ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : *ಬಿಬಿಎಂಪಿ ಗುತ್ತಿಗೆದಾರರ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಡೀ ವ್ಯವಹಾರದ ಆಳ – ಅಗಲಗಳನ್ನು ಬಿಚ್ಚಿಟ್ಟಿದ್ದಾರೆ.
ಅಧಿಕಾರಿಗಳು ತಮ್ಮ ಲಾಭದ ಲೆಕ್ಕಾಚಾರಕ್ಕೆ ಪ್ಯಾಕೆಜ್ ವ್ಯವಸ್ಥೆ ಮಾಡಿದ್ದಾರೆ. ರಾಜಕೀಯದವರ ಮಧ್ಯೆ ನೀವು ಎಚ್ಚರಿಕೆಯಿಂದ ಇರಿ. ಅದು ಯಾವುದೇ ಪಕ್ಷದವರಾಗಿರಲಿ. ನೀವು ರಾಜಕೀಯದ ಮಾತುಗಳಿಗೆ ಬಲಿಯಾಗಬೇಡಿ ಎಂಬ ಕಿವಿ ಮಾತು ಹೇಳುತ್ತೇನೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ನಿಮ್ಮನ್ನು ಬಲಿ ಕೊಡುತ್ತಾರೆ. ನೀವು ಕಷ್ಟಕ್ಕೆ ಸಿಲುಕಿದಾಗ ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಅವರ ಭಾಷಣದ ಪೂರ್ಣ ವಿವರ ಇಲ್ಲಿದೆ:
ನಾನು ನಿಮ್ಮ ಸಮಸ್ಯೆಗಳನ್ನು ಒಂದೇ ದಿನ ನಿವಾರಣೆ ಮಾಡಲು ಆಗುವುದಿಲ್ಲ. ಬೆಂಗಳೂರಿನಲ್ಲಿ ಬಹಳ ಕೊಳೆ ಇದೆ. ಇದನ್ನು ಹಂತ ಹಂತವಾಗಿ ಸ್ವಚ್ಛ ಮಾಡಬೇಕು. ನಾನು ಶಾಲೆಯಲ್ಲಿದ್ದಾಗ ಶಾಸಕನಾಗಬೇಕು ಎಂಬ ಆಸೆ ಬಂದಿತು. ನಮ್ಮ ಅಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆ ಇತ್ತು. ನನಗೆ ರಾಜಕಾರಣಿಯಾಗುವ ಆಸೆ.
ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಇಂಧನ ಸಚಿವನಾಗಿದ್ದಾಗ ಇಂಜಿನಿಯರ್ ಗಳನ್ನ ನೋಡಿದ್ದೇನೆ. ನೀವು ಇಂಜಿನಿಯರ್ ಗಳ ರಾಜಕಾರಣದಲ್ಲಿ ಸಿಲುಕಿ ಬೆಂದು ಹೋಗಿದ್ದೀರಿ. ಅಧಿಕಾರಿಗಳಿಗೆ ಸ್ವಲ್ಪವೂ ಮಾನವೀಯತೆ ಇಲ್ಲವಾಗಿದೆ. ಕೆಂಪಣ್ಣ ಅವರು ನನ್ನನ್ನು ಮಗನಂತೆ ಕೂರಿಸಿಕೊಂಡು ಈಗಿರುವ ವ್ಯವಸ್ಥೆ ಬಗ್ಗೆ ಪಾಠ ಮಾಡಿದ್ದಾರೆ.
ನಾವು ಸುಳಿಯಲ್ಲಿ ಸಿಕ್ಕಂತೆ ಆಗಿದೆ. ನೀವು ಬಯಸಿದಂತೆ ಉತ್ತಮ ವ್ಯವಸ್ಥೆ ಜಾರಿಗೆ ತರಬೇಕಾಗಿದೆ. ಅಧಿಕಾರಿಗಳು ತಮ್ಮ ಲಾಭದ ಲೆಕ್ಕಾಚಾರಕ್ಕೆ ಪ್ಯಾಕೆಜ್ ವ್ಯವಸ್ಥೆ ಮಾಡಿದ್ದಾರೆ.
ರಾಜಕೀಯದವರ ಮಧ್ಯೆ ನೀವು ಎಚ್ಚರಿಕೆಯಿಂದ ಇರಿ. ಅದು ಯಾವುದೇ ಪಕ್ಷದವರಾಗಿರಲಿ. ನೀವು ರಾಜಕೀಯದ ಮಾತುಗಳಿಗೆ ಬಲಿಯಾಗಬೇಡಿ ಎಂಬ ಕಿವಿ ಮಾತು ಹೇಳುತ್ತೇನೆ.
ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ನಿಮ್ಮನ್ನು ಬಲಿ ಕೊಡುತ್ತಾರೆ. ನೀವು ಕಷ್ಟಕ್ಕೆ ಸಿಲುಕಿದಾಗ ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ.
ಎಲ್ಲಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಗುತ್ತಿಗೆದಾರರು ಹೇಗೆ ಸಂಕಷ್ಟ ಅನುಭವಿಸುತ್ತಾರೆ ಎಂಬ ಅನುಭವ ನಮಗಿದೆ.
ಈ ವ್ಯವಸ್ಥೆಯಲ್ಲಿ ಏನಾದರೂ ಮಾಡಿ ಬದಲಾವಣೆ ಮಾಡಬೇಕು. ಇಲ್ಲಿ ನೀವು ಹೂವಿನ ಹಾರ ಹಾಕಿ, ಮನವಿ ಕೊಟ್ಟು ಭಾರ ಹೋರೆಸಿದ್ದೀರಿ.
ನಾನು ಬೆಂಗಳೂರಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯಿಂದ ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ಬೆಂಗಳೂರಿನಲ್ಲಿ ಪ್ರವಾಸಿಗರು ವೀಕ್ಷಣೆ ಮಾಡುವಂತಹ ಸ್ಥಳ ಇಲ್ಲ. ಹಿಂದೆ ವಿಧಾನಸೌಧ ಹಾಗೂ ಒಂದೆರಡು ಕಟ್ಟಡ ಮಾತ್ರ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ಕೇವಲ 3 ಸಾವಿರ ಕೋಟಿ ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಆಸ್ತಿ ಸಮೀಕ್ಷೆ ಮಾಡುತ್ತಿದ್ದೇವೆ.
ಕೆಲವರು ತಮ್ಮ ಆಸ್ತಿ ಸರಿಯಾಗಿ ಘೋಷಿಸಿಕೊಳ್ಳದೆ ತೆರಿಗೆ ಪಾವತಿ ಮಾಡುತ್ತಿಲ್ಲ.
ಮನೆ ಕಟ್ಟಲು ಆರ್ಕಿಟೆಕ್ಚರ್ ಗಳೆ ಯೋಜನೆ ಅನುಮೋದನೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ನಮ್ಮ ಈ ಕ್ರಮಗಳಿಂದ 3 ಸಾವಿರ ಕೋಟಿ ಇರುವ ಆಸ್ತಿ ತೆರಿಗೆ ಪ್ರಮಾಣ, 6-8 ಸಾವಿರ ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಆಸ್ತಿ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ ಸಣ್ಣ ಪುಟ್ಟ ಆಸ್ತಿಗಳಿಗೆ ವಿನಾಯಿತಿ ನೀಡಿ ಕಡಿಮೆ ತೆರಿಗೆ ಕಟ್ಟುವಂತೆ ಮಾಡಲಾಗುವುದು.
ನಮ್ಮ ಸರ್ಕಾರ ಜನರ ಬೆಲೆ ಏರಿಕೆ ಒತ್ತಡ ಇಳಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಹೀಗಾಗಿ ಪ್ರತಿ ವರ್ಷ 60 ಸಾವಿರ ಕೋಟಿ ಮೀಸಲಿಡಬೇಕು.
ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 80 ಲಕ್ಷ ಇತ್ತು. ಈಗ 1.40 ಕೋಟಿ ಆಗಿದೆ.
ಇವರಿಗೆ ಕುಡಿಯುವ ನೀರು, ಒಳಚರಂಡಿ, ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಬೇಕು.
ನನ್ನ ಬದುಕಿನಲ್ಲಿ ಏನಾದರೂ ಗುರುತು ಬಿಟ್ಟು ಹೋಗಬೇಕು ಬೆಂಗಳೂರು ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ನಿಮ್ಮ ಸಮಸ್ಯೆ ಏನೇ ಇದ್ದರೂ ನನ್ನ ಬಳಿ ಬಂದು ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ. ಬೇರೆಯವರ ಮಾತು ಕೇಳಿ ಪ್ರತಿಭಟನೆ ಮಾಡಿದರೆ ಈ ತಂತ್ರಕ್ಕೆ ನಾನು ಬಗ್ಗುವುದಿಲ್ಲ.
ನೀರಾವರಿ ಇಲಾಖೆಯಲ್ಲಿ ಒಂದೂಕಾಲು ಲಕ್ಷ ಕೋಟಿ ಕೆಲಸ ನಡೆಯುತ್ತಿದೆ. ಅದಕ್ಕೆಲ್ಲಿಂದ ಹಣ ತರಬೇಕು?
ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ಕೇಳಲಾಗದು. ಹೀಗಾಗಿ ಈ ವ್ಯವಸ್ಥೆ ಒಂದು ಸುಧಾರಣೆ ತರುವ ಪ್ರಯತ್ನ ಮಾಡುತ್ತಿದ್ದೇವೆ.
ಹಣ ಇದ್ದಷ್ಟು ಕೆಲಸ ಮಾಡಬೇಕು. ಆದರೆ ಆ ರೀತಿ ಆಗಿಲ್ಲ. ಹೀಗಾಗಿ ಈ ಸಮಸ್ಯೆ ಉದ್ಭವಿಸಿದೆ.
ಸಿದ್ದರಾಮಯ್ಯ ಅವರ ಕಳೆದ ಅವಧಿಯಲ್ಲಿ ಹಾಗೂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲೂ ಬಿಲ್ ವಿಚಾರವಾಗಿ ಇಷ್ಟು ಸಮಸ್ಯೆ ಆಗಿರಲಿಲ್ಲ. ಈಗ 2-3 ವರ್ಷಗಳ ಬಿಲ್ ಬಾಕಿ ಇವೆ.
ಪರಿಸ್ಥಿತಿ ಹೇಗಾಗಿದೆ ಎಂದರೆ ಮನೆ ಕಟ್ಟುವ ಮುನ್ನ ಬಣ್ಣ ಹೊಡೆಯುವವನಿಗೆ ಗುತ್ತಿಗೆ ಕೊಟ್ಟಂತೆ ಆಗಿದೆ.
ಪರಿಷತ್ ಚುನಾವಣೆ ನಂತರ ನಿಮ್ಮ ಪದಾಧಿಕಾರಿಗಳನ್ನು ಕರೆಸಿ ಅಭಿಪ್ರಾಯ ಪಡೆದು, ನಂತರ ಅಧಿಕಾರಿಗಳ ಸಭೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ