ ಮರಳಿ ಕೊಡುತ್ತಿಲ್ಲ. ಹಣ ಮರಳಿ ಕೊಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸವದತ್ತಿ ತಾಲೂಕಿನ ಗುತ್ತಿಗೆಯಾದಾರದ ಮೇಲೆ 2021 ಹಾಗೂ 2022 ರಲ್ಲಿ ಪೌರಕಾರ್ಮಿಕರ ನಿಯುಕ್ತಿ ಮಾಡಿಕೊಳ್ಳಲಾಗಿದೆ. ಅವರ ಪಿಎಫ್ ಐ ಇನ್ನೂ ನೀಡಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ಸಂಬಂಧಿಸಿದವರಿಗೆ ತಿಳಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.
ಬೆಳಗಾವಿ ತಾಲೂಕಿನ ನಾವಗೆಯಲ್ಲಿ ದಸರಾ ದಿನ ತಮ್ಮ ಮಗಳ ಕೊಲೆಯಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಈವರೆಗೆ ತನಿಖೆ ಮಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಮಾಡಿದ ಕರೆಗೆ ಸ್ಪಂದಿಸಿದ ಡಿಸಿಪಿ ಶೇಖರ ಎಸ್. ಟಿ., ಮಾರಿಹಾಳ ಸಿಪಿಐ ಹಾಗೂ ಎಸಿಪಿಗೆ ತಿಳಿಸಿ ಸೂಕ್ತ ತನಿಖೆ ನಡೆಸಲು ಸೂಚಿಸಲಾಗುವುದು ಎಂದರು.
ಅಥಣಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿನಾಕಾರಣ ಹೆಚ್ಚಿನ ಡೋನೇಷನ್ ಪಡೆಯುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೋಷಕರು ದೂರು ನೀಡಿದರೆ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವುದೇ ಮುಲ್ಲಾಜಿಲ್ಲದೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿನ ಸಂಚಾರ ಸಮಸ್ಯೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ, ಕೌಟುಂಬಿಕ ಕಲಹ, ತಾಲೂಕಿನಲ್ಲಿ ಸ್ಮಶಾನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಹಲವರು ದೂರಿ ಪರಿಹಾರ ಕಂಡುಕೊಂಡರು.
ರಾಯಬಾಗ ತಾಲೂಕಿನ ಮೊರಬ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ, ಯೂಟ್ಯೂಬ್ ಚಾನಲ್ ನ ಹೆಸರು ಹೇಳಿಕೊಂಡು ಜನರಿಗೆ ಕಿರುಕುಳ ನೀಡುತ್ತಿದ್ದು, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ವಿಷಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಎಸ್ಪಿ ಸಂಜೀವ ಪಾಟೀಲ, ಅಂಥವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ನಿರೀಕ್ಷಕರಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ವಿಠ್ಠಲ ಮಾದರ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಅಧಿಕಾರಿಗಳು, ನಗರ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
13ನೇ ಫೋನ್ ಇನ್ ಕಾರ್ಯಕ್ರಮದಲ್ಲಿ 63 ಕರೆಗಳು ಬಂದಿದ್ದು ಹೆಚ್ಚಿನವು ಅಬಕಾರಿ ಇಲಾಖೆಯ ಸಮಸ್ಯೆಗಳೇ ಆಗಿವೆ. ಮುಂದಿನ ಕಾರ್ಯಕ್ರಮದಲ್ಲಿ ಅಬಕಾರಿ ಅಧಿಕಾರಿಗಳನ್ನು ಕರೆಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
https://pragati.taskdun.com/9-months-babydeathmentho-plus-boxbellary/
https://pragati.taskdun.com/young-woman-cheated-by-someone-she-met-on-a-dating-app-the-victim-stepped-into-the-police-station/
https://pragati.taskdun.com/biperjoy-cyclonekarnatakakeralagujarathalert/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ