*ಮೆಡಿಕೇರ್ ಆಸ್ಪತ್ರೆ ಉದ್ಘಾಟನೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: ಮೆಡಿಕೇರ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿರುವುದಕ್ಕೆ ಬಹಳ ಸಂತೋಷವಾಗಿದೆ. ಮೆಡಿಕೇರ್ ಆಸ್ಪತ್ರೆ ದಕ್ಷಿಣ ಭಾರತದಲ್ಲಿ ದೊಡ್ಡ ಬದಲಾವಣೆ ತರುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ ಅವರು ತಿಳಿಸಿದರು.
ಈ ಸಂಸ್ಥೆಯು 24 ಆಸ್ಪತ್ರೆಗಳನ್ನು ಹೊಂದಿದ್ದು 14 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಉದ್ಯೋಗದಾರ ಬಲಿಷ್ಠವಾಗಿದ್ದಷ್ಟು ಉದ್ಯೋಗಿಗಳು ಉತ್ತಮವಾಗಿರುತ್ತಾರೆ. ಮೆಡಿಕೇರ್ ಆಡಳಿತ ಮಂಡಳಿ ಬಲಿಷ್ಠವಾಗಿದ್ದಷ್ಟು ಅವರು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದು. 14 ಸಾವಿರ ಜನರಿಗೆ ಉದ್ಯೋಗ ನೀಡುವುದು ಸಣ್ಣ ವಿಚಾರವಲ್ಲ. ಸರ್ಕಾರದಿಂದ ಮಾಡಲಾಗದ ಕೆಲಸ ನೀವು ಮಾಡುತ್ತಿದ್ದೀರಿ. ನಿಮಗೆ ಅಭಿನಂದನೆ ಸಲ್ಲಿಸಲು ನಾನು ಬಂದಿದ್ದೇನೆ.
ನಮ್ಮ ಸರ್ಕಾರ ನಿಮ್ಮ ಜತೆ ನಿಲ್ಲಲಿದೆ. ಜನಸಾಮಾನ್ಯರ ಆರೋಗ್ಯ ಕಾಪಾಡಲು ಸರ್ಕಾರಿ ಆಸ್ಪತ್ರೆಗಳು ಇವೆ. ಕರ್ನಾಟಕ ಹೆಲ್ತ್ ಟೂರಿಸಂ ಪ್ರಮುಖ ರಾಜ್ಯವಾಗಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜು ಹೊಂದಿರುವ ರಾಜ್ಯ ಎಂದರೆ ಅದು ಕರ್ನಾಟಕ. ನಮ್ಮ ರಾಜ್ಯದಲ್ಲಿ 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಪ್ರತಿ ವರ್ಷ 13 ಸಾವಿರ ವಿದ್ಯಾರ್ಥಿಗಳು ಮೆಡಿಕಲ್ ವ್ಯಾಸಂಗ ಮಾಡುತ್ತಾರೆ. 1 ಲಕ್ಷಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಸಿಬ್ಬಂದಿ ತಯಾರು ಮಾಡಲಾಗುತ್ತಿದೆ. ಇದು ನಮ್ಮ ಶಕ್ತಿ. ಇಲ್ಲಿ ತಯಾರಾದ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ವಿಶ್ವದ ಹಲವು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟಾದರೂ ಬೆಂಗಳೂರಿನಲ್ಲಿ ಮೆಡಿಕಲ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದರು.
ನಂತರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಮೆಡಿಕೇರ್ ಆಸ್ಪತ್ರೆಯು ದಕ್ಷಿಣ ಭಾರತದಲ್ಲಿ ತನ್ನ ಜಾಲ ವಿಸ್ತರಿಸಿದ್ದು, ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಹೊಂದಿದೆ. ಅವುಗಳನ್ನು ನಾನು ಕಣ್ಣಾರೆ ನೋಡಿದೆ” ಎಂದರು.
ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತೇವೆ
ಸಿದ್ದರಾಮಯ್ಯ ಅವರ ವಿರುದ್ಧದ ವಿಚಾರಣೆ ಸಂಬಂಧ ಕಾಂಗ್ರೆಸ್ ಪಕ್ಷದ ನಿಲುವೇನು ಎಂದು ಕೇಳಿದಾಗ, “ನಮ್ಮ ಪಕ್ಷ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಲಿದೆ. ಅವರು ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ಬಿಜೆಪಿಯಿಂದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲಿ ಎಲ್ಲೆಲ್ಲಿ ವಿರೋಧ ಪಕ್ಷಗಳ ಸರ್ಕಾರ ಇದೆಯೋ ಅಲ್ಲೆಲ್ಲಾ ಷಡ್ಯಂತ್ರ ರೂಪಿಸಲಾಗುತ್ತಿದೆ. ನನ್ನ ಮೇಲೂ ಷಡ್ಯಂತ್ರ ರೂಪಿಸಿದ್ದರು. ನಾನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೆ” ಎಂದು ತಿಳಿಸಿದರು.
ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಕಾಲದಲ್ಲಿನ ಅಕ್ರಮಗಳ ಬಗ್ಗೆ ಮಾಜಿ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅವರು ಮೊದಲು ಆ ನಾಯಕರ ವಿಚಾರದಲ್ಲಿ ತೀರ್ಮಾನ ಮಾಡಲಿ. ಆನಂತರ ಈ ವಿಚಾರವಾಗಿ ಆಗ್ರಹ ಮಾಡಲಿ” ಎಂದರು.
ಹೈಕಮಾಂಡ್ ಜತೆ ನಿರಂತರ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ, “ಪ್ರತಿನಿತ್ಯ ನಾನು ಹೈಕಮಾಂಡ್ ನಾಯಕರ ಜತೆ ಸಂಪರ್ಕದಲ್ಲಿರುತ್ತೇನೆ. ನನ್ನ ಪಕ್ಷದ ಗ್ರಾಮ ಮಟ್ಟದ ನಾಯಕರಿಂದ ದೆಹಲಿ ಮಟ್ಟದ ನಾಯಕರ ವರೆಗೂ ಎಲ್ಲರ ಸಂಪರ್ಕದಲ್ಲಿರುತ್ತೇನೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ