ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಹಣಿ ದೋಷ, ಪರಿಹಾರ ವಿಳಂಬ, ಮನೆ ಸಮೀಕ್ಷೆ ದೋಷ, ಎಬಿ-ಆರ್.ಕೆ. ರೆಫರಲ್ ನೀಡಲು ಸತಾಯಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಅಧಿಕಾರಿಗಳನ್ನು ಕರೆಸಿ ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ನೇ 17) ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ರಾಯಬಾಗ ತಾಲ್ಲೂಕಿನ ವ್ಯಕ್ತಿಯೊಬ್ಬರು ತಮ್ಮ ಜಮೀನು ಸರ್ವೆ ಮಾಡಿ ನಮಗೆ ಗೊತ್ತಿಲ್ಲದೇ ಹೈಕೋರ್ಟಿನಲ್ಲಿ ಪ್ರಕರಣ ಇರುವಾಗಲೇ ಹೆಸರು ಕಡಿಮೆ ಮಾಡಲಾಗಿದೆ ಎಂದು ಅಹವಾಲು ಹೇಳಿಕೊಂಡರು.
ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಟ್ರಿಬ್ಯುನಲ್ ನಲ್ಲಿ ಪ್ರಕರಣ ನಡೆಯುತ್ತಿದೆ. ಟ್ರಿಬ್ಯುನಲ್ ಅಂತಿಮ ಆದೇಶ ಆದರೆ ನಿಮ್ಮ ಪರವಾಗಿ ಜಮೀನು ನೋಂದಣಿ ಮಾಡಿ ಉತಾರ ನೀಡಲಾಗುವುದು. ಎಂದು ಡಿಸಿ ಭರವಸೆ ನೀಡಿದರು.
ಕನ್ನಡ ಶಾಲೆಗೆ ಶಿಕ್ಷಕರ ನಿಯೋಜನೆಗೆ ಕ್ರಮ;
ಚಿಕ್ಕೋಡಿ ತಾಲ್ಲೂಕಿನಲ್ಲಿ ಶಿರಗಾಂವ ಗ್ರಾಮದಲ್ಲಿ ಕನ್ನಡ ಶಾಲೆಯಲ್ಲಿ 500 ಕ್ಕೂ ಅಧಿಕ ಮಕ್ಕಳಿದ್ದಾರೆ. ಐದು ಜನ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆ ಇರುವುದರಿಂದ ಒಂದೇ ಕೊಠಡಿಯಲ್ಲಿ ಮೂರ್ನಾಲ್ಕು ತರಗತಿಯ ಮಕ್ಕಳನ್ನು ಓದಿಸುತ್ತಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಸೆಳೆದರು.
ಇದಕ್ಕೆ ಸ್ಪಂದಿಸಿದ ಅವರು, ಕೂಡಲೇ ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ವ್ಯಕ್ತಿಯೊಬ್ಬರ ಆಸ್ತಿ ಉತಾರದಲ್ಲಿ ಸರ್ವೆ ನಂಬರ್ ತಪ್ಪಾಗಿ ನಮೂದಾಗಿರುವುದು ಪರಿಶೀಲಿಸಿದ ಅವರು, ಆ ವ್ಯಕ್ತಿಯಿಂದ ಸೂಕ್ತ ಅರ್ಜಿ ಪಡೆದುಕೊಂಡು ಪಹಣಿ ತಿದ್ದುಪಡಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕಾಗಿ ಈಗಾಗಲೇ ಅರ್ಜಿ ನೀಡಿದಾಗ್ಯೂ ವಿಳಂಬ ಮಾಡಿರುವ ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮನೆಹಾನಿ; ಹೆಸರು ಸೇರ್ಪಡೆಯ ಭರವಸೆ:
ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ಇಂಗಳಿ ಗ್ರಾಮದ ವಿವಿಧ ಕುಟುಂಬಗಳ ಅಹವಾಲು ಆಲಿಸಿದ ಡಿಸಿ ಅವರು ಮೊದಲ ಸಮೀಕ್ಷೆಯಲ್ಲಿ ಹೆಸರಿದ್ದು ನಂತರ ಹೆಸರು ಇಲ್ಲದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
2019 ರಲ್ಲಿ ಐವತ್ತು ಸಾವಿರ ಪರಿಹಾರ ಪಡೆದುಕೊಂಡು ಪುನಃ 2021 ರಲ್ಲಿ ಸಂಪೂರ್ಣ ಮನೆ ಕಳೆದುಕೊಂಡು ಐದು ಲಕ್ಷ ರೂಪಾಯಿ ಪರಿಹಾರ ಕೇಳುತ್ತಿರುವ ಕೆಲ ಕುಟುಂಬಗಳ ಅಹವಾಲು ಆಲಿಸಿದರು.
ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕೂಡ ಸ್ಥಳಕ್ಕೆ ಕರೆಸಿದ ಜಿಲ್ಲಾಧಿಕಾರಿ, ಜಂಟಿ ಸಮೀಕ್ಷೆ ನಡೆಸಿದ ಬಳಿಕವೂ ಕೆಲವು ಕುಟುಂಬಗಳ ಸೇರ್ಪಡೆ ಯಾಕಾಗಿಲ್ಲ ಎಂದು ಪ್ರಶ್ನಿಸಿದರು.
ಮೊದಲ ಬಾರಿ ಪರಿಹಾರ ಪಡೆದಾಗ ಹಾಗೂ ನಂತರದ ಪ್ರವಾಹ ಸಂದರ್ಭದಲ್ಲಿ ಬೇರೆ ಹೆಸರಿನಲ್ಲಿ ಅರ್ಜಿ ನೀಡಿದ್ದರಿಂದ ತಿರಸ್ಕರಿಸಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಸ್ಪಷ್ಟಪಡಿಸಿದರು.
ಲಾಗಿನ್ ಗೆ ಅವಕಾಶ ಕಲ್ಪಿಸಿದಾಗ ಇಂಗಳಿ ಗ್ರಾಮದ ಈ ಕುಟುಂಬಗಳ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, ಲಾಗಿನ್ ಆರಂಭಗೊಂಡ ಮೊದಲ ದಿನವೇ ಹೆಸರು ಸೇರ್ಪಡೆಗೊಳಿಸಬೇಕು ಎಂದು ಅಧಿಕಾರಿಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೆಲ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಸ್ವತಃ ಬರೆದು ಇಂದೇ ಕೆಲಸ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಒನ್ ಕೇಂದ್ರ ಮಂಜೂರಾತಿ ಮರುಪರಿಶೀಲನೆಗೆ ಸೂಚನೆ:
ನಾಗರಾಳ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಮಂಜೂರು ಮಾಡುವಾಗ ಸ್ಥಳೀಯ ಅಭ್ಯರ್ಥಿ ಬೀರಪ್ಪ ಹೆಗ್ಗಣ್ಣವರ ಅವರ ಆಯ್ಕೆಯಾಗದಿರುವ ಕುರಿತು ದೂರು ಆಲಿಸಿದರು.
ಈ ಬಗ್ಗೆ ಆಯ್ಕೆ ಪ್ರಕ್ರಿಯೆ ಕುರಿತು ಆಕ್ಷೇಪಣೆ ಅರ್ಜಿ ಪಡೆದುಕೊಂಡು ಮರು ಪರಿಶೀಲನೆ ನಡೆಸುವಂತೆ ತಿಳಿಸಿದರು.
ಸ್ಥಳದಲ್ಲೇ ವೈದ್ಯರಿಂದ ಸಹಿ ಹಾಕಿಸಿದ ಡಿಸಿ:
ಒಂದು ವಾರದ ಮಗುವಿಗೆ ಎಬಿ-ಆರ್ ಕೆ. ಯೋಜನೆಯಡಿ ರೆಫರಲ್ ನೀಡಲು ವಿನಾಕಾರಣ ಸತಾಯಿಸಲಾಗುತ್ತಿದೆ ಎಂಬ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯ ಸಿಎಂಓ ಅವರಿಗೆ ದೂರವಾಣಿ ಕರೆ ಮಾಡಿ ಕರೆಸಿದರು.
ಒಮ್ಮೆ ಡಿಸ್ ಚಾರ್ಜ್ ಆಗಿರುವ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಬೇಕಾದರೆ ಪತ್ರ ನೀಡಬೇಕಾಗುತ್ತದೆ. ಅದನ್ನು ಆಧರಿಸಿ ರೆಫರಲ್ ನೀಡಲಾಗುತ್ತದೆ. ಆದರೆ ಕುಟುಂಬದವರು ಎಂಟು ದಿನದ ಮಗುವನ್ನು ಚಿಕಿತ್ಸೆಗಡ ಕರೆದೊಯ್ಯುವ ಬಗ್ಗೆ ಪತ್ರ ನೀಡದಿರುವುದರಿಂದ ರೆಫರಲ್ ನೀಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿಯೇ ವೈದ್ಯಾಧಿಕಾರಿಯನ್ನು ಕರೆಸಿ ರೆಫರಲ್ ದಾಖಲೆಗಳಿಗೆ ಸಹಿ ಮಾಡಿಸಿದರು.
ಒಂದು ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಮಗುವಿನ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರೆ ಅವರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೇ ಈ ಕುರಿತು ಪರಿಶೀಲನೆ ನಡೆಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಮೀರಾಪುರ ಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸುವ ಕುರಿತು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಸದರಿ ಗ್ರಾಮ ಈಗಾಗಲೇ ಕಂದಾಯ ಗ್ರಾಮ ಎಂದು ಘೋಷಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.
ಮಾಂಜರಿ ಗ್ರಾಮದಲ್ಲಿ ಪ್ರವಾಹ ಸಂದರ್ಭದಲ್ಲಿ ಸಂಪೂರ್ಣ ಕುಸಿದ ಕೆಲ ಮನೆಗಳನ್ನು ಮೊದಲ ಸಮೀಕ್ಷೆಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿತ್ತು. ಆದರೆ ಎರಡನೇ ಸಮೀಕ್ಷೆಯಲ್ಲಿ ಹೆಸರು ಕೈಬಿಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರು ನೀಡಿದರು.
ಮತ್ತೇ ಸೇರ್ಪಡೆಗೆ ಅವಕಾಶ ಕಲ್ಪಿಸಿದಾಗ ಪುನಃ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
42 ಕುಟುಂಬಗಳಿಗೆ ತಕ್ಷಣವೇ ಹತ್ತು ಸಾವಿರ ಜಮಾ:
ಮಾಂಜರಿಯಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆಗೆ ನೀರು ನುಗ್ಗಿದ ಪ್ರತಿ ಮನೆಗೆ ಹತ್ತು ಸಾವಿರ ನೀಡಲಾಗಿತ್ತು. ಆದರೆ ಬ್ಯಾಂಕ್ ಐಎಫ್ಎಸ್ಸಿ ಬದಲಾವಣೆಯ ತಾಂತ್ರಿಕ ತೊಂದರೆ ಕಾರಣಕ್ಕೆ 41 ಕುಟುಂಬಗಳಿಗೆ ಹಣ ಜಮಾ ಆಗದಿರುವ ಬಗ್ಗೆ ಗ್ರಾಮಸ್ಥರು ದೂರಿದರು.
ಈ ಬಗ್ಗೆ ಪರಿಶೀಲಿಸಿದ ಡಿಸಿ ಅವರು, ಬ್ಯಾಂಕ್ ಎಫ್.ಎಸ್.ಸಿ. ಕೋಡ್ ಬದಲಾಯಿಸಿ ಕೂಡಲೇ ಹಣ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಇದಕ್ಕೂ ಮುಂಚೆ ಉಪ ನೋಂದಣಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕಾರ್ಯವೈಖರಿಯನ್ನು ಪರಿಶೀಲಿಸಿದರು.
ವಕೀಲೆ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ