
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಅ.19ರಂದು ಚುನಾವಣೆ ನಡೆಯಲಿದ್ದು, ಇಂದು ಅನೇಕ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರು.
ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಜಾರಕಿಹೊಳಿ ಪೆನಲ್‌ನ ಏಳು ಜನ ಅಭ್ಯರ್ಥಿಗಳು ಸಾಮೂಹಿಕ ನಾಮಪತ್ರ ಸಲ್ಲಿಸಿದರು.
ನಿಪ್ಪಾಣಿ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಅಣ್ಣಾಸಾಬ್ ಜೊಲ್ಲೆ, ಬೈಲಹೊಂಗಲ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಮಹಾಂತೇಶ ದೊಡ್ಡಗೌಡರ್, ಖಾನಾಪುರ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಅರವಿಂದ ಪಾಟೀಲ್, ಸವದತ್ತಿ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ವಿರೂಪಾಕ್ಷ ಮಾಮನಿ, ರಾಯಭಾಗ ತಾಲೂಕಿನಿಂದ ಅಪ್ಪಾಸಾಹೇಬ್ ಕುಲಗುಡೆ, ಯರಗಟ್ಟಿ ತಾಲೂಕಿನಿಂದ ಶಾಸಕ ವಿಶ್ವಾಸ ವೈದ್ಯ ಹಾಗೂ ಕಿತ್ತೂರ ತಾಲೂಕಿನಿಂದ ವಿಕ್ರಮ ಇನಾಮದಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ರಾಮದುರ್ಗ ಕ್ಷೇತ್ರದಿಂದ ಮಲ್ಲಣ್ಣ ಯಾದವಾಡ ಕಣಕ್ಕೆ
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ರಾಮದುರ್ಗ ಕ್ಷೇತ್ರದಿಂದ ಮಲ್ಲಣ್ಣ ಯಾದವಾಡ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ಯಾಂಕಿನ ಅಭಿವೃದ್ಧಿ ಉದ್ದೇಶವನ್ನು ಇಟ್ಟಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಯಾರು ಅಭ್ಯರ್ಥಿ ಎಂಬುದನ್ನು ನಾವು ಹೇಳಲ್ಲ. ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರನ್ನು ಭೇಟಿಯಾಗಿದ್ದು, ಎಲ್ಲರ ವಿಶ್ವಾಸ ನನ್ನ ಮೇಲಿದೆ. ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ನಾನು ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
ನಾಮಪತ್ರ ಸಲ್ಲಿಸಿದ ರಾಮದುರ್ಗ ಶಾಸಕ ಅಶೋಕ್ ಪಟ್ಟಣ
ರಾಮದುರ್ಗ ತಾಲೂಕಿನಿಂದ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಶಾಸಕ ಅಶೋಕ ಪಟ್ಟಣ ನಾಮಪತ್ರ ಸಲ್ಲಿಸಿದರು. ನಮ್ಮದು ಯಾವುದೆ ಪೆನಲ್ ಇಲ್ಲ. ನಮ್ಮದು ಸಿದ್ದರಾಮಯ್ಯ ಪೆನಲ್, ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದರು
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಲೂಕಿನ ರೈತರ ಒತ್ತಾಯದ ಮೇರೆಗೆ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ತಮ್ಮ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟ ಬಗ್ಗೆ ಮಾಹಿತಿಯಿಲ್ಲ. ನಮಗೆ ಯಾವ ಪೆನಲ್’ ಇಲ್ಲ. ನಮ್ಮದು ಸಿದ್ದರಾಮಯ್ಯ ಪೆನಲ್ ಎಂದರು.
ನಮಗೆ ಯಾವುದೇ ಹೊಂದಾಣಿಕೆ ಪಾಲಿಟಿಕ್ಸ್ ಬಗ್ಗೆ ಗೊತ್ತಿಲ್ಲ. ನಾನು ಸ್ವತಂತ್ರವಾಗಿ ಸಿದ್ಧರಾಮಯ್ಯ ಪೆನಲ್’ನಿಂದ ಸ್ಪರ್ಧಿಸುತ್ತೇವೆ. ತ್ರಿಕೋನವಾದರೂ ಸರಿ, ನೇರವಾಗಿ ಸ್ಪರ್ಧೆಯಾದರೂ ಸರಿ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ. ಅವಿರೋಧ ಆಯ್ಕೆಯಾದರೇ, ನಮ್ಮ ತಾಲೂಕು ಮತ್ತು ಜಿಲ್ಲೆಗೂ ಒಳ್ಳೆಯದು ಎಂದರು.