ಪ್ರಗತಿವಾಹಿನಿ ಸುದ್ದಿ; ಆಗ್ರಾ: ಅನಾರೋಗ್ಯದಿಂದ ಸಾವನ್ನಪ್ಪಿದ ಬಿಜೆಪಿ ಮುಖಂಡರೊಬ್ಬರು ಇನ್ನೇನು ಅಂತ್ಯಕ್ರ್ರಿಯೆ ಮಾಡಬೇಕು ಅನ್ನುವಷ್ಟರಲ್ಲಿ ಕಣ್ತೆರೆದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಆಗ್ರಾದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಮಹೇಶ್ ಬಾಘೇಲ್ ಎಂಬುವವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಸಮಯದ ಚಿಕಿತ್ಸೆ ಬಳಿಕ ವೈದ್ಯರು ಮಹೇಶ್ ಬಾಘೇಲ್ ಮೃತಪಟ್ಟಿದ್ದಾಗಿ ಕುಟುಂಬ ಸದಸ್ಯರಿಗೆ ತಿಳಿಸಿದ್ದರು. ಇದರಿಂದ ದು:ಖದಲ್ಲಿಯೇ ಆಸ್ಪತ್ರೆಗೆ ಧಾವಿಸಿದ ಕುಟುಂಬ ಸದಸ್ಯರು ಮೃತದೇಹವನ್ನು ಮನೆಗೆ ತಂದು ಅಂತ್ಯ ಸಂಸ್ಕರದ ಸಿದ್ಧತೆ ನಡೆಸಿದ್ದರು.
ಅಂತಿಮ ವಿಧಿ-ವಿಧಾನ ನೆರವೇರಿಸಿ, ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಮಹೇಶ್ ಬಾಘೇಲ್ ದೇಹದಲ್ಲಿ ಚಲನವಲನ ಕಂಡುಬಂದಿದೆ. ಬಾಘೇಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಆದರೆ ಮೃತದೇಹ ಅಲುಗಾಡುತ್ತಿರುವುದು ಕಂಡು ಕುಟುಂಬದವರು ಶಾಕ್ ಆಗಿದ್ದಾರೆ. ಮತ್ತೆ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ ತಪಾಸಣೆ ನಡೆಸಿದ ವೈದ್ಯರು, ಮಹೇಶ್ ಬಾಘೇಲ್ ಬದುಕಿರುವುದಾಗಿ ಹೇಳಿದ್ದಾರೆ. ಅಲ್ಲದೇ ಅವರ ಬಿಪಿ ಕೂಡ ನಾರ್ಮಲ್ ಸ್ಥಿತಿಗೆ ಬಂದಿರುವುದನ್ನು ತಿಳಿಸಿದ್ದಾರೆ. ಮನೆಯ ಹಿರಿಯಜೀವವನ್ನು ಕಳೆದುಕೊಂಡೆವು ಎಂಬ ದು:ಖದಲ್ಲಿದ್ದ ಕುಟುಂಬ ಸದಸ್ಯರಿಗೆ ಬಾಘೇಲ್ ಬದುಕಿರುವ ಸುದ್ದಿ ತಿಳಿದು ಸಂತಸವಾಗಿದೆ.
ಮಹೇಶ್ ಬಾಘೇಲ್ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಅವರ ಸಹೋದರ ಲಖನ್ ಸಿಂಗ್ ಬಾಘೇಲ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ